Sunday, 11th May 2025

ತಾನು ರಾಷ್ಟ್ರಪತಿ ಸ್ಥಾನಕ್ಕೆ ರೇಸ್‌ನಲ್ಲಿ ಇಲ್ಲ: ನಿತೀಶ್ ಕುಮಾರ್

ಪಟ್ನಾ: ರಾಷ್ಟ್ರಪತಿ ಚುನಾವಣೆಯಲ್ಲಿ ಎನ್‌ಡಿಎ ಅಭ್ಯರ್ಥಿಯಾಗಿ ನಿತೀಶ್ ಕುಮಾರ್ ಅವರನ್ನು ನಿಲ್ಲಿಸಲಾಗುತ್ತದೆ ಎಂಬ ಸುದ್ದಿ ಯನ್ನು ಬಿಹಾರ ಮುಖ್ಯಮಂತ್ರಿ ಅಲ್ಲಗಳೆದಿದ್ದು, ತಾನು ರಾಷ್ಟ್ರಪತಿ ಸ್ಥಾನಕ್ಕೆ ರೇಸ್‌ನಲ್ಲಿ ಇಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

“ಮುಂದಿನ ರಾಷ್ಟ್ರಪತಿಯಾಗುವ ಪೈಪೋಟಿಯಲ್ಲಿ ನಾನಿಲ್ಲ. ಬಿಹಾರ ಬಿಟ್ಟು ಎಲ್ಲೂ ಹೋಗಲ್ಲ. ಈ ವರದಿ ಬರೀ ವದಂತಿ ಅಷ್ಟೇ,” ಎಂದು ಹೇಳಿದರು.

ನಾಲ್ಕು ತಿಂಗಳ ಹಿಂದೆಯೇ ಮಹಾರಾಷ್ಟ್ರದ ಎನ್‌ಸಿಪಿ ಮುಖಂಡ ನವಾಬ್ ಮಲಿಕ್ ನಿತೀಶ್ ಕುಮಾರ್ ರಾಷ್ಟ್ರಪತಿಯಾಗಬೇಕು ಎಂಬ ಮಾತುಗಳನ್ನು ಆಡಿದ್ದರು. ಬಿಜೆಪಿ ಸಖ್ಯ ತೊರೆದರೆ ರಾಷ್ಟ್ರಪತಿ ಸ್ಥಾನಕ್ಕೆ ನಿತೀಶ್ ಕುಮಾರ್ ಅವರಿಗೆ ಎನ್‌ಸಿಪಿ ಬೆಂಬಲ ನೀಡುತ್ತದೆ ಎಂದು ಮಲಿಕ್ ಹೇಳಿದ್ದರು.

ಜುಲೈ 18ರಂದು ರಾಷ್ಟ್ರಪತಿ ಚುನಾವಣೆ ನಡೆಯಲಿದೆ ಎಂದು ಚುನಾವಣಾ ಆಯೋಗ ಕಳೆದ ವಾರ ಘೋಷಣೆ ಮಾಡಿದೆ. ಬಿಹಾರದ ಸಚಿವ ಶ್ರವಣ್ ಕುಮಾರ್ ಅವರು ರಾಷ್ಟ್ರಪತಿ ಸ್ಥಾನಕ್ಕೆ ನಿತೀಶ್ ಕುಮಾರ್ ಒಳ್ಳೆಯ ಅಭ್ಯರ್ಥಿ ಎಂದು ಅಭಿಪ್ರಾಯ ಪಟ್ಟಿದ್ದರು.

ಇದೇ ವೇಳೆ, ರಾಷ್ಟ್ರಪತಿ ಸ್ಥಾನಕ್ಕೆ ಲಾಲೂ ಪ್ರಸಾದ್ ಯಾದವ್ ಹೆಸರು ಕೇಳಿಬಂದಿದೆ. ಆದರೆ, ಇದು ಬಿಹಾರದ ಮಾಜಿ ಸಿಎಂ ಲಾಲೂ ಪ್ರಸಾದ್ ಯಾದವ್ ಅಲ್ಲ, ಬದಲಾಗಿ ಅವರದೇ ಹೆಸರು ಹೊಂದಿರುವ ಇನ್ನೊಬ್ಬ ವ್ಯಕ್ತಿ. ಬಿಹಾರದ ಸಾರನ್ ಜಿಲ್ಲೆಯ 42 ವರ್ಷದ ಲಾಲೂ ಪ್ರಸಾದ್ ಯಾದವ್, ಕಳೆದ ಬಾರಿಯ ರಾಷ್ಟ್ರಪತಿ ಚುನಾವಣೆಯಲ್ಲೂ ಸ್ಪರ್ಧೆ ಮಾಡಲು ಹೊರಟಿದ್ದರು.

ಚುನಾವಣಾ ಆಯೋಗ ಪ್ರಕಟಿಸಿರುವ ಪ್ರಕಾರ ರಾಷ್ಟ್ರಪತಿ ಚುನಾವಣೆ ಜುಲೈ 18ರಂದು ನಡೆಯಲಿದೆ. ಜುಲೈ 21ಕ್ಕೆ ಫಲಿತಾಂಶ ಪ್ರಕಟವಾಗಲಿದೆ. ದೇಶದ ಎಲ್ಲಾ ರಾಜ್ಯಗಳ ಸಂಸದರು, ಶಾಸಕರು ಸೇರಿ ಒಟ್ಟು 4,809 ಮಂದಿ ಮತದಾನದ ಹಕ್ಕು ಹೊಂದಿದ್ದಾರೆ.