Monday, 12th May 2025

ಭಯೋತ್ಪಾದನೆಗೆ ಸಂಚು: ಜಮ್ಮು-ಕಾಶ್ಮೀರದಾದ್ಯಂತ ಎನ್‌ಐಎ ದಾಳಿ

ಶ್ರೀನಗರ: ಭಯೋತ್ಪಾದನೆಗೆ ಸಂಚು ನಡೆಸಲಾಗಿದೆ ಎನ್ನಲಾದ ಪ್ರಕರಣಕ್ಕೆ ಸಂಬಂಧಿಸಿ ತನಿಖೆ ನಡೆಸುತ್ತಿರುವ ರಾಷ್ಟ್ರೀಯ ತನಿಖಾ ತಂಡವು (ಎನ್‌ಐಎ) ಜಮ್ಮು ಮತ್ತು ಕಾಶ್ಮೀರದಾದ್ಯಂತ ಹಲವಾರು ಸ್ಥಳಗಳಲ್ಲಿ ದಾಳಿ ನಡೆಸಿತು.

ಅನಂತ್‌ನಾಗ್‌, ಕುಲ್ಗಾಮ್‌, ಪುಲ್ವಾಮ, ಶ್ರೀನಗರ ಜಿಲ್ಲೆಯ ಒಂಬತ್ತು ಸ್ಥಳಗಳಲ್ಲಿ ಜಮ್ಮು ಮತ್ತು ಕಾಶ್ಮೀರ ಪೊಲೀಸರು ಮತ್ತು ಕೇಂದ್ರೀಯ ಮೀಸಲು ಪೊಲೀಸ್‌ ಪಡೆ (ಸಿಆರ್‌ಪಿಎಫ್‌) ಸಹಯೋಗದೊಂದಿಗೆ ಎನ್‌ಐಎ ದಾಳಿ ನಡೆಸಿತು.

ಅಲ್ಪಸಂಖ್ಯಾತರು, ಭದ್ರತಾ ಸಿಬ್ಬಂದಿ ಗುರಿಯಾಗಿಸಿಕೊಂಡು ಸೈಬರ್‌ ದಾಳಿ ನಡೆಸುವ ಸಂಚಿನಲ್ಲಿ ಶಂಕಿತರು ಭಾಗಿಯಾಗಿದ್ದಾರೆ. ಜೊತೆಗೆ, ಕೋಮು ಸೌಹಾರ್ದತೆಗೆ ಧಕ್ಕೆ ತರುವ ಕೆಲಸದಲ್ಲಿ ನಿರತರಾಗಿದ್ದರು ಎಂಬ ಆರೋಪದ ಮೇಲೆ ಜಮ್ಮುವಿನ ಎನ್‌ಐಎ ಕಚೇರಿಯಲ್ಲಿ 2022ರಲ್ಲಿ ಪ್ರಕರಣ ದಾಖಲಾಗಿತ್ತು ಎಂದು ಮೂಲ ಗಳು ತಿಳಿಸಿವೆ.

ಶ್ರೀನಗರದ ಹೊರ ವಲಯದಲ್ಲಿದ್ದ ಜುನೈದ್‌ ತೇಲಿ ಎಂಬಾತನ ಮನೆಯ ಮೇಲೆ ದಾಳಿ ನಡೆಸಲಾಯಿತು. ಈ ವೇಳೆ ಒಂದು ಮೊಬೈಲ್‌ ಫೋನ್‌ ಮತ್ತು ಕೆಲ ದಾಖಲೆಗಳನ್ನು ವಶಪಡಿಸಿಕೊಳ್ಳಲಾಯಿತು.

ಪುಲ್ವಾಮದಲ್ಲಿದ್ದ ಝೀಶನ್ ಅಲ್ತಾಫ್‌ ಮತ್ತು ಆರಿಫ್‌ ಮಲಿಕ್‌ ಎಂಬುವವರ ಮನೆಗಳು ಮತ್ತು ಕುಲ್ಗಾಮದಲ್ಲಿಯ ಅಲ್ತಾಫ್‌ ಅಹ್ಮದ್‌ ವಗಾಯ್‌, ಫಾರುಖ್‌ ಅಹ್ಮದ್‌ ದಾರ್‌, ಆರ್ಶಫ್‌ ಅಹ್ಮದ್‌ ಶೇಖ್‌ ಎಂಬುವವರ ಮನೆಗಳ ಮೇಲೆ ದಾಳಿ ನಡೆಸಿ ಶೋಧ ಕಾರ್ಯಾಚರಣೆ ಕೈಗೊಳ್ಳಲಾಯಿತು.

ಅನಂತ್‌ನಾಗ್‌ ಮತ್ತು ಶೋಪಿಯಾನ್‌ನಲ್ಲಿಯ ಶಂಕಿತರರ ನಿವಾಸಗಳನ್ನೂ ಶೋಧ ಕಾರ್ಯಾಚರಣೆಗೆ ಒಳಪಡಿಸಲಾಯಿತು ಎನ್ನಲಾಗಿದೆ.

Read E-Paper click here