ಹೊಸದಿಲ್ಲಿ: ನವಜಾತ ಶಿಶುಗಳು ಹುಟ್ಟಿದ ತಕ್ಷಣ ಅಳಲು ಪ್ರಾರಂಭಿಸುತ್ತವೆ (New Born Baby Tears). ಸಾಮಾನ್ಯವಾಗಿ ಪದೇ ಪದೆ ಅಳುತ್ತವೆ. ಆದರೆ ಅವುಗಳ ಕಣ್ಣಲ್ಲಿ ಒಂದು ಹನಿ ಕೂಡ ಕಣ್ಣೀರು ಸುರಿಯುವುದಿಲ್ಲ. ಇದು ಕೆಲವೊಮ್ಮೆ ಪೋಷಕರ ಆತಂಕಕ್ಕೂ ಕಾರಣವಾಗುತ್ತದೆ. ನವಜಾತ ಶಿಶುಗಳು ಅಳುವಾಗ ಕಣ್ಣಲ್ಲಿ ನೀರು ಬಾರದೇ ಇರಲು ಕಾರಣವೂ ಇದೆ.
ಹಸಿವಾದಾಗ, ಮಲಮೂತ್ರ ಬಂದಾಗ, ಸೆಕೆ, ಚಳಿ ಆದಾಗ… ಹೀಗೆ ಒಂದಲ್ಲ ಒಂದು ಕಾರಣಕ್ಕೆ ನವಜಾತ ಶಿಶುಗಳು ಅಳುತ್ತಾ ಇರುತ್ತವೆ. ಎಷ್ಟೋ ಬಾರಿ ಅವುಗಳು ಯಾಕೆ ಅಳುತ್ತವೆ ಎನ್ನುವುದು ಯಾರಿಗೂ ಗೊತ್ತಾಗುವುದಿಲ್ಲ. ಸಾಮಾನ್ಯವಾಗಿ ನವಜಾತ ಶಿಶುಗಳು ಕೆಲವೊಮ್ಮೆ ಅರ್ಧ, ಒಂದು ಗಂಟೆ ಕಾಲ ಅಳುತ್ತವೆ. ಆದರೆ ಅವುಗಳ ಕಣ್ಣಲ್ಲಿ ಒಂದು ಹನಿ ಕೂಡ ನೀರು ಇಳಿಯುವುದಿಲ್ಲ. ಅವರ ಮುಖ ಅತ್ತುಅತ್ತು ಕೆಂಪಗಾದರೂ ಕಣ್ಣೀರು ಇಳಿಯುವುದಿಲ್ಲ. ಯಾಕೆ ಹೀಗೆ, ಅದು ಹೇಗೆ ಸಾಧ್ಯ ಎಂಬುದು ಗೊತ್ತಿದೆಯೇ?
ಮಗು ಹುಟ್ಟಿದ ಒಂದೆರಡು ವಾರಗಳ ಬಳಿಕ ಅಥವಾ ಅದಕ್ಕಿಂತ ಹೆಚ್ಚು ದಿನಗಳಾದ ಬಳಿಕ ಕಣ್ಣೀರು ಹಾಕಲು ಪ್ರಾರಂಭಿಸುತ್ತವೆ. ಮಗುವಿನ ಆರ್ದ್ರ ಕಣ್ಣುಗಳು ಸಾಮಾನ್ಯವಾಗಿ ಸುಮಾರು 3 ತಿಂಗಳ ಬಳಿಕ ಕಾಣಿಸಿಕೊಳ್ಳುತ್ತವೆ.
ಮಗುವಿಗೆ ಕಣ್ಣೀರು ಏಕೆ ಬರುವುದಿಲ್ಲ ?
ಮಗು ಹುಟ್ಟಿದ ಮೊದಲ ಎರಡು ವಾರಗಳವರೆಗೆ ಅಳುವಾಗ ಕಣ್ಣೀರು ಬರುವುದಿಲ್ಲ. ಕಣ್ಣೀರನ್ನು ಉತ್ಪಾದಿಸುವ ಕಣ್ಣಿನ ಲ್ಯಾಕ್ರಿಮಲ್ ಗ್ರಂಥಿಗಳು ನವಜಾತ ಶಿಶುಗಳು ಹುಟ್ಟಿದ ಕೆಲವು ದಿನಗಳ ಬಳಿಕ ಬೆಳವಣಿಗೆಯಾಗುತ್ತದೆ. ಲ್ಯಾಕ್ರಿಮಲ್ ಗ್ರಂಥಿಗಳು ಕಣ್ಣೀರನ್ನು ಉಂಟು ಮಾಡುತ್ತವೆ. ಕೆಲವು ಶಿಶುಗಳಲ್ಲಿ ಮಾತ್ರ ಹುಟ್ಟಿದಾಗಲೇ ಕಣ್ಣೀರು ಬಂದರೆ ಬಹುತೇಕ ಶಿಶುಗಳಲ್ಲಿ ಇದು ಕೆಲವು ವಾರಗಳ ಕಾಲ ಸಮಯ ತೆಗೆದುಕೊಳ್ಳುತ್ತದೆ.
ನವಜಾತ ಶಿಶುಗಳಲ್ಲಿ ಸುಮಾರು 2 ವಾರಗಳ ಬಳಿಕ ಲ್ಯಾಕ್ರಿಮಲ್ ಗ್ರಂಥಿಗಳು ಕಣ್ಣೀರಿನ ಉತ್ಪಾದನೆಯನ್ನು ಪ್ರಾರಂಭಿಸುತ್ತವೆ. ಹೀಗಾಗಿ 1 ರಿಂದ 3 ತಿಂಗಳ ನಡುವೆ ಶಿಶುಗಳು ಅಳುವಾಗ ಹೆಚ್ಚು ಉಪ್ಪು ಸಹಿತ ಕಣ್ಣೀರನ್ನು ಹೊರಹಾಕುತ್ತವೆ.

ಮಗು ಹುಟ್ಟಿದ ತಕ್ಷಣ ಕಣ್ಣೀರು ಬರುವುದು ಸಹಜವೇ?
ನವಜಾತ ಶಿಶುವಿನ ಲ್ಯಾಕ್ರಿಮಲ್ ಗ್ರಂಥಿಗಳು ಸಂಪೂರ್ಣವಾಗಿ ಅಭಿವೃದ್ಧಿ ಹೊಂದುವ ಮೊದಲು ಕಣ್ಣೀರು ಹಾಕುವುದು ಅಸಾಧ್ಯ. ಇದಕ್ಕೆ ಕನಿಷ್ಠ 2 ವಾರ ಸಮಯ ತೆಗೆದುಕೊಳ್ಳುತ್ತವೆ.
ಅಳದೇ ಇದ್ದಾಗಲೂ ಕಣ್ಣೀರು ಹರಿಯುವುದೇ ?
ಕೆಲವೊಮ್ಮೆ ಶಿಶುಗಳು ಅಳದೇ ಇದ್ದರೂ ಕಣ್ಣೀರು ಹರಿಯುತ್ತದೆ. ಇದಕ್ಕೆ ಮುಖ್ಯ ಕಾರಣ ನಿರ್ಬಂಧಿಸಿದ ಕಣ್ಣೀರಿನ ನಾಳ. ಇವು ಮಗುವಿನ ಕಣ್ಣುಗಳು ಅವರು ಅಳದೇ ಇರುವ ಸಮಯದಲ್ಲಿ ಸಕ್ರಿಯವಾಗಿ ಕಣ್ಣೀರು ಹರಿಯುವಂತೆ ಮಾಡುತ್ತವೆ. ಇದು ಕೆಲವೊಮ್ಮೆ ಹೆಚ್ಚು ಕಣ್ಣೀರು ಬರಲು ಅಥವಾ ನಿರಂತರವಾಗಿ ಕಣ್ಣೀರು ಹರಿಯಲು ಕಾರಣವಾಗುತ್ತದೆ. ಈ ಸಮಸ್ಯೆ ಕ್ರಮೇಣ ಬಗೆ ಹರಿಯುತ್ತದೆ.
ಮಗುವಿನ ಕಣ್ಣಿನ ಮೂಲೆಯು ಸೋಂಕಿಗೆ ಒಳಗಾದರೆ ಕಣ್ಣೀರಿನ ನಾಳವು ಮುಚ್ಚಿಹೋಗುತ್ತದೆ. ಇದನ್ನು ಡಕ್ರಿಯೋಸಿಸ್ಟೈಟಿಸ್ ಎಂದು ಕರೆಯಲಾಗುತ್ತದೆ. ಇದು ಶಿಶುಗಳಿಗೆ ಗಂಭೀರವಾಗಿರುತ್ತದೆ. ಇದಕ್ಕೆ ಚಿಕಿತ್ಸೆ ಅಗತ್ಯವಾಗುತ್ತದೆ.
ನವಜಾತ ಶಿಶುವಿನಲ್ಲಿ ಶೀತ ಅಥವಾ ಕಾಂಜಂಕ್ಟಿವಿಟಿಸ್ ನಂತಹ ವೈರಲ್ ಕಾಯಿಲೆ ಇದ್ದರೂ ಕೂಡ ಕಣ್ಣೀರಿನ ನಾಳ ಮುಚ್ಚಿ ಹೋಗಿರುತ್ತದೆ. ನವಜಾತ ಶಿಶುಗಳಲ್ಲಿ ಕಾಂಜಂಕ್ಟಿವಿಟಿಸ್ ಅಸಾಮಾನ್ಯವಾಗಿದೆ. ಇದಕ್ಕೆ ಶಿಶು ವೈದ್ಯರನ್ನು ಭೇಟಿ ಮಾಡುವುದು ಮುಖ್ಯವಾಗಿದೆ.

ಶಿಶುವಿನ ಒಂದೇ ಕಣ್ಣಲ್ಲಿ ಕಣ್ಣೀರು
ಸಾಮಾನ್ಯವಾಗಿ ಅಳುವಾಗ ಎರಡೂ ಕಣ್ಣಲ್ಲಿ ನೀರು ಬರುತ್ತದೆ. ಆದರೆ ಯಾವುದೇ ರೀತಿಯ ಸೋಂಕು ಕಾಣಿಸಿಕೊಂಡರೆ ಒಂದೇ ಕಣ್ಣಲ್ಲಿ ನೀರು ಬರುವುದು ಸಾಮಾನ್ಯವಾಗಿರುತ್ತದೆ. ನಿರ್ಬಂಧಿಸಲಾದ ಕಣ್ಣೀರಿನ ನಾಳವು ಕಣ್ಣೀರನ್ನು ಉಂಟು ಮಾಡುತ್ತದೆ. ಆದರೆ ಸಾಮಾನ್ಯವಾಗಿ ಯಾವುದೇ ರೋಗಲಕ್ಷಣಗಳನ್ನು ಹೊಂದಿರುವುದಿಲ್ಲ ಹೀಗಾಗಿ ವೈದ್ಯರನ್ನು ಭೇಟಿ ಮಾಡಬೇಕಾಗುತ್ತದೆ.
ಕಣ್ಣೀರು ಬಾರದೇ ಇರಲು ಕಾರಣ ?
ಹಲವು ತಿಂಗಳಾದರೂ ಮಗುವಿನ ಕಣ್ಣಲ್ಲಿ ನೀರು ಬಾರದೇ ಇರಲು ಹಲವು ಕಾರಣಗಳಿರುತ್ತವೆ. ಹೀಗಾಗಿ ವೈದ್ಯರನ್ನು ಭೇಟಿ ಮಾಡುವುದು ಮುಖ್ಯವಾಗಿದೆ. ಒಂದೊಮ್ಮೆ ಕಣ್ಣೀರು ಹರಿಸಿದ ಬಳಿಕ ಮತ್ತೆ ಕಣ್ಣೀರು ಹಾಕದೇ ಇದ್ದರೆ ಅದಕ್ಕೆ ನಿರ್ಜಲೀಕರಣವೂ ಕಾರಣವಾಗಿರಬಹುದು. ಇದು ಸಾಮಾನ್ಯವಾಗಿ ವಾಂತಿ, ಅತಿಸಾರ ಅಥವಾ ಕಳಪೆ ಆಹಾರದಿಂದ ಬರುತ್ತದೆ.
Gastroenteritis In Children: ಎಳೆಯ ಮಕ್ಕಳಲ್ಲಿ ದಿಢೀರ್ ಕಾಣಿಸಿಕೊಳ್ಳುತ್ತಿದೆ ಗ್ಯಾಸ್ಟ್ರೋಎಂಟರೈಟಿಸ್
ಹೀಗಾಗಿ ಮಗು ಪ್ರತಿದಿನ ಸಾಕಷ್ಟು ದ್ರವಹಾರವನ್ನು ಪಡೆಯುತ್ತಿದೆಯೆ ಎಂದು ಖಚಿತಪಡಿಸಿಕೊಳ್ಳಿ. ಶಿಶುಗಳಲ್ಲಿ ನಿರ್ಜಲೀಕರಣದ ಆರಂಭಿಕ ಲಕ್ಷಣಗಳು ಕಡಿಮೆ ಮೂತ್ರ ಮಾಡುವುದು, ಆಲಸ್ಯ, ಸಿಟ್ಟು, ಅಳುವಾಗ ಕಡಿಮೆ ಕಣ್ಣೀರು, ಕಣ್ಣಿನಲ್ಲಿ ತೊಂದರೆ, ಆನುವಂಶಿಕ ಅಸ್ವಸ್ಥತೆ, ದೇಹದ ಉಷ್ಣತೆಯಲ್ಲಿ ವ್ಯತ್ಯಾಸ, ಶ್ವಾಸಕೋಶದ ಸೋಂಕು ಇತ್ಯಾದಿ. ಈ ತೊಂದರೆಗಳು ಕಾಣಿಸಿಕೊಂಡರೆ ತಕ್ಷಣ ವೈದ್ಯರನ್ನು ಭೇಟಿ ಮಾಡಿ.