Wednesday, 14th May 2025

ನೀರವ್ ಮೋದಿಯ ಆಪ್ತ ಸುಭಾಷ್ ಶಂಕರ್ ಗಡೀಪಾರು, ಬಂಧನ

ನವದೆಹಲಿ: ಪಂಜಾಬ್ ನ್ಯಾಷನಲ್ ಬ್ಯಾಂಕ್ ವಂಚನೆ ಪ್ರಕರಣದಲ್ಲಿ ದೇಶ ತೊರೆದು ಪರಾರಿಯಾಗಿದ್ದ ವಜ್ರದ ವ್ಯಾಪಾರಿ ನೀರವ್ ಮೋದಿಯ ಆಪ್ತ ಸುಭಾಷ್ ಶಂಕರ್ ರನ್ನು ಈಜಿಪ್ಟ್‌ನಿಂದ ಮುಂಬೈಗೆ ಗಡಿಪಾರು ಮಾಡಲಾ ಗಿದ್ದು, ಬಂಧಿಸಲಾಗಿದೆ.

ಮುಂಬೈ ನ್ಯಾಯಾಲಯದ ಮುಂದೆ ಹಾಜರುಪಡಿಸಿದ ನಂತರ ಹೆಚ್ಚಿನ ವಿಚಾರಣೆಗೆ ಒಳಪಡಿಸಲಾಗುವುದು’ ಎಂದು ಸಿಬಿಐ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ನೀರವ್ ಮೋದಿ ಕಂಪನಿಯಲ್ಲಿ ಶಂಕರ್ ಅವರು ಹಣಕಾಸು ವಿಭಾಗದ ಡಿಜಿಎಂ ಆಗಿದ್ದರು. ಅವರ ವಿರುದ್ಧ ರೆಡ್ ಕಾರ್ನರ್ ನೋಟಿಸ್ ಜಾರಿ ಮಾಡಲಾಗಿತ್ತು. ₹7000 ಕೋಟಿಗಳ ಪಿಎನ್‌ಬಿಯ ಸಾಲ ವಂಚನೆ ಪ್ರಕರಣದ ಆರೋಪಿಗಳನ್ನು ಭಾರತಕ್ಕೆ ಕರೆತರಲು ಸಿಬಿಐ ದೀರ್ಘಕಾಲದಿಂದಲೂ ಪ‍್ರಯತ್ನಿಸುತ್ತಿದೆ.

ಸಿಬಿಐ ನಾಲ್ಕು ವರ್ಷಗಳ ಹಿಂದೆಯೇ ಸುಭಾಷ್‌ ಶಂಕರ್‌ ವಿರುದ್ಧ ಚಾರ್ಜ್ ಶೀಟ್ ಸಲ್ಲಿಸಿದೆ. ಸಿಬಿಐ ವಿಶೇಷ ನ್ಯಾಯಾಲಯ ಸುಭಾಷ್‌ ಶಂಕರ್‌ ವಿರುದ್ಧ ಬಂಧನ ವಾರಂಟ್ ಕೂಡ ಹೊರಡಿಸಿತ್ತು.

ಪಿಎನ್‌ಬಿ ಸಾಲ ವಂಚನೆ ಹಗರಣ ಬಯಲಾಗುತ್ತಲೇ 49 ವರ್ಷದ ಶಂಕರ್ ಅವರು ನೀರವ್ ಮೋದಿ ಮತ್ತು ಮೆಹುಲ್ ಚೋಕ್ಸಿ ಜೊತೆಗೆ 2018ರಲ್ಲಿ ವಿದೇಶಕ್ಕೆ ಪಲಾಯನ ಮಾಡಿದ್ದರು.