Thursday, 15th May 2025

ಎನ್‌ಸಿಪಿ ಸಂಸದೆ ಸುಪ್ರಿಯಾ ಸುಳೆಗೆ ಕರೋನಾ ದೃಢ

ಮುಂಬೈ: ಎನ್‌ಸಿಪಿ ಸಂಸದೆ ಸುಪ್ರಿಯಾ ಸುಳೆಯವರಿಗೆ ಬುಧವಾರ ಕೊವಿಡ್-19 ಸೋಂಕು ತಗುಲಿರುವುದು ವೈದ್ಯಕೀಯ ಪರೀಕ್ಷೆಯಲ್ಲಿ ದೃಢಪಟ್ಟಿದೆ. ಸುಪ್ರಿಯಾ ಸುಳೆ ಹಾಗೂ ಅವರ ಪತಿ ಸದಾನಂದ್ ಅವರಿಗೂ ಸೋಂಕು ತಗುಲಿದೆ.

ಸದಾನಂದ್ ಮತ್ತು ನಾನು, ಇಬ್ಬರಿಗೂ ಸೋಂಕು ಪತ್ತೆಯಾಗಿರುವುದು ದೃಢಪಟ್ಟಿದೆ. ನಮಗೆ ಯಾವುದೇ ರೋಗದ ಲಕ್ಷಣಗಳು ಇರಲಿಲ್ಲ. ನಮ್ಮೊಂದಿಗೆ ಸಂಪರ್ಕಕ್ಕೆ ಬಂದಿರುವ ಪ್ರತಿಯೊಬ್ಬರೂ ಪರೀಕ್ಷಿಸಿಕೊಳ್ಳಬೇಕು ಎಂದು ಸುಪ್ರಿಯಾ ಟ್ವೀಟ್ ಮೂಲಕ ಮನವಿ ಮಾಡಿಕೊಂಡಿದ್ದಾರೆ.

ಮಹಾರಾಷ್ಟ್ರದಲ್ಲಿ ಒಂದೇ ದಿನದಲ್ಲಿ 1,172 ಮಂದಿಗೆ ಸೋಂಕು ತಗುಲಿರುವುದು ವೈದ್ಯ ಕೀಯ ಪರೀಕ್ಷೆಯಲ್ಲಿ ದೃಢಪಟ್ಟಿದ್ದು, ಒಟ್ಟು ಸೋಂಕಿತ ಪ್ರಕರಣಗಳ ಸಂಖ್ಯೆ 66,11,078 ಕ್ಕೆ ಏರಿಕೆಯಾಗಿದೆ. ಕಳೆದ 24 ಗಂಟೆಗಳಲ್ಲಿ 20 ಮಂದಿ ಸೋಂಕಿನಿಂದ ಪ್ರಾಣ ಬಿಟ್ಟಿದ್ದು, ಸಾವಿನ ಸಂಖ್ಯೆ 1,40,216ಕ್ಕೆ ಏರಿಕೆಯಾಗಿದೆ.

ರಾಜ್ಯದಲ್ಲಿ ಮಂಗಳವಾರವೊಂದೇ ದಿನದಲ್ಲಿ 1,399 ಕೊವಿಡ್-19 ಸೋಂಕಿತರು ಗುಣ ಮುಖರಾಗಿದ್ದು, ಈವರೆಗೂ 64,50,585 ಸೋಂಕಿತರು ಗುಣಮುಖರಾಗಿದ್ದಾರೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಮಾಹಿತಿ ನೀಡಿದೆ.

ರೂಪಾಂತರಿ ಓಮಿಕ್ರಾನ್ ಸೋಂಕಿತ ಪ್ರಕರಣಗಳು ಮಹಾರಾಷ್ಟ್ರದಲ್ಲಿ ಹೆಚ್ಚಾಗಿ ವರದಿ ಆಗುತ್ತಿವೆ. ರಾಜ್ಯದಲ್ಲಿ ಈವರೆಗೂ ಒಟ್ಟು 167 ಮಂದಿಗೆ ಓಮಿಕ್ರಾನ್ ಸೋಂಕು ದೃಢಪಟ್ಟಿದ್ದು, ಈ ಪೈಕಿ 72 ಸೋಂಕಿತರು ಗುಣಮುಖರಾಗಿದ್ದಾರೆ.