ಭೋಪಾಲ್ ಅನಿಲ ದುರಂತದಲ್ಲಿ (Bhopal Gas Tragedy) ಬಲಿಯಾದ ನತದೃಷ್ಟರ ನೆನಪಿನಲ್ಲಿ ಡಿಸೆಂಬರ್ 2ರಂದು ರಾಷ್ಟ್ರೀಯ ಮಾಲಿನ್ಯ ನಿಯಂತ್ರಣ ದಿನವನ್ನು (National Pollution Prevention Day) ಆಚರಿಸಲಾಗುತ್ತದೆ. 1984ರ ಡಿಸೆಂಬರ್ 2ರ ಮಧ್ಯರಾತ್ರಿಯಲ್ಲಿ ಯೂನಿಯನ್ ಕಾರ್ಬೈಡ್ ಸಂಸ್ಥೆಯ ಘಟಕದಿಂದ ಸೋರಿದ ಮಿಥೈಲ್ ಐಸೋಸಯನೇಟ್ ವಿಷಾನಿಲವು 25,000ಕ್ಕೂ ಹೆಚ್ಚಿನ ಜನರನ್ನು ಬಲಿ ತೆಗೆದುಕೊಂಡಿತ್ತು.
ಈ ಭಯಾನಕ ದುರಂತದಿಂದ ಸುಮಾರು 5 ಲಕ್ಷ ಮಂದಿ ಸಂತ್ರಸ್ತರಾಗಿದ್ದರು. ಈ ಕರಾಳ ದಿನದ ನೆನಪಿನಲ್ಲಿ ಮನುಕುಲದ ಉಳಿವಿಗೆ ಯಾವುದೇ ಬಗೆಯ ಮಾಲಿನ್ಯವನ್ನು ನಿಯಂತ್ರಿಸುವುದು ಎಷ್ಟು ಮಹತ್ವದ್ದು ಎಂಬುದನ್ನು “ಶುದ್ಧ ಗಾಳಿ, ಹಸಿರು ಭೂಮಿ: ಸುಸ್ಥಿರ ಬದುಕಿನತ್ತ ಒಂದು ಹೆಜ್ಜೆ” ಎಂಬ ಧ್ಯೇಯದೊಂದಿಗೆ ಸಾರಲಾಗುತ್ತಿದೆ.
ನಾಲ್ಕು ದಶಕಗಳ ಅನಂತರವೂ ಭೋಪಾಲ್ ಸಂತ್ರಸ್ತರ ಬದುಕು ಸಂಕಷ್ಟದಲ್ಲೇ ಇದೆ. ಜೀವ ಕಳೆದುಕೊಂಡವರು ಒಂದೆಡೆಯಾದರೆ, ಉಳಿದವರು ಜೀವಚ್ಛವದಂತೆ ಬದುಕುತ್ತಿರುವ ನಿದರ್ಶನಗಳಿವೆ. ಅಷ್ಟು ಸುಲಭವಾಗಿ ಗುಣವಾಗುವ ಗಾಯವಿದಲ್ಲ ಎನ್ನುವುದನ್ನು ಆ ದುರಂತದ ತೀವ್ರತೆಯೇ ಎತ್ತಿ ಹೇಳುತ್ತದೆ.
ಇದು ಕೈಗಾರಿಕಾ ಮಾಲಿನ್ಯದ ವಿಷಯವೆಂದು ತಳ್ಳಿ ಹಾಕುವಂತಿಲ್ಲ. ಜಲ, ವಾಯು, ಭೂಮಿ ಮೊದಲಾದ ಯಾವುದೇ ರೀತಿಯ ಮಾಲಿನ್ಯವೂ ಜಗತ್ತಿಗೆ ಮಾರಕ ಎಂಬ ಸಂದೇಶ ಈ ಅರಿವಿನ ದಿನದ್ದು. ಈಗಾಗಲೇ ಸಂಭವಿಸುತ್ತಿರುವ ಕೆಲವು ಮಾಲಿನ್ಯಗಳ ಪರಿಣಾಮಗಳು ಹೀಗಿವೆ…

ವಾಯುಮಾಲಿನ್ಯ
ವಾತಾವರಣಕ್ಕೆ ಸೇರುವ ಯಾವುದೇ ಅಪಾಯಕಾರಿ ಅಂಶಗಳಿಂದಾಗಿ ಉಂಟಾಗುವ ಮಲಿನತೆಯಿದು. ವಾಹನದ ಹೊಗೆ, ಧೂಳು, ಕೈಗಾರಿಕಾ ಚಟುವಟಿಕೆಗಳು, ಕಟ್ಟಡ ನಿರ್ಮಾಣ ಕೆಲಸಗಳು, ಗಣಿಗಾರಿಕೆ, ಕಾಡ್ಗಿಚ್ಚು, ಯಾವುದನ್ನಾದರೂ ಸುಡುವುದು ಮೊದಲಾದ ಹಲವು ಕಾರಣಗಳು ವಾಯು ಮಾಲಿನ್ಯವನ್ನು ಸೃಷ್ಟಿಸಬಹುದು.
ಪರಿಣಾಮಗಳು
ವಾಯುವಿನಲ್ಲಿರುವ ಘನ ಕಣಗಳ ಸಾಂದ್ರತೆ ಹೆಚ್ಚುತ್ತಿದ್ದಂತೆ ಶ್ವಾಸಕೋಶ, ಮೆದುಳು, ಹೃದಯ, ಕಣ್ಣು, ಚರ್ಮ, ಕೂದಲು ಮುಂತಾದ ಹಲವು ಅಂಗಗಳ ಮೇಲೆ ತೀವ್ರ ಪರಿಣಾಮವನ್ನು ಕಾಣಬಹುದು. ಕ್ಯಾನ್ಸರ್‌ನಂಥ ಮಾರಕ ರೋಗಗಳನ್ನು ಉಂಟು ಮಾಡಬಹುದು. ಫಲವಂತಿಕೆಯ ಮೇಲೆ ವ್ಯತಿರಿಕ್ತ ಪರಿಣಾಮ ಬೀರುವುದು ಮಾತ್ರವಲ್ಲ, ಹೊಟ್ಟೆಯಲ್ಲಿರುವ ಶಿಶುವಿಗೆ ಸಹ ತೊಂದರೆಯನ್ನು ತರಬಹುದು.
ಜಲಮಾಲಿನ್ಯ
ಶುದ್ಧ ನೀರಿನ ಮೂಲಗಳಿಗೆ ಸೇರುವ ಯಾವುದೇ ಅನಗತ್ಯ ವಸ್ತುಗಳು, ಆ ಜಲಮೂಲಗಳನ್ನು ಬಳಕೆಗೆ ಅಯೋಗ್ಯವನ್ನಾಗಿ ಮಾಡುತ್ತವೆ. ಮಾನವ ತ್ಯಾಜ್ಯವನ್ನು ನೀರಿಗೆ ಸೇರಿಸುವುದು, ಕೈಗಾರಿಕೆಗಳಿಂದ ಬರುವ ಕೊಳಚೆಗಳು ಸೇರಿದಂತೆ ಹಲವು ರೀತಿಯ ವಿಷಗಳು ನೀರಿನ ಗುಣಮಟ್ಟವನ್ನು ಹಾಳು ಮಾಡುತ್ತವೆ.
ಪರಿಣಾಮಗಳು
ಕಾಲರಾ, ಆಮಶಂಕೆ, ಟೈಫಾಯ್ಡ್, ಪೋಲಿಯೊ, ಹೆಪಟೈಟಿಸ್ ಎ, ಅಲರ್ಜಿ, ಸೋರಿಯಾಸಿಸ್, ನರಮಂಡಲದ ಏರುಪೇರು ಇತ್ಯಾದಿ ಬಹಳಷ್ಟು ಸಮಸ್ಯೆಗಳು ಉಂಟಾಗಬಹುದು. ಕುಡಿಯುವ ನೀರಿನಲ್ಲಿ ಆರ್ಸೆನಿಕ್ ಅಂಶ ಅಥವಾ ಭಾರೀ ಲೋಹದ ಅಂಶಗಳು ಸೇರುತ್ತಿದ್ದಂತೆ ಹಲವು ಬಗೆಯ ಕ್ಯಾನ್ಸರ್‌ಗಳು ಗಂಟು ಬೀಳಬಹುದು. ಕಿಡ್ನಿ ಮತ್ತು ಯಕೃತ್‌ಗಳೂ ಹಾನಿಗೆ ಒಳಗಾಗಬಹುದು.
ಭೂಮಾಲಿನ್ಯ
ಪ್ಲಾಸ್ಟಿಕ್ ರೀತಿಯಲ್ಲಿ ಮಣ್ಣಿನಲ್ಲಿ ಕರಗದೆ ಉಳಿಯುವ ಯಾವುದೇ ವಸ್ತುಗಳು, ಕೃಷಿ ಮತ್ತು ಕೈಗಾರಿಕಾ ತ್ಯಾಜ್ಯಗಳು, ಗಣಿಗಾರಿಕೆ ಮುಂತಾದ ಬಹಳಷ್ಟು ಕಾರಣಗಳು ಮಣ್ಣಿನ ಅಥವಾ ಭೂಮಾಲಿನ್ಯದ ಹಿಂದಿರಬಹುದು.
ಪರಿಣಾಮ
ಮಣ್ಣಿಗೆ ಸೇರುವ ಸೀಸ ಅಥವಾ ಪಾದರಸದಂಥ ಲೋಹಗಳು ದೇಹವನ್ನು ಸೇರಿದರೆ ಕೇಂದ್ರ ನರಮಂಡಲದ ಮೇಲೆ ಪ್ರತಿಕೂಲ ಪರಿಣಾಮ ಬೀರುತ್ತದೆ. ಇವು ಚರ್ಮಕ್ಕೆ ತಾಗಿದರೆ ಹಲವು ರೀತಿಯ ಅಲರ್ಜಿಗಳು ಬೆನ್ನು ಬೀಳುತ್ತವೆ. ಮಣ್ಣು ಸೇರುವ ಪ್ಲಾಸ್ಟಿಕ್‌ಗಳಿಂದ ಉಂಟಾಗುವ ಉಪಟಳಕ್ಕಂತೂ ತುದಿ-ಮೊದಲೇ ಇಲ್ಲ. ವೈದ್ಯಕೀಯ ತ್ಯಾಜ್ಯ ಮಣ್ಣು ಸೇರಿದರೆ ಹಲವು ಸೋಂಕು ಅಥವಾ ರೋಗಗಳಿಗೆ ಕಾರಣವಾಗಬಹುದು.

Viral News: ರೈಲು ಶೌಚಾಲಯದಿಂದ ವಿಚಿತ್ರ ಶಬ್ದ; ಬಾಗಿಲು ಒಡೆದ ಅಧಿಕಾರಿಗಳಿಗೆ ಶಾಕ್!
ನಿಯಂತ್ರಣ ಹೇಗೆ?
ಹೊಗೆ ಮತ್ತು ವಿಷಾನಿಲಗಳನ್ನು ಉಗುಳುವಂಥ ಎಲ್ಲ ಮೂಲಗಳನ್ನು ಕಡಿತಗೊಳಿಸುವುದು, ಕೃಷಿ, ಸಂಪರ್ಕ, ಕೈಗಾರಿಕೆ ಮುಂತಾದ ಕ್ಷೇತ್ರಗಳಲ್ಲಿ ಮಾಲಿನ್ಯಕಾರಕವಲ್ಲ ಸುಸ್ಥಿರ ಮಾರ್ಗಗಳನ್ನು ಅಳವಡಿಸಿಕೊಳ್ಳುವುದು, ಏಕ ಬಳಕೆಯ ಪ್ಲಾಸ್ಟಿಕ್‌ನಂಥ ವಸ್ತುಗಳ ಪ್ರತಿಯಾಗಿ ಅತಿ ಹೆಚ್ಚಿನ ಅರಿವನ್ನು ಜನರಲ್ಲಿ ಮೂಡಿಸುವುದು, ನಡಿಗೆ, ಸೈಕಲ್, ಬ್ಯಾಟರಿ ಚಾಲಿತ ವಾಹನಗಳು ಇತ್ಯಾದಿ ಪರಿಸರಕ್ಕೆ ಪೂರಕವಾಗಿ ಸಂಪರ್ಕ ಮಾಧ್ಯಮಗಳನ್ನು ಆಯ್ದುಕೊಳ್ಳುವುದು, ತ್ಯಾಜ್ಯವನ್ನು ಕಡಿಮೆ ಮಾಡುವಂಥ ಕ್ರಮಗಳನ್ನು ಮೈಗೂಡಿಸಿಕೊಳ್ಳುವುದು- ಇಂಥ ಬಹಳಷ್ಟು ಕ್ರಮಗಳು ಮಾಲಿನ್ಯವನ್ನು ತಗ್ಗಿಸಲು ಮತ್ತು ನಿಯಂತ್ರಿಸಲು ನೆರವಾಗುತ್ತವೆ.