Saturday, 10th May 2025

Narendra Modi: ಪ್ರಯಾಗ್‌ರಾಜ್‌ ತ್ರೀವೇಣಿಯಲ್ಲಿ ಪ್ರಧಾನಿ ಪೂಜೆ, ಮಹಾ ಕುಂಭ ಮೇಳದ ಪೂರ್ವಭಾವಿಯಾಗಿ ವಿವಿಧ ಕಾಮಗಾರಿಗೆ ಚಾಲನೆ

Narendra Modi

ಲಖನೌ: ಪ್ರಧಾನಿ ನರೇಂದ್ರ ಮೋದಿ (Narendra Modi) ಶುಕ್ರವಾರ ಉತ್ತರ ಪ್ರದೇಶದ ಪ್ರಯಾಗ್‌ರಾಜ್‌ಗೆ (Prayagraj) ಆಗಮಿಸಿ, ಮುಂದಿನ ತಿಂಗಳು ನಗರದಲ್ಲಿ ನಡೆಯಲಿರುವ ಮಹಾಕುಂಭ ಮೇಳಕ್ಕೆ (Maha Kumbh Mela) ಶುಭ ಹಾರೈಸಿದ್ದಾರೆ. ಈ ಬಗ್ಗೆ ಮಾತನಾಡಿದ ಅವರು ಇಂತಹ ಧಾರ್ಮಿಕ ಕಾರ್ಯಕ್ರಮಗಳು ದೇಶದ ಸಾಂಸ್ಕೃತಿಕ ಮತ್ತು ಆಧ್ಯಾತ್ಮಿಕ ಗುರುತನ್ನು ಹೊಸ ಎತ್ತರಕ್ಕೆ ಕೊಂಡೊಯ್ಯುತ್ತದೆ ಎಂದು ಹೇಳಿದ್ದಾರೆ.

2025ರಲ್ಲಿ ಪ್ರಯಾಗ್‌ರಾಜ್‌ನಲ್ಲಿ ನಡೆಯಲಿರುವ ಮಹಾ ಕುಂಭ ಮೇಳದ ಸಿದ್ಧತೆಗಾಗಿ  5,500 ಕೋಟಿ ರೂ. ಮೌಲ್ಯದ ಅಭಿವೃದ್ಧಿ ಯೋಜನೆಗಳನ್ನು ಪ್ರಾರಂಭಿಸಲು ಪ್ರಧಾನ ಮಂತ್ರಿ ಆಗಮಿಸಿದ್ದರು. ಅಭಿವೃದ್ದಿ ಕಾರ್ಯಕ್ಕೆ ಚಾಲನೆ ನೀಡುವ ಮೊದಲು ಪೂಜೆಯನ್ನು ನೆರವೇರಿಸಲಾಯಿತು. ಕಾರ್ಯಕ್ರಮದಲ್ಲಿ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌ ರಾಜ್ಯಪಾಲ ಆನಂದಿಬೆನ್ ಪಟೇಲ್ ಉಪಸ್ಥಿತರಿದ್ದರು.

ನಂತರ ಮಾತನಾಡಿದ ಪ್ರಧಾನಿ, ʼʼಮಹಾಕುಂಭ ಮೇಳಕ್ಕೆ ದೇಶದ ಕೋಟ್ಯಂತರ ಜನರು ತಮ್ಮದೇ ಆದ ನಂಬಿಕೆಯೊಂದಿಗೆ ಇಲ್ಲಿಗೆ ಬರುತ್ತಾರೆ. ಇದು ಪುಣ್ಯ ಸ್ಥಳವಾಗಿದ್ದು, ಮೂರು ನದಿಗಳ ಸಂಗಮವಾಗಿದೆ (ಗಂಗಾ, ಯಮುನಾ ಮತ್ತು ಸರಸ್ವತಿ ನದಿಗಳ ಸಂಗಮ). ಇಡೀ ಪ್ರಪಂಚದ ಎದುರು ನಮ್ಮ ದೇಶದ ವಿಶಿಷ್ಟ ಸಂಸೃತಿ, ಸಂಪ್ರದಾಯ ಅನಾವರಣಗೊಳ್ಳಲಿದೆʼʼ ಎಂದು ಅವರು ಹೇಳಿದ್ದಾರೆ.

ಪ್ರಯಾಗರಾಜ್‌ನಲ್ಲಿ ನಿರಂತರವಾಗಿ ಕೆಲಸ ಮಾಡುತ್ತಿರುವ ಕಾರ್ಮಿಕರಿಗೆ ಧನ್ಯವಾದ ಅರ್ಪಿಸಿದ ಮೋದಿ, ʼʼಇಂತಹ ಪುಣ್ಯಭೂಮಿಯಲ್ಲಿ ಮಹಾಕುಂಭ ಮೇಳದ ಸಿದ್ಧತೆಗಳನ್ನು ಪರಿಶೀಲಿಸಲು ಮತ್ತು ವಿವಿಧ ಅಭಿವೃದ್ಧಿ ಕಾಮಗಾರಿಗಳನ್ನು ಉದ್ಘಾಟಿಸಲು ನಾನು ಅದೃಷ್ಟಶಾಲಿಯಾಗಿದ್ದೇನೆʼʼ ಎಂದು ಹೇಳಿದ್ದಾರೆ. ಪ್ರಯಾಗ್‌ರಾಜ್‌ ಜನರ ಆಶೀರ್ವಾದದಿಂದ ನಾನು ಪದೇ ಪದೇ ಇಲ್ಲಿಗೆ ಬರುವಂತಾಗಿದೆ.  2019ರಲ್ಲೂ ತ್ರೀವೇಣಿ ಸಂಗಮದ ಪವಿತ್ರ ನೀರಿನಲ್ಲಿ ಬಂದು ಸ್ನಾನ ಮಾಡಿದ್ದೆ ಎಂದು ನೆನಪಿಸಿಕೊಂಡಿದ್ದಾರೆ.

ಮಹಾಕುಂಭ ಮೇಳವು ಜನವರಿ 13ರಿಂದ ಫೆಬ್ರವರಿ 26 ವರೆಗೆ ಪ್ರಯಾಗರಾಜ್‌ನಲ್ಲಿ ನಡೆಯಲಿದೆ. ಪ್ರತಿ 12 ವರ್ಷಗಳಿಗೊಮ್ಮೆ ಮಹಾಕುಂಭವನ್ನು ಆಯೋಜಿಸಲಾಗುತ್ತದೆ.

ಈ ಸುದ್ದಿಯನ್ನೂ ಓದಿ : Raj Kapoor Birthday: ಕಪೂರ್ ಫ್ಯಾಮಿಲಿ ಮಿಟ್ಸ್ ಪಿಎಂ ಮೋದಿ; ಅದರ ಹಿಂದಿದೆ ಒಂದು ಬಲವಾದ ಕಾರಣ