Friday, 16th May 2025

Murder for Iphone: ಐಫೋನ್ ನೀಡಲು ಬಂದ ಡೆಲಿವರಿ ಬಾಯ್‍ ಕೊಲೆಯಾಗಿದ್ದು ಹೇಗೆ?

Murder Case

ಲಖನೌ: ಐಫೋನ್ ಮೊಬೈಲ್‌ ತುಂಬಾ ದುಬಾರಿ ಎನ್ನುವುದು ನಿಮಗೆ ಗೊತ್ತೇ ಇದೆ. ಮಧ್ಯಮ ಹಾಗೂ ಬಡ ಕುಟುಂಬದ ಜನರಿಗೆ ಇದನ್ನು ಬಳಸುವ ಆಸೆ ಇದ್ದರೂ ಇದನ್ನು ಖರೀದಿಸಲಾಗದೆ ಸುಮ್ಮನಿರುತ್ತಾರೆ. ಆದರೆ ಕೆಲವರು ಈ ಐಫೋನ್‍ಗಾಗಿ ಕೊಲೆ ಮಾಡುವ ಮಟ್ಟಕ್ಕೂ ಹೋಗಿದ್ದಾರೆ ಎಂದು ಹೇಳಿದರೆ ನಿಮಗೆ ಆಶ್ಚರ್ಯವಾಗಬಹುದು. ಇತ್ತೀಚೆಗೆ  ಇ-ಕಾಮರ್ಸ್ ಕಂಪನಿಯ ಡೆಲಿವರಿ ಬಾಯ್‍ 1.5 ಲಕ್ಷ ರೂ.ಗಳ ಐಫೋನ್ ಅನ್ನು ತಲುಪಿಸಿದ ನಂತರ (Murder for Iphone) ಕೊಲೆಗೀಡಾಗಿದ್ದಾನೆ.

ಪೊಲೀಸ್ ಮೂಲಗಳ ಪ್ರಕಾರ, ನಗರದ ಚಿನ್ಹತ್ ಪ್ರದೇಶದ ನಿವಾಸಿ ಗಜೇಂದ್ರ ಕುಮಾರ್ ಎಂಬ ವ್ಯಕ್ತಿ ಇ-ಕಾಮರ್ಸ್ ಕಂಪನಿಯಿಂದ 1.5 ಲಕ್ಷ ರೂ.ಗಳ ಐಫೋನ್ ಅನ್ನು ಆರ್ಡರ್ ಮಾಡಿದ್ದ. ಹಣ ಪಾವತಿಯ ವಿಧಾನ ಕ್ಯಾಶ್ ಆನ್ ಡೆಲಿವರಿ ಆಗಿತ್ತು. ನಿಶಾತ್ ಗಂಜ್ ಪ್ರದೇಶದ ನಿವಾಸಿ ಭರತ್ ಸಾಹು ಎಂಬ ಡೆಲಿವರಿ ಬಾಯ್ ಫೋನ್ ತಲುಪಿಸಲು ಸಂಜೆ ಗಜೇಂದ್ರ ಅವರ ಮನೆಗೆ ಹೋಗಿದ್ದ ಎಂದು ಪೊಲೀಸರು ತಿಳಿಸಿದ್ದಾರೆ. ಐಫೋನ್ ಕೊಟ್ಟು ಹಣ ಕೇಳಿದಾಗ ಗಜೇಂದ್ರ ಮತ್ತು ಆತನ ಪರಿಚಯಸ್ಥ ಭರತ್‍ನನ್ನು ಮನೆಯೊಳಗೆ ಕರೆದು ಕತ್ತು ಹಿಸುಕಿ ಕೊಲೆ ಮಾಡಿದ್ದಾರೆ. ನಂತರ ಇಬ್ಬರೂ ಶವವನ್ನು ಚೀಲದಲ್ಲಿ ಪ್ಯಾಕ್ ಮಾಡಿ ಹತ್ತಿರದ ಇಂದಿರಾ ಕಾಲುವೆಗೆ ಎಸೆದಿದ್ದಾರೆ.

ಈ ಘಟನೆ ಸೆಪ್ಟೆಂಬರ್ 23ರಂದು ನಡೆದಿದ್ದರೂ, ಪೊಲೀಸರು ಸೋಮವಾರ ಪ್ರಕರಣವನ್ನು ಭೇದಿಸಿ ಗಜೇಂದ್ರನನ್ನು ಬಂಧಿಸಿದ್ದಾರೆ. ಮೃತನ ಕುಟುಂಬ ಸದಸ್ಯರು ಆತ ಕಾಣೆಯಾದ ಬಗ್ಗೆ ಪೊಲೀಸರಿಗೆ ದೂರು ನೀಡಿದ್ದಾರೆ. ಭರತ್ ಮಾಡಿದ ಕೊನೆಯ ಕರೆಯನ್ನು ಪತ್ತೆಹಚ್ಚಿದ ನಂತರ ಪೊಲೀಸರು ಅಪರಾಧಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಇದನ್ನೂ ಓದಿ:ಮೆಟ್ರೋದಲ್ಲಿ ‘ಆಜ್ ಕಿ ರಾತ್’ ಹಾಡಿಗೆ ಮೈಚಳಿ ಬಿಟ್ಟು ನಟಿಸಿದ ಮಹಿಳೆ; ವಿಡಿಯೊ ಇದೆ

ಶವವನ್ನು ಪತ್ತೆಹಚ್ಚಲು ಪೊಲೀಸರು ಸೋಮವಾರ ಕಾಲುವೆಯಲ್ಲಿ ಶೋಧ ಕಾರ್ಯಾಚರಣೆಯನ್ನು ಪ್ರಾರಂಭಿಸಿದ್ದರು. ಆಗ ಕಾಲುವೆಯಲ್ಲಿ ಶವ ಪತ್ತೆಯಾಗಿದೆ. ಈ ಹಿನ್ನೆಲೆಯಲ್ಲಿ ಗಜೇಂದ್ರನನ್ನು ಬಂಧಿಸಲಾಗಿದೆ. ಆತನಿಗೆ ಕೊಲೆ ಮಾಡಲು ಸಹಾಯ ಮಾಡಿದ ಗಜೇಂದ್ರನ ಪರಿಚಯಸ್ಥನನ್ನು ಬಂಧಿಸಲು ಪೊಲೀಸರು ಯೋಜನೆ ರೂಪಿಸಿದ್ದಾರೆ ಎಂಬುದಾಗಿ ತಿಳಿದುಬಂದಿದೆ.