Sunday, 11th May 2025

Monkey Fighting: ರೈಲು ಸಂಚಾರಕ್ಕೂ ಕೋತಿಗಳ ಕಾಟ; ಅಷ್ಟಕ್ಕೂ ಆಗಿದ್ದೇನು ಗೊತ್ತಾ? ವಿಡಿಯೊ ಇದೆ

Monkey Fighting

ಪಟನಾ: ಕೋತಿಗಳು ಮಾಡುವ ಅವಾಂತರ ಒಂದೆರಡಲ್ಲ! ಈ ಹಿಂದೆ ಕೋತಿಗಳು ಮನುಷ್ಯರ ಮೇಲೆ ದಾಳಿ ಮಾಡಿದ ಪ್ರಕರಣಗಳು ಸಾಕಷ್ಟಿವೆ. ಇದೀಗ ಇವುಗಳಿಂದ ರೈಲು ಸಂಚಾರಕ್ಕೂ ಅಡ್ಡಿಯಾಗಿದೆಯಂತೆ. ಬಿಹಾರದ ಸಮಸ್ತಿಪುರ ಜಂಕ್ಷನ್ ರೈಲ್ವೆ ನಿಲ್ದಾಣದಲ್ಲಿ ಇತ್ತೀಚೆಗೆ ಬಾಳೆಹಣ್ಣಿನ ವಿಚಾರವಾಗಿ ಎರಡು ಕೋತಿಗಳ ನಡುವೆ ಜಗಳ ನಡೆದ ನಂತರ ರೈಲು ಸಂಚಾರಕ್ಕೆ ಅಡ್ಡಿಯಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಪ್ಲಾಟ್‌ಫಾರ್ಮ್‌ ಸಂಖ್ಯೆ 4 ರ ಬಳಿ ಈ ಘಟನೆ ನಡೆದಿದ್ದು, ಅಲ್ಲಿ ಕೋತಿಗಳು(Monkey Fighting) ಬಾಳೆಹಣ್ಣಿಗಾಗಿ ಜಗಳವಾಡುತ್ತಿದ್ದವು. ಇದರಿಂದಾಗಿ ರೈಲು ಸಂಚಾರಕ್ಕೆ ಅಡ್ಡಿಯಾಗಿದೆ ಎಂದು ವರದಿಯಾಗಿದೆ.

ಕೋತಿಗಳ ನಡುವೆ ನಡೆದ ಜಗಳದ ವೇಳೆ ಕೋತಿಗಳಲ್ಲಿ ಒಂದು ಕೋತಿ ವಸ್ತುವೊಂದನ್ನು ತೆಗೆದು  ಇನ್ನೊಂದು ಕೋತಿಯ ಮೇಲೆ ಎಸೆದಿದೆ. ಆಗ ಅದು ಓವರ್‌ಹೆಡ್‌ ತಂತಿಗೆ ತಗುಲಿ ಶಾರ್ಟ್ ಸರ್ಕ್ಯೂಟ್‍ಗೆ ಕಾರಣವಾಗಿದೆ. ನಂತರ ತಂತಿ ಮುರಿದು ರೈಲಿನ ಬೋಗಿಯ ಮೇಲೆ ಬಿದ್ದು, ರೈಲ್ವೆ ಕಾರ್ಯಾಚರಣೆಯನ್ನು 45 ನಿಮಿಷಗಳ ಕಾಲ ಸ್ಥಗಿತಗೊಳಿಸಲಾಯಿತು ಎಂದು ಪೂರ್ವ ಮಧ್ಯ ರೈಲ್ವೆಯ ಮುಖ್ಯ ಸಾರ್ವಜನಿಕ ಸಂಪರ್ಕ ಅಧಿಕಾರಿ ಸರಸ್ವತಿ ಚಂದ್ರ ಸುದ್ದಿ ಸಂಸ್ಥೆಗೆ ತಿಳಿಸಿದ್ದಾರೆ.

ಹಠಾತ್ ವಿದ್ಯುತ್ ಕಡಿತದಿಂದ ರೈಲನ್ನು ತಾತ್ಕಾಲಿಕವಾಗಿ ನಿಲ್ಲಿಸಲು ಕಾರಣವಾಯಿತು, ಇದು ಸರಿಯಾದ ಸಮಯಕ್ಕೆ ತಮ್ಮ ಸ್ಥಳಕ್ಕೆ ತಲುಪಬೇಕು ಎಂದುಕೊಂಡಿದ್ದ ಹಲವಾರು ಪ್ರಯಾಣಿಕರ ಮೇಲೆ ಪರಿಣಾಮ ಬೀರಿತು. ಘಟನೆಯ ಸಮಯದಲ್ಲಿ ಯಾವುದೇ ಪ್ರಯಾಣಿಕರಿಗೆ ಹಾನಿಯಾಗಿಲ್ಲ ಮತ್ತು ಸ್ವಲ್ಪ ಸಮಯದಲ್ಲಿಯೇ ಅಡಚಣೆಯನ್ನು ನಿಯಂತ್ರಿಸಲಾಗಿದೆ ಎಂದು ನಿಲ್ದಾಣದ ಅಧಿಕಾರಿಗಳು ತಿಳಿಸಿದ್ದಾರೆ.

ರೈಲ್ವೆ ನಿಲ್ದಾಣದ ವಿದ್ಯುತ್ ವಿಭಾಗವು ತಂತಿಯ ದುರಸ್ತಿಯನ್ನು ಪ್ರಾರಂಭಿಸಿದೆ ಮತ್ತು ಸೇವೆಗಳನ್ನು ಪುನರಾರಂಭಿಸಲಾಯಿತು ಎಂದು ಅಧಿಕಾರಿ ಹೇಳಿದ್ದಾರೆ. “ರೈಲ್ವೆ ಸಿಬ್ಬಂದಿ ಇದನ್ನು ತಕ್ಷಣ ಸರಿಪಡಿಸಿದರು ಮತ್ತು ರೈಲು ಸೇವೆಗಳು ಪುನರಾರಂಭಗೊಂಡವು” ಎಂದು ಅವರು ತಿಳಿಸಿದ್ದಾರೆ.

ಇದನ್ನೂ ಓದಿ:ಹೆಂಡತಿಯನ್ನು ಅದಲು ಬದಲು ಮಾಡಿಕೊಂಡು ಹೋಟೆಲ್‌ನಲ್ಲಿ ರೆಡ್‌ಹ್ಯಾಂಡ್‌ ಆಗಿ ಸಿಕ್ಕಿಬಿದ್ದ ಭೂಪರು! ವಿಡಿಯೊ ನೋಡಿ

ಈ ಘಟನೆಯ ನಂತರ  ಕೋತಿಗಳು ಈ ಪ್ರದೇಶದಿಂದ ಕಣ್ಮರೆಯಾದವು. ಸಮಸ್ತಿಪುರ ರೈಲ್ವೆ ನಿಲ್ದಾಣದಲ್ಲಿ ಪ್ರಸ್ತುತ ಕೋತಿಗಳ ಹಾವಳಿ ಹೆಚ್ಚಾಗಿದ್ದು, ಇತ್ತೀಚೆಗೆ ನಡೆದ  ಘಟನೆಗಳಲ್ಲಿ ಇದು ಒಂದಾಗಿದೆ. ಈ ಹಿಂದೆ, ಪ್ರಯಾಣಿಕರು ಕೋತಿಗಳಿಂದ ಗಾಯಗೊಂಡಿದ್ದರು. ಹಾಗಾಗಿ ನಂತರ ಅವುಗಳನ್ನು ಅರಣ್ಯ ಇಲಾಖೆ ಸೆರೆಹಿಡಿದಿತ್ತು.