Saturday, 10th May 2025

Money Tips: ಹೋಮ್‌ ಲೋನ್‌ಗೆ ಅರ್ಜಿ ಸಲ್ಲಿಸುತ್ತಿದ್ದೀರಾ? ಈ ಅಂಶಗಳು ನಿಮಗೆ ತಿಳಿದಿರಲೇಬೇಕು

Money Tips

ಬೆಂಗಳೂರು: ಸ್ವಂತ ಸೂರು ಹೊಂದಬೇಕು ಎನ್ನುವ ಕನಸು ಯಾರಿಗೆ ಇಲ್ಲ ಹೇಳಿ? ಅದರಲ್ಲಿಯೂ ಮಧ್ಯಮ ವರ್ಗದ ಕುಟುಂಬಗಳು ಮನೆ ನಿರ್ಮಾಣಕ್ಕೆ ಹಗಲಿರುಳು ಶ್ರಮಿಸುತ್ತವೆ. ಇತ್ತೀಚೆಗಂತೂ ಬೆಲೆ ಏರಿಕೆಯ ಭರಾಟೆಯಿಂದಾಗಿ ಮನೆ ನಿರ್ಮಾಣ ಎನ್ನುವುದು ಗಗನ ಕುಸುಮವೇ ಆಗಿದೆ. ಇದೇ ಕಾರಣಕ್ಕೆ ಬಹುತೇಕರು ತಮ್ಮ ಕನಸು ನನಸಾಗಿಸಲು ಗೃಹ ಸಾಲ (Home Loan)ದ ಮೊರೆ ಹೋಗುತ್ತಾರೆ. ಹೀಗಾಗಿಯೇ ದೇಶದಲ್ಲಿ ಗೃಹ ಸಾಲಕ್ಕೆ ಉತ್ತಮ ಬೇಡಿಕೆ ಇದೆ. ಗೃಹ ಸಾಲವೇನೂ ಸಿಗುತ್ತದೆ. ಆದರೆ ಬಳಿಕ ಅದನ್ನು ಸಮಯಕ್ಕೆ ಸರಿಯಾಗಿ ತೀರಿಸುವುದು ಒಂದು ದೊಡ್ಡ ಜವಾಬ್ದಾರಿ ಎನಿಸಿಕೊಂಡಿದೆ. ಹೀಗಾಗಿ ಹೋಮ್‌ ಲೋನ್‌ಗೆ ಅಪ್ಲೈ ಮಾಡುವ ಮುನ್ನ ನೀವು ಕೆಲವೊಂದು ಅಂಶಗಳತ್ತ ಗಮನ ಹರಿಸಬೇಕಾಗುತ್ತದೆ. ಅದೇನು ಎನ್ನುವ ವಿವರ ಇಲ್ಲಿದೆ (Money Tips).

ಮಾಸಿಕ ವೇತನ ಲೆಕ್ಕ ಹಾಕಿ

ಹೋಮ್‌ ಲೋನ್‌ ಸಾಮಾನ್ಯವಾಗಿ ಹೆಚ್ಚಿನ ಮೊತ್ತ ಹೊಂದಿರುತ್ತದೆ. ಇದಕ್ಕಾಗಿಯೇ ಗೃಹ ಸಾಲದ ಅವಧಿ 15-20 ವರ್ಷಗಳವರೆಗೆ ಇರುತ್ತದೆ. ನಿಯಮಿತ ಆದಾಯ ಮತ್ತು ಉತ್ತಮ ಉದ್ಯೋಗ ಹೊಂದಿರುವುದು ಸಮಯಕ್ಕೆ ಸರಿಯಾಗಿ ಸಾಲದ ಇಎಂಐ (EMI) ತುಂಬಲು ಸಹಾಯ ಮಾಡುತ್ತದೆ. ಹೀಗಾಗಿ ಸಾಲಕ್ಕೆ ಅರ್ಜಿ ಸಲ್ಲಿಸುವ ಮುನ್ನ ನಿಯಮಿತ ಆದಾಯ‌ ಹೊಂದಿದ್ದೀರಿ ಎನ್ನುವುದನ್ನು ಖಚಿತಪಡಿಸಿಕೊಳ್ಳಿ. ಸಮಯಕ್ಕೆ ಸರಿಯಾಗಿ ಇಎಂಐ ಪಾವತಿಸದಿದ್ದರೆ ಮುಂದೆ ದಂಡ ಕಟ್ಟಬೇಕಾಗಬಹುದು ಮತ್ತು ನಿಮ್ಮ ಸಿಬಿಲ್‌ ಸ್ಕೋರ್‌ ಮೇಲೆ ಇದು ಪರಿಣಾಮ ಬೀರಬಹುದು. ಒಂದೆರಡು ತಿಂಗಳು ಸಂಬಳ ಬರದಿದ್ದರೂ ಇಎಂಐ ಪಾವತಿಸಬಹುದಾದಷ್ಟು ಮೊತ್ತ ನಿಮ್ಮ ಬಳಿ ಇರಲಿ. ಜತೆಗೆ ಇಎಂಐಯನ್ನು ಒಳಗೊಂಡ ಮಾಸಿಕ ಬಜೆಟ್‌ ತಯಾರಿಸಿ. ಇಎಂಐ ಕಾರಣಕ್ಕೆ ನಿಮ್ಮ ಮೂಲಭೂತ ಆವಶ್ಯಕತೆಗಳಿಗೆ ಕೊರತೆಯಾಗಬಾರದು. ಇದರತ್ತ ಗಮನ ಹರಿಸಿ.

ಬಡ್ಡಿದರ ನಿರ್ಣಯಿಸಿ

ಸಾಮಾನ್ಯವಾಗಿ ಹೋಮ್‌ ಲೋನ್‌ಗೆ ಸ್ಥಿರ ಮತ್ತು ಫ್ಲೋಟಿಂಗ್ (Fixed, floating interest rate) ಎಂಬ 2 ರೀತಿಯ ಬಡ್ಡಿ ದರ ವಿಧಿಸಲಾಗುತ್ತದೆ. ಸ್ಥಿರ ಬಡ್ಡಿ ದರ ಸಾಲದ ಅವಧಿಯುದ್ದಕ್ಕೂ ಒಂದೇ ತೆರನಾಗಿರುತ್ತದೆ. ಮತ್ತೊಂದೆಡೆ ಫ್ಲೋಟಿಂಗ್ ದರ ಮಾರುಕಟ್ಟೆ ಪರಿಸ್ಥಿತಿಗಳನ್ನು ಅವಲಂಬಿಸಿ ಏರಿಳಿತಗೊಳ್ಳುತ್ತದೆ. ನಿಮ್ಮ ಆರ್ಥಿಕ ಪರಿಸ್ಥಿತಿಗೆ ಯಾವುದು ಹೊಂದಿಕೆಯಾಗುತ್ತದೆ ಎಂಬುದನ್ನು ನಿರ್ಧರಿಸಲು ಎರಡೂ ಆಯ್ಕೆಗಳನ್ನು ಮೌಲ್ಯಮಾಪನ ಮಾಡಿ. ನೆನಪಿಡಿ, ಬಡ್ಡಿ ದರಗಳು ನಿಮ್ಮ ಸಾಲದ ಇಎಂಐ ಮತ್ತು ಸಾಲ ಪಡೆಯುವ ವೆಚ್ಚದ ಮೇಲೆ ಹೆಚ್ಚು ಪರಿಣಾಮ ಬೀರುತ್ತವೆ. ಸಾಲದಾತರು ನೀಡುವ ಎರಡೂ ರೀತಿಯ ಬಡ್ಡಿದರಗಳನ್ನು ಹೋಲಿಸಿ.

ಡೌನ್‌ ಪೇಮೆಂಟ್‌ ಲೆಕ್ಕ ಹಾಕಿ

ಸಾಲದಾತರು ಸಾಮಾನ್ಯವಾಗಿ ಆಸ್ತಿ ಮೌಲ್ಯದ ಶೇ. 75-90ರಷ್ಟು ಹಣವನ್ನು ಸಾಲದ ರೂಪದಲ್ಲಿ ಒದಗಿಸುತ್ತಾರೆ. ಉಳಿದದ್ದನ್ನು ಸಾಲಗಾರರು ಭರಿಸಬೇಕು. ಸಾಲಗಾರರು ಪಾವತಿಸಿದ ಭಾಗವು ಡೌನ್ ಪೇಮೆಂಟ್ ಎನಿಸಿಕೊಳ್ಳುತ್ತದೆ. ನಿಮ್ಮ ಡೌನ್ ಪೇಮೆಂಟ್ ಹೆಚ್ಚಾದಷ್ಟೂ ನಿಮ್ಮ ಸಾಲದ ಹೊರೆ ಕಡಿಮೆಯಾಗುತ್ತದೆ. ಸಾಲಕ್ಕೆ ಅರ್ಜಿ ಸಲ್ಲಿಸುವ ಮೊದಲು, ನೀವು ಪಾವತಿಸಬಹುದಾದ ಡೌನ್ ಪೇಮೆಂಟ್ ಅನ್ನು ನಿರ್ಧರಿಸಿ. ಆದಷ್ಟು ಹೆಚ್ಚು ಮೊತ್ತ ಡೌನ್‌ ಪೇಮೆಂಟ್‌ ಆಗಿ ಪಾವತಿಸುವತ್ತ ಗಮನ ಹರಿಸಿ.

ಹೋಮ್‌ ಲೋನ್‌ ಅವಧಿ

ನಿಮ್ಮ ಹೋಮ್ ಲೋನ್ ಅವಧಿಯು ಇಎಂಐ ಮೇಲೆ ನೇರ ಪರಿಣಾಮ ಬೀರುತ್ತದೆ. ದೀರ್ಘಾವಧಿ ಎಂದರೆ ಕಡಿಮೆ ಇಎಂಐಗಳು ಆದರೆ ಕಾಲಾನಂತರದಲ್ಲಿ ಹೆಚ್ಚಿನ ಬಡ್ಡಿ ಪಾವತಿಸಬೇಕಾಗುತ್ತದೆ. ಕಡಿಮೆ ಅವಧಿ ಎಂದರೆ ಹೆಚ್ಚಿನ ಇಎಂಐ ಪಾವತಿಸಿದರೆ ಸಾಕು. ಸಾಮಾನ್ಯವಾಗಿ ಇದು ಕಡಿಮೆ ಬಡ್ಡಿ ಹೊಂದಿರುತ್ತದೆ. ನೀವು ಮೊದಲೇ ಆರ್ಥಿಕ ಪರಿಸ್ಥಿತಿಯ ಮೌಲ್ಯಮಾಪನ ನಡೆಸಿದರೆ ಯಾವ ರೀತಿಯ ಇಎಂಐ ಬೇಕು ಎನ್ನುವುದನ್ನು ನಿರ್ಧರಿಸಬಹುದು. ನಿಮ್ಮ ಬಜೆಟ್‌ಗೆ ಅನುಗುಣವಾಗಿ ಇಎಂಐ ಮೊತ್ತ ತೀರ್ಮಾನಿಸಿ.

ಹೆಚ್ಚುವರಿ ಶುಲ್ಕದ ಬಗ್ಗೆ ಗಮನ ಹರಿಸಿ

ಬಡ್ಡಿ ದರದ ಜತೆಗೆ ಸಾಲವು ಸಂಸ್ಕರಣಾ ಶುಲ್ಕ, ಪೂರ್ವಪಾವತಿ ದಂಡಗಳು ಮುಂತಾದ ಇತರ ವೆಚ್ಚಗಳನ್ನು ಸಹ ಹೊಂದಿರುತ್ತದೆ. ಇದು ನಿಮ್ಮ ಒಟ್ಟಾರೆ ಸಾಲದ ವೆಚ್ಚವನ್ನು ಹೆಚ್ಚಿಸುತ್ತದೆ. ಹೀಗಾಗಿ ಸಾಲ ತೆಗೆದುಕೊಳ್ಳುವ ಮುನ್ನ ಅಂತಹ ಎಲ್ಲ ಶುಲ್ಕಗಳ ಬಗ್ಗೆ ಮಾಹಿತಿ ಪಡೆಯಿರಿ. ಈ ಶುಲ್ಕಗಳ ಬಗ್ಗೆ ಬ್ಯಾಂಕ್‌ಗಳಲ್ಲಿ ವಿಚಾರಿಸಿ.

ಸಾಲ ತೆಗೆದುಕೊಂಡ ನಂತರ ಆರ್ಥಿಕ ತುರ್ತು ಪರಿಸ್ಥಿತಿಗಳಿಗೆ ನೀವು ಸಿದ್ಧರಿದ್ದೀರಾ?

ವೈದ್ಯಕೀಯ ಸಮಸ್ಯೆಗಳು, ಉದ್ಯೋಗ ನಷ್ಟ ಮತ್ತು ಅಪಘಾತಗಳಂತಹ ತುರ್ತು ಪರಿಸ್ಥಿತಿ ಎದುರಿಸಲು ಸಿದ್ಧರಿದ್ದೀರಾ ಎನ್ನುವುದನ್ನು ನಿರ್ಧರಿಸಿ. ಇಂತಹ ತುರ್ತು ಸನ್ನಿವೇಶಕ್ಕೆ ಮೊದಲೇ ತಯಾರಾಗಿ. ಅಲ್ಲದೆ ಮೊದಲೇ ನಿಮ್ಮ ಆದಾಯದ ಒಂದು ಭಾಗವನ್ನು ತುರ್ತು ನಿಧಿಗಾಗಿ ಪ್ರತ್ಯೇಕವಾಗಿ ತೆಗೆದಿಡಿ. ತುರ್ತು ಪರಿಸ್ಥಿತಿ ಎದುರಿಸಲು ಇದು ಸಹಾಯ ಮಾಡುತ್ತದೆ. ಅಂದರೆ 4-5 ತಿಂಗಳ ಸಂಬಳದಷ್ಟು ಹಣ ನಿಮ್ಮ ಸೇವಿಂಗ್ ಅಕೌಂಟ್‌ನಲ್ಲಿ ಯಾವತ್ತೂ ಇರಬೇಕು. ಅನಿರೀಕ್ಷಿತ ಅಗತ್ಯಗಳಿಗೆ ಇದು ನೆರವಾಗುತ್ತದೆ. 

ಈ ಸುದ್ದಿಯನ್ನೂ ಓದಿ: Money Tips: ಈ ಟಿಪ್ಸ್‌ ಫಾಲೋ ಮಾಡಿದ್ರೆ 2025ರಲ್ಲಿ ನೀವು ಶ್ರೀಮಂತರಾಗೋದು ಪಕ್ಕಾ

Leave a Reply

Your email address will not be published. Required fields are marked *