Monday, 12th May 2025

2022-23ರಲ್ಲಿ 85 ಸಾವಿರ ಕೋಟಿ ರೂ. ಮೌಲ್ಯದ ಮೊಬೈಲ್‌ ಹ್ಯಾಂಡ್‌ಸೆಟ್‌ ರಫ್ತು

ನವದೆಹಲಿ : ಭಾರತದಿಂದ 2022-23ರಲ್ಲಿ ಒಟ್ಟು 85,000 ಕೋಟಿ ರೂ. ಮೌಲ್ಯದ ಮೊಬೈಲ್‌ ಹ್ಯಾಂಡ್‌ಸೆಟ್‌ ರಫ್ತಾಗಿದೆ ಎಂದು ಇಂಡಿಯಾ ಸೆಲ್ಯುಲಾರ್‌ & ಎಲೆಕ್ಟ್ರಾನಿಕ್ಸ್‌ ಅಸೋಸಿಯೇಶನ್‌ನ ಅಂಕಿ ಅಂಶಗಳು ತಿಳಿಸಿವೆ.

2021-22ರ ಸಾಲಿನಲ್ಲಿ 46,980 ಕೋಟಿ ರೂ. ಮೌಲ್ಯದ ಮೊಬೈಲ್‌ ಹ್ಯಾಂಡ್‌ಸೆಟ್‌ ರಫ್ತಾಗಿತ್ತು. ಸ್ಥಳೀಯವಾಗಿ ಮೊಬೈಲ್‌ ಫೋನ್‌ ಉತ್ಪಾದನೆಗೆ ಕೇಂದ್ರ ಸರ್ಕಾರ ಕೈಗೊಂಡಿರುವ ಉಪಕ್ರಮಗಳು ಫಲ ನೀಡುತ್ತಿವೆ. ಆಯಪಲ್‌ನ ಉತ್ಪಾದನೆಯಲ್ಲಿ ಉಂಟಾಗಿರುವ ಹೆಚ್ಚಳ, ಸ್ಯಾಮ್‌ಸಂಗ್‌ ಸೇರಿದಂತೆ ಇತರ ಕಂಪನಿಗಳೂ ಹ್ಯಾಂಡ್‌ ಸೆಟ್‌ ಉತ್ಪಾದನೆಯನ್ನು ಹೆಚ್ಚಿಸುತ್ತಿರುವುದು ಇದಕ್ಕೆ ಪ್ರಮುಖ ಕಾರಣವಾಗಿದೆ. ಭಾರತ 2027ರ ವೇಳೆಗೆ ಐಫೋನ್‌ನ 47% ಪಾಲನ್ನು ತಯಾರಿಸುವ ನಿರೀಕ್ಷೆ ಇದೆ.

ರಾಜ್ಯಗಳಲ್ಲಿ ಎಲೆಕ್ಟ್ರಾನಿಕ್ಸ್‌ ಉತ್ಪಾದನೆ ಹೆಚ್ಚಿಸಲು ಎಲ್ಲ ರಾಜ್ಯಗಳ ಐಟಿ ಸಚಿವರುಗಳ ಜತೆಗೆ ಮಾಹಿತಿ ತಂತ್ರಜ್ಞಾನ ಇಲಾಖೆಯ ಕೇಂದ್ರ ಸಚಿವ ರಾಜೀವ್‌ ಚಂದ್ರಶೇಖರ್‌ ಅವರು ನಿಯಮಿತವಾಗಿ ಸಭೆ ನಡೆಸುತ್ತಿದ್ದಾರೆ.

ಭಾರತವು ಮೊಬೈಲ್‌ ಫೋನ್‌ಗಳನ್ನು ಯುಎಇ, ಅಮೆರಿಕ, ನೆದರ್ಲೆಂಡ್‌, ಬ್ರಿಟನ್‌, ಇಟಲಿಗೆ ರಫ್ತು ಮಾಡುತ್ತಿದೆ ಎಂದು ಐಸಿಇಎ ವರದಿ ತಿಳಿಸಿದೆ. ಭಾರತದಲ್ಲಿ ಮಾರಾಟವಾಗುತ್ತಿರುವ ಸ್ಮಾರ್ಟ್‌ಫೋನ್‌ಗಳಲ್ಲಿ 97% ಸ್ಥಳೀಯವಾಗಿ ಉತ್ಪಾದನೆಯಾಗುತ್ತಿವೆ. ಜಗತ್ತಿನಲ್ಲಿಯೇ ಎರಡನೇ ಅತಿ ದೊಡ್ಡ ಮೊಬೈಲ್‌ ಉತ್ಪಾದಕ ಈಗ ಭಾರತವಾಗಿದೆ.