Sunday, 11th May 2025

ಪ್ರವೇಶ ಪರೀಕ್ಷೆಯಲ್ಲಿ ಕಡಿಮೆ ಅಂಕ: ವೈದ್ಯಕೀಯ ಆಕಾಂಕ್ಷಿ ಆತ್ಮಹತ್ಯೆ

ಸೇಲಂ: ತಮಿಳುನಾಡಿನ ಸೇಲಂ ಜಿಲ್ಲೆಯಲ್ಲಿ ರಾಷ್ಟ್ರೀಯ ಅರ್ಹತೆ ಮತ್ತು ಪ್ರವೇಶ ಪರೀಕ್ಷೆಯಲ್ಲಿ ಕಡಿಮೆ ಅಂಕ ಗಳಿಸಿದ್ದರಿಂದ ಖಿನ್ನತೆಗೆ ಒಳಗಾಗಿದ್ದ 20 ವರ್ಷದ ವೈದ್ಯಕೀಯ ಆಕಾಂಕ್ಷಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ವಡಗುಮರೈ ನಿವಾಸಿ ಸುಭಾಶ್ಚಂದ್ರ ಬೋಸ್ ಅವರು ನಾಲ್ಕು ದಿನಗಳ ಹಿಂದಷ್ಟೇ ಫಲಿತಾಂಶ ಪ್ರಕಟವಾಗಿದ್ದ ನೀಟ್ ಪರೀಕ್ಷೆಗೆ ಹಾಜರಾಗಿದ್ದು, ಅದರಲ್ಲಿ ಕಡಿಮೆ ಅಂಕ ಗಳಿಸಿದ್ದರು. ಪರೀಕ್ಷೆಯಲ್ಲಿ ಉತ್ತೀರ್ಣರಾಗಲು ಸಾಧ್ಯವಾಗದ ಕಾರಣ ಮನನೊಂದು ಕೀಟನಾಶಕ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಕೀಟನಾಶಕ ಸೇವಿಸಿ ಹಾಸಿಗೆಯಲ್ಲಿ ಒದ್ದಾಡುತ್ತಿರುವುದನ್ನು ಗಮನಿಸಿದ ಪೋಷಕರು ಆತನನ್ನು ತಕ್ಷಣ ಆತೂರಿನ ಸರ್ಕಾರಿ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಆದರೆ ಅವರ ಸ್ಥಿತಿ ಗಂಭೀರವಾಗಿದ್ದರಿಂದ ಹೆಚ್ಚಿನ ಚಿಕಿತ್ಸೆ ಗಾಗಿ ಸೇಲಂನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದಾಗ್ಯೂ ಚಿಕಿತ್ಸೆ ಫಲಕಾರಿಯಾಗದೆ ಬೋಸ್ ಮೃತಪಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ನೀಟ್ ಪರೀಕ್ಷೆಗೆ ಹಾಜರಾಗಿದ್ದ ರಾಜ್ಯದ ಹಲವು ವೈದ್ಯಕೀಯ ಆಕಾಂಕ್ಷಿಗಳ ಆತ್ಮಹತ್ಯೆಗೆ ಶರಣಾಗುತ್ತಿದ್ದಾರೆ. ವೈದ್ಯಕೀಯ ಆಕಾಂಕ್ಷಿಯ ಸಾವಿನ ಬಗ್ಗೆ ದುಃಖ ವ್ಯಕ್ತಪಡಿಸಿರುವ ಎಐಎಡಿಎಂಕೆ ನಾಯಕ ಕೆ ಪಳನಿಸ್ವಾಮಿ ಅವರು ಮೃತರ ಕುಟುಂಬಕ್ಕೆ ಸಂತಾಪ ಸೂಚಿಸಿದ್ದಾರೆ.

Leave a Reply

Your email address will not be published. Required fields are marked *