Monday, 19th May 2025

Maoists: ಮುಂದುವರಿದ ನಕ್ಸಲರ ಅಟ್ಟಹಾಸ; ಬಿಜೆಪಿ ಕಾರ್ಯಕರ್ತನ ಹತ್ಯೆ

ರಾಯ್‌ಪುರ: ಛತ್ತೀಸ್‌ಗಢದಲ್ಲಿ(Chhattisgarh) ಬಿಜೆಪಿ(BJP) ಕಾರ್ಯಕರ್ತರೊಬ್ಬರನ್ನು ಮಾವೋವಾದಿಗಳು(Maoists) ಹತ್ಯೆ ಮಾಡಿದ್ದಾರೆ ಎಂದು ಪೊಲೀಸ್‌ ಅಧಿಕಾರಿಗಳು ತಿಳಿಸಿದ್ದಾರೆ. ಈ ಮೂಲಕ ಕಳೆದ ಏಳು ದಿನಗಳಲ್ಲಿ ಐವರು ನಾಗರಿಕರನ್ನು ನಕ್ಸಲರು ಹತ್ಯೆ ಮಾಡಿದ್ದಾರೆ.

35 ವರ್ಷದ ಮೃತ ವ್ಯಕ್ತಿಯನ್ನು ಕುಡಿಯಾಮ್‌ (Kudiyaam) ಎಂದು ಗುರುತಿಸಲಾಗಿದ್ದು, ಇವರು ಬಿಜಾಪುರ ಜಿಲ್ಲೆಯ ಸೋಮನ್‌ಪಲ್ಲಿ ಗ್ರಾಮದ ನಿವಾಸಿ ಎಂದು ಗುರುತಿಸಲಾಗಿದೆ. ಬಿಜೆಪಿಯ ಸಕ್ರಿಯ ಕಾರ್ಯಕರ್ತನಾಗಿದ್ದು, ಬಹಳ ದಿನಗಳಿಂದ ನಕ್ಸಲರ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡುತ್ತಿದ್ದರು ಎಂದು ಸ್ಥಳೀಯರು ಹೇಳಿದ್ದಾರೆ.

ಮಂಗಳವಾರ (ಡಿ.10) ರಾತ್ರಿ ಕುಡಿಯಾಮ್‌ ಮನೆಗೆ ನುಗ್ಗಿದ್ದ ನಕ್ಸಲರು ಅವರನ್ನು ಹೊರಗೆ ಎಳೆದು ಕ್ರೂರವಾಗಿ ಹತ್ಯೆ ಮಾಡಿ ಪರಾರಿಯಾಗಿದ್ದಾರೆ ಎಂದು ಪೊಲೀಸ್‌ ಅಧಿಕಾರಿಗಳು ಹೇಳಿದ್ದಾರೆ. ಬುಧವಾರ( ಡಿ. 11) ಬೆಳಗ್ಗೆ ಘಟನೆ ಕುರಿತು ಮಾಹಿತಿ ಸಿಕ್ಕ ಬೆನ್ನಲ್ಲೇ, ಪೊಲೀಸರು ಸ್ಥಳಕ್ಕೆ ಧಾವಿಸಿ ಶವವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದಾರೆ. ನಕ್ಸಲರನ್ನು ಪತ್ತೆ ಹಚ್ಚಲು ಈ ಪ್ರದೇಶದಲ್ಲಿ ಶೋಧ ಕಾರ್ಯಾಚರಣೆ ಆರಂಭಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಡಿಸೆಂಬರ್ 4ರಂದು ಇಬ್ಬರು ಮಾಜಿ ಗ್ರಾಮ ಪಂಚಾಯಿತಿ ಸದಸ್ಯರನ್ನು ನಕ್ಸಲರು ಹತ್ಯೆ ಮಾಡಿದ್ದರು. ಡಿಸೆಂಬರ್ 6ರಂದು ಅಂಗನವಾಡಿ ಸಹಾಯಕಿಯನ್ನು ಹತ್ಯೆಗೈದಿದ್ದರು. ಬಸ್ತಾರ್ ವಿಭಾಗದ ಇತರ ಸ್ಥಳಗಳಲ್ಲಿ ಈ ವರ್ಷ ನಕ್ಸಲರ ಹಿಂಸಾಚಾರದಲ್ಲಿ 60ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದಾರೆ. ಬಸ್ತಾರ್‌ನಲ್ಲಿ ಹತ್ಯೆಗೀಡಾದ ಬಹುತೇಕ ಬಿಜೆಪಿ ನಾಯಕರು ಬಿಜಾಪುರದವರೇ ಆಗಿರುವುದರಿಂದ ಉನ್ನತ ಮಟ್ಟದ ತನಿಖೆ ನಡೆಸಬೇಕು ಎಂದು ಮಾಜಿ ಸಚಿವ, ಬಿಜೆಪಿ ಹಿರಿಯ ನಾಯಕ ಗಗ್ಡಾ ಹೇಳಿದ್ದಾರೆ.

ಐಇಡಿ ಸ್ಫೋಟ; ನಕ್ಸಲ್‌ ಹತ

ಛತ್ತೀಸಗಢದ ಬಿಜಾಪುರ ಜಿಲ್ಲೆಯಲ್ಲಿ ಇಂದು ಭದ್ರತಾ ಪಡೆಗಳು ನಡೆಸಿದ ಎನ್‌ಕೌಂಟರ್‌ನಲ್ಲಿ ಓರ್ವ ನಕ್ಸಲ್ ಹತನಾಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ನಕ್ಸಲ್ ನಿಗ್ರಹ ಕಾರ್ಯಾಚರಣೆಯಲ್ಲಿ ತೊಡಗಿದ್ದ ವೇಳೆ ಸುಧಾರಿತ ಸ್ಫೋಟಕ ಸಾಧನ (ಐಇಡಿ) ಸ್ಪೋಟಗೊಂಡ ಪರಿಣಾಮ ಜಿಲ್ಲಾ ಮೀಸಲು ರಕ್ಷಣಾ ಪಡೆಯ (ಡಿಆ‌‌ಜಿ) ಇಬ್ಬರು ಯೋಧರು ಗಂಭೀರವಾಗಿ ಗಾಯಗೊಂಡಿದ್ದಾರೆ ಎಂದು ಬಿಜಾಪುರ ಪೊಲೀಸ್‌ ವರಿಷ್ಠಾಧಿಕಾರಿ ಜಿತೇಂದ್ರ ಯಾದವ್ ಹೇಳಿದ್ದಾರೆ. ಘಟನಾ ಸ್ಥಳದಲ್ಲಿ ಶೋಧ ಕಾರ್ಯಾಚರಣೆ ಮುಂದುವರಿಸಲಾಗಿದೆ ಎಂದು ಯಾದವ್ ಮಾಹಿತಿ ನೀಡಿದ್ದಾರೆ.

ನಕ್ಸಲ್‌ ವಿಕ್ರಂ ಗೌಡ ಎನ್‌ಕೌಂಟರ್

ಕಳೆದ ತಿಂಗಳಷ್ಟೇ ಪಶ್ಚಿಮ ಘಟ್ಟದ ತಪ್ಪಲಿನಲ್ಲಿ ಗುಂಡಿನ ಸದ್ದು ಕೇಳಿಸಿತ್ತು. ಉಡುಪಿಯ ಹೆಬ್ರಿ ಠಾಣಾ ವ್ಯಾಪ್ತಿಯ ಕಬ್ಬಿನಾಲೆ ಅರಣ್ಯ ಪ್ರದೇಶದಲ್ಲಿ (Kabbinale Forest) ನಕ್ಸಲ್‌ ಕಾರ್ಯಕರ್ತ ವಿಕ್ರಂ ಗೌಡನನ್ನು (Vikram Gowda) ಎನ್‌ಕೌಂಟರ್‌ (Encounter) ಮಾಡಿ ಹತ್ಯೆ ಮಾಡಲಾಗಿತ್ತು. ನಕ್ಸಲ್‌ ನಿಗ್ರಹ ದಳ (ANF) ಮತ್ತು ನಕ್ಸಲರ (Naxal) ಮಧ್ಯೆ ಗುಂಡಿನ ಚಕಮಕಿ ನಡೆದಿತ್ತು. ಘಟನೆಯಲ್ಲಿ ಓರ್ವ ಹತನಾಗಿದ್ದಾನೆ ಎಂಬ ವಿಚಾರ ಪೊಲೀಸ್‌ ಮೂಲಗಳಿಂದ ತಿಳಿದು ಬಂದಿತ್ತು.

ಸರಿ ಸುಮಾರು 15 ದಿನಗಳು ಚಿಕ್ಕಮಗಳೂರು, ಉಡುಪಿ, ದಕ್ಷಿಣ ಕನ್ನಡದ ಅರಣ್ಯ ಭಾಗದಲ್ಲಿ ಎಎನ್‌ಎಫ್‌ ಕೂಂಬಿಂಗ್ ನಡೆಸಿದ್ದವು. ನವೆಂಬರ್‌ 18ರ ರಾತ್ರಿ ಐದು ಮಂದಿ ಇದ್ದ ನಕ್ಸಲರ ತಂಡ ಗ್ರಾಮಕ್ಕೆ ದಿನಸಿ ಸಾಮಗ್ರಿ ಖರೀದಿಗೆಂದು ಬಂದಿದ್ದಾಗ ನಕ್ಸಲ್ ನಿಗ್ರಹ ಪಡೆ ಕಾರ್ಯಾಚರಣೆ ನಡೆಸಿತ್ತು. ಅಷ್ಟರಲ್ಲಿ ನಕ್ಸಲರು ಎಎನ್‌ಎಫ್‌ ಮೇಲೆ ದಾಳಿ ನಡೆಸಿದ್ದರು. ದಾಳಿ-ಪ್ರತಿದಾಳಿಯಲ್ಲಿ ಓರ್ವ ಸಾವನ್ನಪ್ಪಿದ್ದ. ಉಳಿದವರು ಪರಾರಿಯಾಗಿದ್ದು ಶೋಧ ಕಾರ್ಯ ಮುಂದುವರೆದಿತ್ತು.

ಈ ಸುದ್ದಿಯನ್ನೂ ಓದಿ:SM Krishna Death: ಎಸ್‌.ಎಂ. ಕೃಷ್ಣ ನಿಧನಕ್ಕೆ ರಾಷ್ಟ್ರೀಯ ಸ್ವಯಂಸೇವಕ ಸಂಘ ಸಂತಾಪ