ನವದೆಹಲಿ: ಭಾರತದ ಮಾಜಿ ಪ್ರಧಾನಿ ಮನಮೋಹನ್ ಸಿಂಗ್ (Manmohan Singh) ಗುರುವಾರ ದೆಹಲಿ ಏಮ್ಸ್ ನಲ್ಲಿ ವಿಧಿವಶರಾಗಿದ್ದಾರೆ. ಅವರು ತಮ್ಮ ಇಳಿ ವಯಸ್ಸಿನಲ್ಲಿ ಉಸಿರಾಟದ ಸಮಸ್ಯೆಯಿಂದ ಬಳಲುತ್ತಿದ್ದರು. ಅವರಿಗೆ 92 ವರ್ಷ ವಯಸ್ಸಾಗಿತ್ತು. ಮನಮೋಹನ್ ಸಿಂಗ್ ತಮ್ಮ ದೂರದೃಷ್ಟಿಯಿಂದಾಗಿ ದೇಶದ ಆರ್ಥಿಕತೆಯ ದಿಕ್ಕನ್ನೇ ಬದಲಿಸಿದವರು. ಆರ್ಥಿಕತೆಯ ಹರಿಕಾರ ಅನ್ನಿಸಿಕೊಂಡವರು. ಸ್ವಭಾವತಃ ಮಿತಭಾಷಿಯಾಗಿದ್ದ ಸಿಂಗ್ ಮೌನ ಸಾಧಕ (Dalai Lama Letter).
ಮನಮೋಹನ್ ಸಿಂಗ್ ನಿಧನದ ಸುದ್ದಿ ಕೇಳಿ ಹಲವು ಗಣ್ಯರು ಕಂಬನಿ ಮಿಡಿದಿದ್ದಾರೆ. ಅಂತಾರಾಷ್ಟ್ರೀಯ ಪ್ರಭಾವಿ ವ್ಯಕ್ತಿಗಳು ಅಗಲಿದ ನಾಯಕನಿಗೆ ಪತ್ರದ ಮೂಲಕ ಸಂತಾಪ ಸೂಚಿಸಿದ್ದಾರೆ. ಸಿಂಗ್ ಕುಟುಂಬಕ್ಕೆ ಸಾಂತ್ವನ ಹೇಳಿದ್ದಾರೆ. ದೇಶದಲ್ಲಿ ಈಗ ಅಕ್ಷರಶಃ ಶೋಕದ ಅಲೆ ಎದ್ದಿದೆ. ಈ ಮಧ್ಯೆ ಮನಮೋಹನ್ ಸಿಂಗ್ ಅವರ ಸಾವಿನ ಸುದ್ದಿ ಕೇಳಿ ಧಾರ್ಮಿಕ ನಾಯಕ ದಲೈಲಾಮಾ ಅವರು ತಮ್ಮ ದುಃಖವನ್ನು ವ್ಯಕ್ತಪಡಿಸಿ ಪತ್ರ ಬರೆದಿದ್ದಾರೆ. ಮನಮೋಹನ್ ಸಿಂಗ್ ಅವರ ಪತ್ನಿ ಗುರುಶರಣ್ ಕೌರ್ ಅವರಿಗೆ ದಲೈಲಾಮಾ ಪತ್ರ ಬರೆದಿದ್ದು,ಭಾವುಕ ನುಡಿಗಳನ್ನಾಡಿದ್ದಾರೆ.
"Felt He Was Like An Elder Brother To Me": Dalai Lama On Manmohan Singh"
— Tibet Rights Collective (@TibetCollective) December 27, 2024
We can rejoice that for 92 years he lived a truly meaningful life — an inspiration to us all," the Dalai Lama wrote.#ManmohanSinghRIP #ManmohanSingh #ManMohanSinghJi pic.twitter.com/6104k6Wm4K
“ಸಿಂಗ್ ಅರ್ಥಪೂರ್ಣವಾಗಿ ಬದುಕಿ ಹೋಗಿದ್ದಾರೆ. ಅವರು ನಮಗೆಲ್ಲರಿಗೂ ಸ್ಫೂರ್ತಿ. ನಾನು ಅವರನ್ನು ನನ್ನ ಪ್ರಾರ್ಥನೆಯಲ್ಲಿ ನೆನಪಿಸಿಕೊಳ್ಳುತ್ತೇನೆ. ಈ ದುಃಖದ ಸಮಯದಲ್ಲಿ ನಿಮಗೆ ಮತ್ತು ನಿಮ್ಮ ಕುಟುಂಬಕ್ಕೆ ನನ್ನ ಸಂತಾಪವನ್ನು ಸೂಚಿಸುತ್ತಿದ್ದೇನೆ” ಎಂದು ಅವರು ಬರೆದಿದ್ದಾರೆ. ʼʼಪ್ರತಿಬಾರಿ ಭೇಟಿಯಾದಾಗಲೂ ಅವರು ನನ್ನ ಬಗ್ಗೆ ಅತೀವ ಕಾಳಜಿ ತೋರುತ್ತಿದ್ದರು. ಉತ್ತಮ ಸಲಹೆಗಳನ್ನು ನೀಡುತ್ತಿದ್ದರು. ಅವರು ನನಗೆ ಹಿರಿಯಣ್ಣನಂತಿದ್ದರು. ನಿಮ್ಮ ಪತಿ ಇತರರಿಗೆ ಸಹಾಯ ಮಾಡುವ ಗುಣವನ್ನು ಹೊಂದಿದ್ದರು. ಅವರಿಂದ ನಾವು ಪ್ರೇರಣೆಗೊಂಡಿದ್ದೇವೆ. ಅವರು ಭಾರತದ ಅಭಿವೃದ್ಧಿಗೆ ಮತ್ತು ಆರ್ಥಿಕ ಬೆಳವಣಿಗೆಗೆ ಮಹತ್ವದ ಕೊಡುಗೆ ನೀಡಿದ್ದಾರೆ. ಕೋಟ್ಯಂತರ ಜನ ಸಾಮಾನ್ಯರ ಜೀವನವನ್ನು ಸುಧಾರಿಸಿದ್ದಾರೆ. ಅವರು ಟಿಬೆಟಿಯನ್ ಜನರಿಗೆ ಉತ್ತಮ ಸ್ನೇಹಿತರಾಗಿದ್ದರು”ಎಂದು ದಲೈಲಾಮಾ ತಮ್ಮ ಪತ್ರದ ಮೂಲಕ ಮನಮೋಹನ್ ಸಿಂಗ್ ಜತೆಗಿನ ಅವರ ಬಾಂಧವ್ಯವನ್ನು ನೆನಪು ಮಾಡಿಕೊಂಡಿದ್ದಾರೆ.
ಸರ್ಕಾರಿ ಗೌರವಗಳೊಂದಿಗೆ ನಾಳೆ ಅಂತ್ಯಕ್ರಿಯೆ
ಮನಮೋಹನ್ ಅವರ ಅಂತ್ಯಕ್ರಿಯೆಯನ್ನು ಶನಿವಾರಕ್ಕೆ ಮುಂದೂಡಲಾಗಿದೆ. ಅವರ ಮಕ್ಕಳು ಅಮೆರಿಕದಲ್ಲಿ ವಾಸಿಸುತ್ತಿದ್ದು, ಅವರು ಬರುವವರೆಗೂ ಅಂತ್ಯಕ್ರಿಯೆ ನಡೆಯುವಂತಿಲ್ಲ.ಇಂದು ಮಧ್ಯಾಹ್ನ 1 ಗಂಟೆಗೆ ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರ ಪುತ್ರಿ ಅಮೆರಿಕದಿಂದ ವಾಪಸಾಗಲಿದ್ದಾರೆ ಎಂದು ಮೂಲಗಳು ತಿಳಿಸಿದ್ದವು.
ಕಾಂಗ್ರೆಸ್ ಹೇಳಿರುವಂತೆ, ಮನಮೋಹನ್ ಸಿಂಗ್ ಪುತ್ರಿ ಇಂದು ರಾತ್ರಿಯೇ ಅಮೆರಿಕದಿಂದ ವಾಪಸಾಗಲಿದ್ದಾರೆ. ಹೀಗಾಗಿ ಇಂದು ಅಂತ್ಯಕ್ರಿಯೆ ನಡೆಯುವುದಿಲ್ಲ. ಮೂಲಗಳ ಪ್ರಕಾರ, ನಾಳೆ ಬೆಳಗ್ಗೆ 8ರಿಂದ 10ರವರೆಗೆ ಮನಮೋಹನ್ ಸಿಂಗ್ ಅವರ ಪಾರ್ಥಿವ ಶರೀರವನ್ನು ಅಂತಿಮ ದರ್ಶನಕ್ಕಾಗಿ ಕಾಂಗ್ರೆಸ್ ಪ್ರಧಾನ ಕಚೇರಿಯಲ್ಲಿ ಇರಿಸಲಾಗುತ್ತದೆ. ರಾಹುಲ್ ಗಾಂಧಿ, ಸೋನಿಯಾ ಗಾಂಧಿ ಸೇರಿದಂತೆ ಎಲ್ಲ ರಾಜಕೀಯ ಪ್ರಮುಖ ನಾಯಕರು ಕಾಂಗ್ರೆಸ್ ಪ್ರಧಾನ ಕಚೇರಿಯಲ್ಲಿ ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರಿಗೆ ಶ್ರದ್ಧಾಂಜಲಿ ಸಲ್ಲಿಸಲಿದ್ದಾರೆ. ಅದರ ನಂತರ, ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರ ಅಂತಿಮ ಯಾತ್ರೆಯು ಕಾಂಗ್ರೆಸ್ ಪ್ರಧಾನ ಕಚೇರಿಯಿಂದಲೇ ಪ್ರಾರಂಭವಾಗಲಿದೆ.
ಈ ಸುದ್ದಿಯನ್ನೂ ಓದಿ:Manmohan Singh: ಮನಮೋಹನ್ ಸಿಂಗ್ BMW ಇಷ್ಟಪಟ್ಟವರಲ್ಲ-ಮಾರುತಿ 800 ಅವರ ಆಲ್‌ಟೈಮ್ ಫೇವರಿಟ್ ಕಾರು!