Saturday, 10th May 2025

Manmohan Singh Passes Away: ಮನಮೋಹನ್ ಸಿಂಗ್ ನಿಧನ; ಮೋದಿ, ರಾಹುಲ್‌ ಗಾಂಧಿ ಸೇರಿ ಹಲವು ನಾಯಕರ ಸಂತಾಪ

ಹೊಸದಿಲ್ಲಿ: ಮಾಜಿ ಪ್ರಧಾನಿ ಮನಮೋಹನ್‌ ಸಿಂಗ್‌ (Manmohan Singh) ಇಂದು (ಡಿ. 26) ನಿಧನ ಹೊಂದಿದ್ದಾರೆ. ಸತತ 10 ವರ್ಷಗಳ ಕಾಲ ಯುಪಿಎ ಸರ್ಕಾರದಲ್ಲಿ ಪ್ರಧಾನಿಯಾಗಿದ್ದ ಅವರಿಗೆ 92 ವರ್ಷ ವಯಸ್ಸಾಗಿತ್ತು. ಅವರ ನಿಧನಕ್ಕೆ ಪ್ರಧಾನಿ ನರೇಂದ್ರ ಮೋದಿ ಸಹಿತ ಹಲವು ಗಣ್ಯರು ಕಂಬನಿ ಮಿಡಿದಿದ್ದಾರೆ (Manmohan Singh Passes Away).

ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಈ ಬಗ್ಗೆ ಬರೆದುಕೊಂಡಿರುವ ಮೋದಿ ಅವರು, “ಭಾರತ ತನ್ನ ಅತ್ಯಂತ ಪ್ರಖ್ಯಾತ ನಾಯಕರಲ್ಲಿ ಒಬ್ಬರಾದ ಡಾ.ಮನಮೋಹನ್ ಸಿಂಗ್ ಅವರ ನಿಧನಕ್ಕೆ ಶೋಕಿಸುತ್ತಿದೆ. ವಿನಮ್ರ ಮೂಲದಿಂದ ಬೆಳೆದ ಅವರು ಗೌರವಾನ್ವಿತ ಅರ್ಥಶಾಸ್ತ್ರಜ್ಞರಾಗಿ ಗುರುತಿಸಿಕೊಂಡರು. ಪ್ರಧಾನಿ, ಹಣಕಾಸು ಸಚಿವರು ಸೇರಿದಂತೆ ವಿವಿಧ ಸರ್ಕಾರಿ ಹುದ್ದೆಗಳಲ್ಲಿ ಸೇವೆ ಸಲ್ಲಿಸಿ ನಮ್ಮ ಆರ್ಥಿಕ ನೀತಿಯ ಮೇಲೆ ಬಲವಾದ ಛಾಪು ಮೂಡಿಸಿದ್ದರು. ಪ್ರಧಾನಿಯಾಗಿ ಅವರು ಜನರ ಜೀವನವನ್ನು ಸುಧಾರಿಸಲು ಸಾಕಷ್ಟು ಶ್ರಮವಹಿಸಿದ್ದರುʼʼ ಎಂದು ಮೋದಿ ಬರೆದುಕೊಂಡಿದ್ದಾರೆ.

ʼʼಡಾ. ಮನಮೋಹನ್ ಸಿಂಗ್ ಅವರು ಪ್ರಧಾನಿಯಾಗಿದ್ದಾಗ ಮತ್ತು ನಾನು ಗುಜರಾತ್ ಮುಖ್ಯಮಂತ್ರಿಯಾಗಿದ್ದಾಗ ನಿಯಮಿತವಾಗಿ ನಾವು ಸಂವಹನ ನಡೆಸಿದ್ದೇವೆ. ಆಡಳಿತಕ್ಕೆ ಸಂಬಂಧಿಸಿದ ವಿವಿಧ ವಿಷಯಗಳ ಬಗ್ಗೆ ನಾವು ಚರ್ಚೆಗಳನ್ನು ನಡೆಸಿದ್ದೇವೆ. ಅವರ ಬುದ್ಧಿವಂತಿಕೆ ಮತ್ತು ನಮ್ರತೆ ಯಾವಾಗಲೂ ಗೋಚರಿಸುತ್ತಿತ್ತುʼʼ ಎಂದು ಮೋದಿ ಸ್ಮರಿಸಿಕೊಂಡಿದ್ದಾರೆ.

ಮಲ್ಲಿಕಾರ್ಜುನ ಖರ್ಗೆ ಹೇಳಿದ್ದೇನು?

ಕಾಂಗ್ರೆಸ್‌ ಮುಖಂಡ ಮಲ್ಲಿಕಾರ್ಜುನ ಖರ್ಗೆ ಅವರೂ ತೀವ್ರ ದುಃಖ ವ್ಯಕ್ತಪಡಿಸಿದ್ದಾರೆ. ʼʼನಿಸ್ಸಂದೇಹವಾಗಿ ಇತಿಹಾಸವು ನಿಮ್ಮನ್ನು ನೆನಪಿಸಿಕೊಳ್ಳುತ್ತದೆ ಡಾ. ಮನಮೋಹನ್ ಸಿಂಗ್ ಜೀ! ಮಾಜಿ ಪ್ರಧಾನಿ ಅವರ ನಿಧನದಿಂದ ಭಾರತವು ದೂರದೃಷ್ಟಿಯ ರಾಜನೀತಿ ತಜ್ಞ, ಅಪ್ರತಿಮ ಸಮಗ್ರತೆಯ ನಾಯಕ ಮತ್ತು ಸಾಟಿಯಿಲ್ಲದ ಸ್ಥಾನಮಾನದ ಅರ್ಥಶಾಸ್ತ್ರಜ್ಞನನ್ನು ಕಳೆದುಕೊಂಡಿದೆ. ಅವರ ಆರ್ಥಿಕ ಉದಾರೀಕರಣ ಮತ್ತು ಹಕ್ಕುಗಳ ಆಧಾರಿತ ಕಲ್ಯಾಣ ಮಾದರಿ ನೀತಿಯು ಕೋಟ್ಯಂತರ ಭಾರತೀಯರ ಜೀವನವನ್ನು ಪರಿವರ್ತಿಸಿದೆ. ಅವರ ದೂರದೃಷ್ಟಿ ಕೋಟ್ಯಂತರ ಜನರನ್ನು ಬಡತನದಿಂದ ಮೇಲಕ್ಕೆತ್ತಿದೆʼʼ ಎಂದು ಹೇಳಿದ್ದಾರೆ.

ಮುಂದುವರಿದು, ʼʼಭಾರತದ ಆಕಾಂಕ್ಷೆಗಳನ್ನು ಸಾಕಾರಗೊಳಿಸಿದ, ಹಿರಿಯ ಸಹೋದ್ಯೋಗಿ, ಸೌಮ್ಯ ಬುದ್ಧಿಜೀವಿ ಮತ್ತು ವಿನಮ್ರ ನಾಯಕನನ್ನು ಕಳೆದುಕೊಂಡಿರುವುದು ತೀವ್ರ ನೋವು ತಂದಿದೆ. ಕಾರ್ಮಿಕ ಸಚಿವನಾಗಿ, ರೈಲ್ವೆ ಸಚಿವನಾಗಿ ಮತ್ತು ಸಮಾಜ ಕಲ್ಯಾಣ ಸಚಿವನಾಗಿ ಅವರ ಕ್ಯಾಬಿನೆಟ್‌ನ ಭಾಗವಾಗಿರುವುದಕ್ಕೆ ನನಗೆ ಹೆಮ್ಮೆ ಇದೆ. ಮಾತಿಗಿಂತ ಕ್ರಿಯಾಶೀಲರಾಗಿದ್ದ ಅವರು ರಾಷ್ಟ್ರ ನಿರ್ಮಾಣಕ್ಕೆ ನೀಡಿದ ಅಪಾರ ಕೊಡುಗೆ ಭಾರತೀಯ ಇತಿಹಾಸದಲ್ಲಿ ಎಂದೆಂದಿಗೂ ಅಚ್ಚಳಿಯದೆ ಉಳಿಯುತ್ತದೆ. ಈ ದುಃಖದ ಕ್ಷಣದಲ್ಲಿ, ಅವರ ಕುಟುಂಬ, ಸ್ನೇಹಿತರು ಮತ್ತು ಅಸಂಖ್ಯಾತ ಅಭಿಮಾನಿಗಳಿಗೆ ನನ್ನ ಆಳವಾದ ಮತ್ತು ಹೃತ್ಪೂರ್ವಕ ಸಂತಾಪವನ್ನು ವ್ಯಕ್ತಪಡಿಸುತ್ತೇನೆʼʼ ಎಂದು ಬರೆದುಕೊಂಡಿದ್ದಾರೆ.

ರಾಹುಲ್‌ ಗಾಂಧಿ ಸಂತಾಪ

ಇನ್ನು ಕಾಂಗ್ರೆಸ್‌ ಮುಖಂಡ ರಾಹುಲ್‌ ಗಾಂಧಿ ಅವರು ಕೂಡ ಧೀಮಂತ ನಾಯಕನಿಗೆ ಶ್ರದ್ಧಾಂಜಲಿ ಸಲ್ಲಿಸಿದ್ದಾರೆ. ʼʼಮನಮೋಹನ್ ಸಿಂಗ್ ಅವರು ಅಪಾರ ಬುದ್ಧಿವಂತಿಕೆ ಮತ್ತು ಸಮಗ್ರತೆಯಿಂದ ಭಾರತವನ್ನು ಮುನ್ನಡೆಸಿದರು. ಅವರ ನಮ್ರತೆ ಮತ್ತು ಅರ್ಥಶಾಸ್ತ್ರದ ಆಳವಾದ ತಿಳುವಳಿಕೆ ರಾಷ್ಟ್ರಕ್ಕೆ ಸ್ಫೂರ್ತಿ ನೀಡಿದೆ. ನಾನು ಒಬ್ಬ ಮಾರ್ಗದರ್ಶಕನನ್ನು ಕಳೆದುಕೊಂಡಿದ್ದೇನೆ. ಅವರನ್ನು ಮೆಚ್ಚಿದ ಲಕ್ಷಾಂತರ ಜನರು ಅವರನ್ನು ಅತ್ಯಂತ ಹೆಮ್ಮೆಯಿಂದ ನೆನಪಿಸಿಕೊಳ್ಳುತ್ತಾರೆʼʼ ಎಂದಿದ್ದಾರೆ.

ಕೇಂದ್ರ ಸಚಿವರಾದ ರಾಜನಾಥ್‌ ಸಿಂಗ್‌, ಅಮಿತ್‌ ಶಾ ಸೇರಿದಂತೆ ಹಲವು ಗಣ್ಯರು, ರಾಜಕೀಯ ಮುಖಂಡರು, ಸಂತಾಪ ಸೂಚಿಸಿದ್ದಾರೆ.

ಈ ಸುದ್ದಿಯನ್ನೂ ಓದಿ: Manmohan Singh: ಆರ್ಥಿಕ ಸುಧಾರಣೆಗಳ ಹರಿಕಾರ, ಮಾಜಿ ಪ್ರಧಾನಿ ಮನಮೋಹನ್ ಸಿಂಗ್‍ ಇನ್ನಿಲ್ಲ