Saturday, 10th May 2025

Manmohan Singh: ಮನಮೋಹನ್‌ ಸಿಂಗ್‌ಗೆ ಅಂತಿಮ ವಿದಾಯ; ಸಿಖ್‌ ಸಂಪ್ರದಾಯದಂತೆ ಅಂತ್ಯಕ್ರಿಯೆ; ಪಾರ್ಥಿವ ಶರೀರಕ್ಕೆ ಹೆಗಲು ಕೊಟ್ಟ ರಾಹುಲ್‌ ಗಾಂಧಿ

manmohansingh (1)

ನವದೆಹಲಿ: ಗುರುವಾರ ರಾತ್ರಿ ವಿಧಿವಶರಾದ ಮಾಜಿ ಪ್ರಧಾನಿ ಡಾ. ಮನಮೋಹನ್ ಸಿಂಗ್ (Manmohan Singh) ಅವರ ಅಂತ್ಯಕ್ರಿಯೆ (Funeral) ಇಂದು ಸಕಲ ಸರ್ಕಾರಿ ಗೌರವಗಳೊಂದಿಗೆ ನೆರವೇರಿತು. ಕೆಂಪು ಕೋಟೆಯ ಹಿಂಭಾಗದಲ್ಲಿರುವ ನಿಗಮ್‌ಬೋಧ್‌ಘಾಟ್‌ನಲ್ಲಿ ಸಿಖ್‌ ಸಂಪ್ರದಾಯ ಪ್ರಕಾರ ಮನಮೋಹನ್‌ ಸಿಂಗ್‌ ಅವರ ಅಂತ್ಯಕ್ರಿಯೆ ನಡೆಸಲಾಯಿತು.

ಇಂದು ಬೆಳಗ್ಗೆ 9.30ರವರೆಗೆ ಸಿಂಗ್‌ ಅವರ ಪಾರ್ಥಿವ ಶರೀರವನ್ನು ಸಾರ್ವಜನಿಕರ ದರ್ಶನಕ್ಕಾಗಿ ಎಐಸಿಸಿ ಕೇಂದ್ರ ಕಚೇರಿಯಲ್ಲಿ ಇಡಲಾಗಿತ್ತು. ನಂತರ ನಿಗಮ್‌ಬೋಧ್‌ ಘಾಟ್‌ವರೆಗೆ ಅಂತಿಮ ಯಾತ್ರೆ ನಡೆಸಲಾಯಿತು. ನಿಗಮ್‌ಬೋಧ್‌ ಘಾಟ್‌ನಲ್ಲಿ ಅವರ ಪಾರ್ಥೀವ ಶರೀರಕ್ಕೆ ಮೂರು ಸೇನೆಗಳು ಅಗಲಿದ ದಿಗ್ಗಜನಿಗೆ ಗೌರವ ನಮನ ಸಲ್ಲಿಸಿದವು. ಇನ್ನು ಅಂತ್ಯಕ್ರಿಯೆಯಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮು, ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಗೃಹಸಚಿವ ಅಮಿತ್‌ ಶಾ, ಸಿಎಂ ಸಿದ್ದರಾಮಯ್ಯ, ಸೋನಿಯಾ ಗಾಂಧಿ ಮಲ್ಲಿಕಾರ್ಜುನ ಖರ್ಗೆ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು. ಇನ್ನು ಸಿಂಗ್‌ ಪಾರ್ಥೀವ ಶರೀರಕ್ಕೆ ಹೆಗಲು ಕೊಡುವ ಮೂಲಕ ರಾಹುಲ್‌ ಗಾಂಧಿ ವಿಶೇಷ ಗೌರವ ತೋರಿದರು.

ನಿಗಮ್‌ಬೋಧ್‌ ಘಾಟ್‌ ಬಳಿಯೇ ಬಹುತೇಕ ಮಾಜಿ ಪ್ರಧಾನಿಗಳ ಅಂತಿಮ ಸಂಸ್ಕಾರ ನಡೆದಿವೆ. ಹಾಗಾಗಿ ಡಾ.ಮನಮೋಹನ್ ಸಿಂಗ್ ಅವರ ಅಂತಿಮ ಸಂಸ್ಕಾರವೂ ಅಲ್ಲಿಯೇ ನೆರವೇರಿದೆ. ಅವರ ಮಕ್ಕಳು ಅಮೆರಿಕದಲ್ಲಿ ವಾಸಿಸುತ್ತಿದ್ದು, ನಿನ್ನೆ ಬಂದಿಳಿದಿದ್ದರು. ಸಿಂಗ್ ಅವರ ಅಂತ್ಯಕ್ರಿಯೆಯ ಸಂಪೂರ್ಣ ಪ್ರಕ್ರಿಯೆಯಲ್ಲಿ ಸರ್ಕಾರವೂ ಭಾಗಿಯಾಗಿದೆ.

ರಾಷ್ಟ್ರಪತಿ ಭವನದಲ್ಲಿ ರಾಷ್ಟ್ರಧ್ವಜವನ್ನು ಅರ್ಧಕ್ಕೆ ಇಳಿಸಲಾಗಿದೆ. ಕೇಂದ್ರ ಸರ್ಕಾರ ಎಲ್ಲಾ ಕಾರ್ಯಕ್ರಮಗಳನ್ನು ರದ್ದುಗೊಳಿಸಿದೆ ಮತ್ತು 7 ದಿನಗಳ ರಾಷ್ಟ್ರೀಯ ಶೋಕಾಚರಣೆಯನ್ನು ಘೋಷಿಸಿದೆ. ಅವರ ನಿಧನದಿಂದಾಗಿ ಇಡೀ ದೇಶದಲ್ಲಿ ಶೋಕದ ಅಲೆ ಎದ್ದಿದ್ದು, ಪ್ರಧಾನಿ ನರೇಂದ್ರ ಮೋದಿ ರಾಷ್ಟ್ರಪತಿ, ಉಪರಾಷ್ಟ್ರಪತಿ, ಪ್ರಧಾನಿಯಿಂದ ಹಿಡಿದು ವಿರೋಧ ಪಕ್ಷದ ನಾಯಕರೆಲ್ಲರೂ ಮನಮೋಹನ್‌ ಸಿಂಗ್‌ ಅವರ ನಿಧನಕ್ಕೆ ಕಂಬನಿ ಮಿಡಿದಿದ್ದಾರೆ.

ಈ ಸುದ್ದಿಯನ್ನೂ ಓದಿ: Manmohan Singh: ಮನಮೋಹನ್‌ ಸಿಂಗ್‌ ಅಂತಿಮ ದರ್ಶನ ಪಡೆದ ಪ್ರಧಾನಿ ಮೋದಿ

ಮನಮೋಹನ್‌ ಸಿಂಗ್‌ ಅವರ ಸ್ಮಾರಕಕ್ಕೆ ಜಾಗವನ್ನು ನೀಡಲು ಕೇಂದ್ರ ಸರ್ಕಾರ ನಿರ್ಧರಿಸಿದೆ ಎಂದು ಗೃಹ ವ್ಯವಹಾರಗಳ ಸಚಿವಾಲಯ ತಿಳಿಸಿದೆ. ಈ ಬಗ್ಗೆ ಅವರ ಕುಟುಂಬ ಮತ್ತು ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರಿಗೆ ತಿಳಿಸಲಾಗಿದೆ. ಮಲ್ಲಿಕಾರ್ಜುನ ಖರ್ಗೆ ಅವರು ಈ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಅವರನ್ನು ಒತ್ತಾಯಿಸಿದ್ದರು.

ಎರಡು ಅವಧಿಗೆ ದೇಶದ ಪ್ರಧಾನಿಯಾಗಿದ್ದ ಸಿಂಗ್ ಅವರ ಸ್ಮಾರಕ ಸ್ಥಾಪಿಸುವ ಕುರಿತು ಮೋದಿ ಮಾತನಾಡಿದ ಬಳಿಕ ಅವರಿಗೆ ಪತ್ರ ಬರೆದಿರುವ ಖರ್ಗೆ, ಡಿ 28 ರಂದು ಮನಮೋಹನ್ ಸಿಂಗ್ ಅಂತ್ಯಸಂಸ್ಕಾರ ನಡೆಯಲಿರುವ ಸ್ಥಳ ದೇಶದ ಹೆಮ್ಮೆಯ ಪುತ್ರನ ಸ್ಮಾರಕದ ಪವಿತ್ರ ಸ್ಥಳವಾಗಿಸುವ ನಿಟ್ಟಿನಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ ದೂರವಾಣಿಯಲ್ಲಿ ಮಾತುಕತೆ ನಡೆಸಿರುವುದಾಗಿ ತಿಳಿಸಿದ್ದಾರೆ.