Sunday, 11th May 2025

ಮಂಗರ್ ಧಾಮ್ ಪ್ರದೇಶ ಇನ್ನು ರಾಷ್ಟ್ರೀಯ ಸ್ಮಾರಕ

ಮಂಗರ್: ರಾಜಸ್ಥಾನದ ಬನ್ಸವಾರ ಜಿಲ್ಲೆಯ ಮಂಗರ್ ಧಾಮ್ ಪ್ರದೇಶವನ್ನು ಪ್ರಧಾನ ಮಂತ್ರಿ ನರೇಂದ್ರ ಮೋದಿ ರಾಷ್ಟ್ರೀಯ ಸ್ಮಾರಕವನ್ನಾಗಿ ಘೋಷಣೆ ಮಾಡಿದ್ದಾರೆ.

ರಾಜಸ್ಥಾನ ಮತ್ತು ಗುಜರಾತ್‍ನ ಗಡಿ ಭಾಗದ ಮಂಗರ್‍ನಲ್ಲಿ ಬೃಹತ್ ಸಾರ್ವಜನಿಕ ಸಮಾವೇಶವನ್ನು ಉದ್ದೇಶಿಸಿ ಪ್ರಧಾನಿ ಮಾತನಾಡಿ, ಬುಡಕಟ್ಟು ಸಮುದಾಯದ ಜನರ ಸಾಮೂಹಿಕ ಹತ್ಯೆಯಾದ ಮಂಗರ್‍ಧಾಮ್ ಪ್ರದೇಶವನ್ನು ಪ್ರಧಾನಿ ಅವರು ರಾಷ್ಟ್ರೀಯ ಸ್ಮಾರಕವನ್ನಾಗಿ ಘೋಷಿಸುವುದಾಗಿ ಹೇಳಿದರು.

ರಾಜಸ್ಥಾನದ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್, ಮಧ್ಯ ಪ್ರದೇಶದ ಮುಖ್ಯಮಂತ್ರಿ ಶಿವರಾಜ್‍ಸಿಂಗ್ ಚೌಹಾಣ್, ಗುಜರಾತ್‍ನ ಮುಖ್ಯಮಂತ್ರಿ ಭೂಪೇಂದ್ರ ಪಟೇಲ್ ಅವರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

ಬ್ರಿಟಿಷ್ ಆಡಳಿತದ ವಿರುದ್ದ ಸಮಾಜ ಸುಧಾರಕ ಗೋವಿಂದ ಗುರು ನೇತೃತ್ವದಲ್ಲಿ 1913ರಲ್ಲಿ ಸಾವಿರಾರು ಆದಿವಾಸಿಗಳು ಮತ್ತು ಬುಡಕಟ್ಟು ಜನರು ಸಮಾವೇಶ ಗೊಂಡಿದ್ದರು. ಆ ವೇಳೆ ದಾಳಿ ನಡೆಸಿದ ಬ್ರಿಟಿಷ್ ಪ್ರೇರಿತ ಸೇನೆ ಸಾಮೂಹಿಕ ಹತ್ಯಾಕಾಂಡ ನಡೆಸಿತ್ತು. 1500ಕ್ಕೂ ಹೆಚ್ಚು ಜನರು ಹತ್ಯೆಯಾಗಿದ್ದರು ಎಂದು ಐತಿಹಾಸಿಕ ದಾಖಲೆಗಳಿವೆ.

ಭೂಪೇಂದ್ರ ಪಟೇಲ್ ಅವರು, 1913ರಲ್ಲಿ ಮಂಗರ್‍ನಲ್ಲಿ ನಡೆದ ಹತ್ಯಾಕಾಂಡ ಪಂಜಾಬ್‍ನ ಜಲಿಯನ್‍ವಾಲಾಬಾಗ್‍ಗಿಂತಲೂ ಭೀಕರವಾಗಿತ್ತು ಎಂದು ವಿಷಾದಿಸಿದ್ದಾರೆ.

ಇದೇ ಕಾರ್ಯಕ್ರಮದಲ್ಲಿ ಮಾತನಾಡಿದ ಅಶೋಕ್ ಗೆಲ್ಹೋಟ್, ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಇಂದು ವಿಶ್ವದ ಯಾವುದೇ ಮೂಲೆಗೆ ಹೋದರೂ ಗೌರವಾಧರಗಳು ಸಿಗುತ್ತಿವೆ. ಕಾರಣವೆನೆಂದರೆ ಅವರು ಪ್ರಜಾಪ್ರಭುತ್ವದ ಬೇರುಗಳು ಭದ್ರ ವಾಗಿರುವ ದೇಶದ ಪ್ರಧಾನಿಯಾಗಿದ್ದಾರೆ ಎಂಬುದು.