Wednesday, 14th May 2025

Sukhbir Singh Badal: ಸುಖಬೀರ್ ಸಿಂಗ್ ಬಾದಲ್ ಮೇಲೆ ಗುಂಡಿನ ದಾಳಿ

ಚಂಡೀಗಢ: ಸಿಕ್ಖ್ ಧಾರ್ಮಿಕ ಸಂಸ್ಥೆ ಅಕಾಲ್‌ ತಖ್ತ್‌ನಿಂದ ಧರ್ಮದ್ರೋಹಕ್ಕಾಗಿ ಶಿಕ್ಷಿತರಾಗಿರುವ ಪಂಜಾಬ್‌ನ ಮಾಜಿ ಡಿಸಿಎಂ ಸುಖ್ಬೀರ್‌ ಸಿಂಗ್‌ ಬಾದಲ್‌(Sukhbir Singh Badal) ಮೇಲೆ ಬುಧವಾರ ಬೆಳಗ್ಗೆ ಅಮೃತಸರದ ಗೋಲ್ಡನ್ ಟೆಂಪಲ್ ಪ್ರವೇಶದ್ವಾರದ ಬಳಿ ವ್ಯಕ್ತಿಯೊಬ್ಬ ಗುಂಡಿನ ದಾಳಿ ನಡೆಸಿ ಹತ್ಯೆಗೆ ಯತ್ನಿಸಿರುವುದಾಗಿ ತಿಳಿದುಬಂದಿದೆ. ಮಂಗಳವಾರವಷ್ಟೇ ಸುಖ್ಬೀರ್‌ ಸಿಂಗ್‌ ಬಾದಲ್‌ ತಮ್ಮ ಶಿಕ್ಷೆಯನ್ನು ಸ್ವೀಕರಿಸಲು ಪ್ರಾರಂಭಿಸಿದ್ದರು.

ಸಿಂಗ್‌ ಬಾದಲ್‌ ಅವರಿಗೆ ಸೋಮವಾರ ಶಿಕ್ಷೆ ಘೋಷಣೆಯಾಗಿತ್ತು. 2007-17ರವರೆಗೆ ಪಂಜಾಬ್‌ನ ಎಸ್‌ಎಡಿ ಸರ್ಕಾರವು ಸಿಖ್‌ ಧರ್ಮಗ್ರಂಥಕ್ಕೆ ಅವಮಾನಿಸಿದೆ ಮತ್ತು ಡೇರಾ ಸಚ್ಚಾ ಸೌದಾ ಮುಖ್ಯಸ್ಥ ಗುರ್ಮೀತ್‌ ರಾಮ್‌ ರಹೀಮ್‌ಗೆ ಬೆಂಬಲಿಸುವ ಮೂಲಕ ಧರ್ಮನಿಂದನೆ ನಡೆಸಿದೆ ಎಂದು ಅಕಾಲ್‌ ತಖ್ತ್‌ ಆಗಸ್ಟ್‌ನಲ್ಲಿ ತೀರ್ಪು ಪ್ರಕಟಿಸಿತ್ತು.

ಕುತ್ತಿಗೆಗೆ ಫ‌ಲಕ, ಕೈಯಲ್ಲಿ ಈಟಿ ಹಿಡಿದ ಸುಖ್ಬೀರ್‌ ಸಿಂಗ್‌, ತಮ್ಮ ಗಾಲಿ ಕುರ್ಚಿಯಲ್ಲಿ ಕುಳಿತೇ ಅಮೃತಸರದ ಸ್ವರ್ಣ ಮಂದಿರದ ಪ್ರವೇಶದ್ವಾರದ ಸೇವಾದಾರನ ವೃತ್ತಿ ನಿಭಾಯಿಸಿದ್ದರು. ಮತ್ತೋರ್ವ ಅಕಾಲಿ ದಳ ನಾಯಕ ಬಿಕ್ರಮ್‌ ಸಿಂಗ್‌ ಮಜೀಠಿಯಾ ಕೂಡ ಗುರುದ್ವಾರದ ಪಾತ್ರೆಗಳನ್ನು ತೊಳೆಯುವ ಮೂಲಕ ಶಿಕ್ಷೆಯನ್ನು ಪ್ರಾರಂಭಿಸಿದ್ದರು. ಇದೀಗ ಮರು ದಿನವೇ ಬಾದಲ್‌ ಹತ್ಯೆಗೆ ಯತ್ನಿಸಲಾಗಿದೆ.

ಇದನ್ನೂ ಓದಿ Rajendra Bhat Column: ಅವರು ಬದುಕಿದ್ದರೆ ಈಗ ನೂರು ತುಂಬುತ್ತಿತ್ತು!

ಸದ್ಯದ ಮಾಹಿತಿ ಪ್ರಕಾರ ದಾಳಿಯಿಂದ ಬಾದಲ್ ಸ್ವಲ್ಪದರಲ್ಲೇ ಪಾರಾಗಿದ್ದು, ಸುರಕ್ಷಿತವಾಗಿದ್ದಾರೆ. ಏತನ್ಮಧ್ಯೆ, ಭದ್ರತೆ ಒದಗಿಸಲು ಪಂಜಾಬ್ ಸರ್ಕಾರ ವಿಫಲವಾಗಿದೆ ಎಂದು SAD ಆರೋಪಿಸಿದೆ.