Wednesday, 14th May 2025

ಮಲಿಕ್‌ ನ್ಯಾಯಾಂಗ ಬಂಧನದ ಅವಧಿ ಏ.22ರವರೆಗೆ ವಿಸ್ತರಣೆ

ಮುಂಬೈ: ಹಣ ಅಕ್ರಮ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿ ಮಹಾರಾಷ್ಟ್ರದ ಸಚಿವ ನವಾಬ್‌ ಮಲಿಕ್‌ ಅವರಿಗೆ ವಿಧಿಸಲಾಗಿರುವ ನ್ಯಾಯಾಂಗ ಬಂಧನದ ಅವಧಿಯನ್ನು ವಿಶೇಷ ನ್ಯಾಯಾಲಯ ಏ.22ರವರೆಗೆ ವಿಸ್ತರಣೆ ಮಾಡಿದೆ.

ಮಲಿಕ್ ಅವರನ್ನು ವಿಶೇಷ ನ್ಯಾಯಾಲಯದ ನ್ಯಾಯಾಧೀಶ ಆರ್‌.ಎನ್. ರೋಕಡೆ ಅವರ ಮುಂದೆ ಸೋಮವಾರ ಹಾಜರುಪಡಿಸಲಾಯಿತು. ಆನಾರೋಗ್ಯದ ಕಾರಣ ನೀಡಿದರೂ ನ್ಯಾಯಾಲಯ ವಿನಾಯಿತಿ ನೀಡಿಲ್ಲ.

ಸಚಿವರು, ಮೂತ್ರಪಿಂಡದ ಕಾಯಿಲೆಯಿಂದ ಬಳಲುತ್ತಿರುವುದಾಗಿಯೂ ಕಾಲುಗಳಲ್ಲಿ ಊತದ ಸಮಸ್ಯೆ ಇದೆ ಎಂದರು. ಜೈಲು ಅಧಿಕಾರಿಗಳಿಗೆ ಮಾಹಿತಿ ನೀಡಿದಾಗ ಕೇವಲ ನೋವು ನಿವಾರಕಗಳನ್ನು ನೀಡಿದ್ದಾರೆ. ಆರೋಗ್ಯ ಸಮಸ್ಯೆಗೆ ಶಾಶ್ವತ ಪರಿಹಾರ ಬೇಕಿದೆ ಎಂದು ಹೇಳಿದರು.

ಬಂಧನ ಪ್ರಶ್ನಿಸಿ ಸುಪ್ರೀಂ ಕೋರ್ಟ್‌ಗೆ ಸಲ್ಲಿಸಲಾಗಿರುವ ಅರ್ಜಿಯು ಏ.22ಕ್ಕೆ ವಿಚಾರಣೆಗೆ ಬರುವ ನಿರೀಕ್ಷೆ ಇದೆ ಎಂದು ಮಲಿಕ್ ಪರ ವಕೀಲರು ನ್ಯಾಯಾಲಯಕ್ಕೆ ತಿಳಿಸಿದರು. ಬಳಿಕ ನ್ಯಾಯಾಧೀಶರು ನ್ಯಾಯಾಂಗ ಬಂಧನದ ಅವಧಿ ವಿಸ್ತರಣೆ ಮಾಡಿ ಆದೇಶ ಹೊರಡಿಸಿದರು.