Saturday, 10th May 2025

Maharashtra Election Result: ಮಹಾರಾಷ್ಟ್ರದಲ್ಲಿ ಪ್ರಚಂಡ ಗೆಲುವಿನತ್ತ ಬಿಜೆಪಿ ನೇತೃತ್ವದ ಮಹಾಯುತಿ ಮೈತ್ರಿಕೂಟ

Maharashtra Election Result

ಮುಂಬೈ: ದೇಶದ ಕುತೂಹಲ ಕೆರಳಿಸಿರುವ ಮಹಾರಾಷ್ಟ್ರ ವಿಧಾನಸಭಾ ಚುನಾವಣೆಯ ಫಲಿತಾಂಶ ಪ್ರಕಟವಾಗುತ್ತಿದ್ದು, ಚುನಾವಣೋತ್ತರ ಸಮೀಕ್ಷೆಯಂತೆ ಬಿಜೆಪಿ ನೇತೃತ್ವದ ಮಹಾಯುತಿ (Mahayuti) ಮೈತ್ರಿಕೂಟ ಮತ್ತೊಮ್ಮೆ ಅಧಿಕಾರ ಹಿಡಿಯುವ ಸಾಧ್ಯತೆ ನಿಚ್ಚಳವಾಗಿದೆ. 288 ಸೀಟುಗಳ ಪೈಕಿ ಆಡಳಿತರೂಢ ಮೈತ್ರಿಕೂಟ ಬರೋಬ್ಬರಿ 217 ಕ್ಷೇತ್ರಗಳಲ್ಲಿ ಮುನ್ನಡೆ ಕಾಯ್ದುಕೊಂಡಿದೆ. ವಿಪಕ್ಷಗಳ ಮಹಾ ವಿಕಾಸ್‌ ಅಘಾಡಿ (Maha Vikas Aghadi) ಒಕ್ಕೂಟ ಕೇವಲ 58 ಕಡೆಗಳಲ್ಲಿ ಮುಂದಿದ್ದು, ಇತರರು 10 ಕಡೆ ಮುನ್ನಡೆ ಸಾಧಿಸಿದ್ದಾರೆ (Maharashtra Election Result).

ಯಾವ ಪಕ್ಷಕ್ಕೆ ಎಷ್ಟು ಸೀಟು?

ಮಹಾಯುತಿ ಒಕ್ಕೂಟದ ಪೈಕಿ ಬಿಜೆಪಿ 115, ಶಿವಸೇನೆ (ಎಸ್‌ಎಚ್‌ಎಸ್‌) 56 ಮತ್ತು ನ್ಯಾಷನಲಿಸ್ಟ್ ಕಾಂಗ್ರೆಸ್ ಪಾರ್ಟಿ 34 ಕಡೆ ಮುನ್ನಡೆಯಲ್ಲಿದೆ. ಇನ್ನು ವಿಪಕ್ಷಗಳ ಮಹಾ ವಿಕಾಸ್‌ ಅಘಾಡಿ (ಎಂವಿಎ) ಮೈತ್ರಿಕೂಟದ ಪೈಕಿ ಶಿವ ಸೇನೆ (ಯುಬಿಟಿ ಬಣ) 20, ಕಾಂಗ್ರೆಸ್‌ 11, ಎನ್‌ಸಿಪಿ (ಎಸ್‌ಪಿ ಬಣ) 2 ಮತ್ತು ಸಮಾಜವಾದಿ ಪಾರ್ಟಿ 2 ಕಡೆಗಳಲ್ಲಿ ಮುನ್ನಡೆ ಸಾಧಿಸಿವೆ.

ನಿರೀಕ್ಷಿತ ಫಲಿತಾಂಶ

ಬಹತೇಕ ಸಮೀಕ್ಷೆಗಳು ಮಹಾಯುತಿ ಮೈತ್ರಿಕೂಟ ಸರ್ಕಾರ ರಚಿಸಲಿದೆ ಎಂದೇ ಭವಿಷ್ಯ ನುಡಿದಿದ್ದವು. ಅದಾಗ್ಯೂ ಯಾವುದೇ ಸಮೀಕ್ಷೆಗಳು ಇಷ್ಟೊಂದು ಸೀಟು ದೊರೆಯಲಿದೆ ಎಂದು ಊಹಿಸಿರಲಿಲ್ಲ. ಈ ಮೂಲಕ ಪ್ರಚಂಡ ಗೆಲುವುನತ್ತ ದಾಪುಗಾಲು ಹಾಕಿದೆ. ಪಿ-ಎಂಎಆರ್‌ಕ್ಯು (P-MARQ) ಸಮೀಕ್ಷೆಯಲ್ಲಿ ಮಹಾಯುತಿ ಸರ್ಕಾರ 137-157 ಕಡೆ ಜಯ ಗಳಿಸಿದರೆ, ಮಹಾ ವಿಕಾಸ ಅಘಾಡಿ 126-147 ಸೀಟು ಗಳಿಸಲಿದೆ. ಇತರರು 2-8 ಕಡೆ ಜಯ ದಾಖಲಿಸಬಹುದು ಎಂದು ಹೇಳಿತ್ತು.

ಮ್ಯಾಟ್ರಿಝ್‌ (Matrize) ಸಮೀಕ್ಷೆ ಮಹಾಯುತಿಗೆ 150-170 ಮತ್ತು ಎಂವಿಎಗೆ 110-130 ಕ್ಷೇತ್ರ ಎಂದಿತ್ತು. ಇತರರಿಗೆ 8-10 ಸೀಟು ದೊರೆಯುವ ಸಾಧ್ಯತೆ ಎಂದು ಹೇಳಿತ್ತು. ಚಾಣಕ್ಯ (Chanakya) ಚುನಾವಣೋತ್ತರ ಸಮೀಕ್ಷೆಯ ಪ್ರಕಾರ ಮಹಾಯುತಿಗೆ 152-160 ಮತ್ತು ಎಂವಿಎಗೆ 130-138 ಸೀಟು ದೊರೆಯಲಿದೆ ಎಂದು ನುಡಿದಿತ್ತು. ಮಹಾಯುತಿ 175-195 ಕಡೆ ವಿಜಯ ಪತಾಕೆ ಹಾರಿಸುವ ಮೂಲಕ ಭರ್ಜರಿ ಜಯ ದಾಖಲಿಸಿದರೆ, ಮಹಾ ವಿಕಾಸ್ ಅಘಾಡಿ 85-112 ಸೀಟಿಗೆ ಸೀಮಿತಗೊಳ್ಳಲಿದೆ ಎಂದು ಪೀಪಲ್ಸ್‌ ಪಲ್ಸ್‌ (Peoples Pulse) ಭವಿಷ್ಯ ನುಡಿದಿತ್ತು. ಮಹಾರಾಷ್ಟ್ರದಲ್ಲಿ ಬಹುಮತಕ್ಕೆ ಅಗತ್ಯವಾದ ಮ್ಯಾಜಿಕ್‌ ನಂಬರ್‌ 145.

ಜಾರ್ಖಂಡ್‌ನಲ್ಲಿ ಬಿಜೆಪಿಗೆ ಹಿನ್ನಡೆ

ಇತ್ತ ಜಾರ್ಖಂಡ್‌ನಲ್ಲಿ ಅಚ್ಚರಿಯ ಫಲಿತಾಂಶ ಕಂಡು ಬರುತ್ತಿದ್ದು, ಎನ್‌ಡಿಎ ಮೈತ್ರಿಕೂಟ ಹಿನ್ನಡೆಯಲ್ಲಿದೆ. ವಿಪಕ್ಷಗಳ ಇಂಡಿಯಾ ಒಕ್ಕೂಟ ಸರ್ಕಾರ ರಚನೆಯತ್ತ ದಾಪುಗಾಲು ಹಾಕಿದೆ. ಜಾರ್ಖಂಡ್‌ನಲ್ಲಿ ಎನ್‌ಡಿಎ 29, ಇಂಡಿಯಾ ಒಕ್ಕೂಟ 50ರಷ್ಟು ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿದೆ. ಬಹುತೇಕ ಚುನಾವಣೋತ್ತರ ಸಮೀಕ್ಷೆಗಳು ಎನ್‌ಡಿಎ ಒಕ್ಕೂಟಕ್ಕೆ ಬಹುಮತ ಸಿಗಲಿದೆ ಎಂದು ಊಹಿಸಿದ್ದವು. ಸದ್ಯ ಈ ಸಮೀಕ್ಷಾ ವರದಿ ತಲೆಕೆಳಗಾಗಿದೆ. ಜಾರ್ಖಂಡ್‌ನಲ್ಲಿ ಬಹುಮತ ಸಾಧಿಸಿ ಸರ್ಕಾರ ರಚಿಸಲು 41 ಸ್ಥಾನಗಳಲ್ಲಿ ಗೆಲುವುದು ಅಗತ್ಯ.

ಈ ಸುದ್ದಿಯನ್ನೂ ಓದಿ: Jharkhand Election Result: ಜಾರ್ಖಂಡ್‌ ಫಲಿತಾಂಶದಲ್ಲಿ ಬಿಗ್‌ ಟ್ವಿಸ್ಟ್‌; ಬಿಜೆಪಿಗೆ ಆಘಾತ, ಸರಳ ಬಹುಮತದತ್ತ ‘ಇಂಡಿಯಾ’ ಒಕ್ಕೂಟ