Monday, 12th May 2025

Maharashtra CM: ಮಹಾರಾಷ್ಟ್ರ ಸಿಎಂ ಪಟ್ಟ ಫಡ್ನವಿಸ್‌ಗೆ ಫಿಕ್ಸ್‌? ಅಮಿತ್‌ ಶಾ ಭೇಟಿ ಬಳಿಕ ಏಕನಾಥ್‌ ಶಿಂಧೆ ಹೇಳಿದ್ದೇನು?

ನವದೆಹಲಿ: ಮಹಾರಾಷ್ಟ್ರದಲ್ಲಿ ಎನ್‌ಡಿಎ ಮೈತ್ರಿಕೂಟ ಸ್ಪಷ್ಟ ಬಹುಮತದ ಮೂಲಕ ಸರ್ಕಾರ ರಚನೆಗೆ ಸಜ್ಜಾಗಿದೆಯಾದರೂ ಇನ್ನು ಸಿಎಂ ಯಾರೆಂಬುದು ನಿರ್ಧಾರವಾಗಿಲ್ಲ. ಸಿಎಂ ಸ್ಥಾನಕ್ಕಾಗಿ ಬಿಜೆಪಿಯ ದೇವೇಂದ್ರ ಫಡ್ನವಿಸ್‌ ಮತ್ತು ಶಿವಸೇನೆಯ ಏಕನಾಥ್‌ ಶಿಂಧೆ ನಡುವಿನ ಹಗ್ಗ-ಜಗ್ಗಾಟ ಮುಂದುವರಿದಿದೆ. ಈ ನಡುವೆ ನಿನ್ನೆ ತಡರಾತ್ರಿ ಕೇಂದ್ರ ಸಚಿವ ಅಮಿತ್ ಶಾ (Amit Shah) ನಿವಾಸದಲ್ಲಿ ಮಹಾರಾಷ್ಟ್ರ ಮುಖ್ಯಮಂತ್ರಿ(Maharashtra CM) ಸ್ಥಾನಕ್ಕೆ ಸಂಬಂಧಿಸಿದಂತೆ ಸಭೆ ನಡೆದಿದೆ. ಇನ್ನು ಸಭೆಯಲ್ಲಿ ಎರಡೂ ಬಣಗಳಿಗೂ ಸರ್ಕಾರಾತ್ಮಕ ಸೂಚನೆ ಬಿಜೆಪಿ ಹೈಕಮಾಂಡ್‌ನಿಂದ ಹೊರಬಿದ್ದಂತೆ ಭಾಸವಾಗುತ್ತಿದೆ. ಇದಕ್ಕೆ ಪೂರಕ ಎಂಬಂತಿತ್ತು ಏಕನಾಥ್‌ ಶಿಂಧೆ ಹೇಳಿಕೆ.

ಸಭೆ ಬಳಿಕ ಮಾತನಾಡಿದ ಅಮಿತ್​ ಶಾ ಜತೆಗೆ ನಡೆದ ಸಭೆಯು ಸಕಾರಾತ್ಮಕವಾಗಿತ್ತು ಎಂದು ಏಕನಾಥ್ ಶಿಂಧೆ ಹೇಳಿದ್ದಾರೆ. ಮಹಾಯುತಿಯ ಮುಖ್ಯಮಂತ್ರಿ ಆಯ್ಕೆಯ ವಿಷಯದಲ್ಲಿ ಯಾವುದೇ ಅಡೆತಡೆಗಳಿಲ್ಲ. ಮಹಾರಾಷ್ಟ್ರ ಸಿಎಂ ಆಯ್ಕೆಗೆ ಸಂಬಂಧಿಸಿದಂತೆ ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು ತೆಗೆದುಕೊಳ್ಳುವ ನಿರ್ಧಾರವೇ ಅಂತಿಮ, ಅವರ ನಿರ್ಧಾರವನ್ನು ನಾವು ಒಪ್ಪಿಕೊಳ್ಳುತ್ತೇವೆ ಎಂದು ಶಿಂಧೆ ತಿಳಿಸಿದ್ದಾರೆ.

ಅಮಿತ್ ಶಾ, ಏಕನಾಥ್ ಶಿಂಧೆ, ದೇವೇಂದ್ರ ಫಡ್ನವಿಸ್, ಅಜಿತ್ ಪವಾರ್ ಮತ್ತಿತರ ನಾಯಕರ ಸಮ್ಮುಖದಲ್ಲಿ ನಿನ್ನೆ ರಾತ್ರಿ (ನ.28) ಸಭೆ ನಡೆದಿದೆ. ಸಭೆಯಲ್ಲಿ ಮುಖ್ಯಮಂತ್ರಿ ಹುದ್ದೆಯೊಂದಿಗೆ ಖಾತೆ ಹಂಚಿಕೆ ಕುರಿತು ಚರ್ಚೆ ನಡೆದಿದೆ ಎನ್ನಲಾಗಿದೆ.

ಸಭೆಯಲ್ಲಾದ ಚರ್ಚೆಗಳೇನು?

ಏಕನಾಥ್ ಶಿಂಧೆ, ದೇವೇಂದ್ರ ಫಡ್ನವಿಸ್, ಅಜಿತ್ ಪವಾರ್, ಸುನೀಲ್ ತಟ್ಕರೆ ಮತ್ತು ಪ್ರಫುಲ್ ಪಟೇಲ್ ನಿನ್ನೆ ದೆಹಲಿಗೆ ಆಗಮಿಸಿ ಅಮಿತ್ ಶಾ ಮತ್ತು ಜೆಪಿ ನಡ್ಡಾ ಅವರನ್ನು ಭೇಟಿ ಮಾಡಿದ್ದಾರೆ. ಈ ಸಭೆಯಲ್ಲಿ ಮುಖ್ಯಮಂತ್ರಿ ಆಯ್ಕೆ ಮತ್ತು ಸಚಿವ ಸಂಪುಟ ಖಾತೆ ಹಂಚಿಕೆ ಕುರಿತು ಚರ್ಚೆ ನಡೆದಿದೆ. ರಾತ್ರಿ ಸರಿ ಸುಮಾರು ಎರಡು ಗಂಟೆಗಳ ಕಾಲ ಅಮಿತ್ ಶಾ ನಿವಾಸದಲ್ಲಿ ಚರ್ಚೆ ನಡೆದಿದೆ. ನಿನ್ನೆಯ ಸಭೆಯಲ್ಲಿ ಉಪಮುಖ್ಯಮಂತ್ರಿ ಹುದ್ದೆಗೆ ಸಂಬಂಧಿಸಿದಂತೆ ಯಾವುದೇ ತೀರ್ಮಾನ ಕೈಗೊಂಡಿಲ್ಲ ಎಂದು ತಿಳಿದು ಬಂದಿದೆ.

ಹಂಗಾಮಿ ಮುಖ್ಯಮಂತ್ರಿ ಏಕನಾಥ್ ಶಿಂಧೆ ಅವರು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಮುಂದೆ ಶಿವಸೇನೆಯ ನಿಲುವನ್ನು ಮಂಡಿಸಿದ್ದಾರೆ. ಶಿಂಧೆ ಅವರ ಪಕ್ಷವು ಅಮಿತ್ ಶಾ ಅವರಿಗೆ ವಿಧಾನ ಪರಿಷತ್ತಿನ ಸ್ಪೀಕರ್ ಹುದ್ದೆಯೊಂದಿಗೆ 12 ಸಚಿವ ಸ್ಥಾನಗಳನ್ನು ನೀಡಬೇಕೆಂದು ಒತ್ತಾಯಿಸಿದೆ. ಅಷ್ಟೇ ಅಲ್ಲದೆ ಏಕನಾಥ್ ಶಿಂಧೆ ಅವರು ಗೃಹ ಸಚಿವ ಮತ್ತು ನಗರಾಭಿವೃದ್ಧಿ ಸೇರಿದಂತೆ ಪ್ರಮುಖ ಖಾತೆಗಳನ್ನು ನೀಡಬೇಕೆಂದು ಆಗ್ರಹಿಸಿದ್ದಾರೆ.

ರಕ್ಷಣಾ ಸಚಿವ ಸ್ಥಾನ ನೀಡುವಾಗಲೂ ಪಕ್ಷದ ಗೌರವವನ್ನು ಉಳಿಸಿಕೊಳ್ಳಬೇಕು ಎಂದು ಏಕನಾಥ್ ಶಿಂಧೆ ಅಮಿತ್ ಶಾ ಅವರಲ್ಲಿ ಮನವಿ ಮಾಡಿದ್ದಾರೆ. ಅಲ್ಲದೆ, ಮಹಾಮೈತ್ರಿಯಾಗಿ ಶಿವಸೇನೆ ಜೊತೆಗಿದೆ ಎಂದು ಅಮಿತ್ ಶಾಗೆ ಶಿಂಧೆ ಮತ್ತೊಮ್ಮೆ ಭರವಸೆ ನೀಡಿದ್ದಾರೆ.

ಇಂದು ಮುಂಬೈ ನಲ್ಲಿ ಮಹಾ ಮೈತ್ರಿಕೂಟದ ಸಭೆ

ಮಹಾಮೈತ್ರಿಕೂಟದ ಸಭೆ ಇಂದು ಮುಂಬೈನಲ್ಲಿ ದೇವೇಂದ್ರ ಫಡ್ನವಿಸ್ ,ಅಜಿತ್ ಪವಾರ್ ಮತ್ತು ಏಕನಾಥ್ ಶಿಂಧೆ ಅವರ ಉಪಸ್ಥಿತಿಯಲ್ಲಿ ನಡೆಯಲಿದೆ . ಈ ಸಭೆಯಲ್ಲಿ ಅಮಿತ್ ಶಾ ನೀಡಿರುವ ಸಲಹೆ, ನಿರ್ಧಾರಗಳ ಕುರಿತು ಚರ್ಚೆ ನಡೆಯಲಿದೆ ಎಂಬ ಮಾಹಿತಿ ದೊರೆತಿದೆ. ಇದೇ ವೇಳೆ ಶಾ ಅವರೊಂದಿಗಿನ ಭೇಟಿ ಸಕಾರಾತ್ಮಕವಾಗಿತ್ತು. ಮುಂದಿನ ಎರಡು ದಿನಗಳಲ್ಲಿ ಈ ಕುರಿತು ತೀರ್ಮಾನ ಕೈಗೊಳ್ಳಲಾಗುವುದು ಎಂದು ಏಕನಾಥ್ ಶಿಂಧೆ ಸಭೆಯ ಬಳಿಕ ತಿಳಿಸಿದ್ದಾರೆ. ನಮ್ಮಲ್ಲಿ ಯಾವುದೇ ಅಸಮಾಧಾನ ಇಲ್ಲ, ನಾವು ಮೂವರೂ ಒಟ್ಟಾಗಿ ಕೆಲಸ ಮಾಡುತ್ತೇವೆ ಎಂದಿದ್ದಾರೆ.

ಇದಕ್ಕೂ ಮೊದಲು ಬಿಜೆಪಿ ನಾಯಕ ದೇವೇಂದ್ರ ಫಡ್ನವೀಸ್ ಅವರು ಮಹಾಯುತಿ ಮೈತ್ರಿಕೂಟದಲ್ಲಿ ಯಾವುದೇ ಆಂತರಿಕ ಭಿನ್ನಾಭಿಪ್ರಾಯಗಳಿಲ್ಲ ಎಂದು ಸ್ಪಷ್ಟಪಡಿಸಿದ್ದು, ನಾಯಕರೊಂದಿಗೆ ಸಮಾಲೋಚಿಸಿದ ನಂತರ ಮುಖ್ಯಮಂತ್ರಿ ಆಯ್ಕೆಯ ಬಗ್ಗೆ ಶೀಘ್ರದಲ್ಲೇ ನಿರ್ಧಾರ ತೆಗೆದುಕೊಳ್ಳಲಾಗುವುದು ಎಂದು ಹೇಳಿದ್ದರು. ನವೆಂಬರ್ 23ರಂದು ಮಹಾರಾಷ್ಟ್ರ ವಿಧಾನಸಭಾ ಚುನಾವಣಾ ಫಲಿತಾಂಶವು ಘೋಷಣೆಯಾಯಿತು. 280 ಸದಸ್ಯ ಬಲದ ಮಹಾರಾಷ್ಟ್ರ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ 132 ಸ್ಥಾನಗಳೊಂದಿಗೆ ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಿದೆ, ಅದರ ಮಿತ್ರಪಕ್ಷಗಳಾದ – ಏಕನಾಥ್ ಶಿಂಧೆ ನೇತೃತ್ವದ ಶಿವಸೇನೆ ಮತ್ತು ಅಜಿತ್ ಪವಾರ್ ನೇತೃತ್ವದ ಎನ್‌ಸಿಪಿ – ಕ್ರಮವಾಗಿ 57 ಮತ್ತು 41 ಸ್ಥಾನಗಳನ್ನು ಗೆದ್ದಿವೆ.

ಈ ಸುದ್ದಿಯನ್ನೂ ಓದಿ: Ajit Pawar: ಮಹಾರಾಷ್ಟ್ರದ ಮುಂದಿನ ಸಿಎಂ ಅಜಿತ್‌ ಪವಾರ್‌? ರಿಸಲ್ಟ್‌ಗೂ ಮುನ್ನ ರಾರಾಜಿಸಿದ ಪೋಸ್ಟರ್‌