Sunday, 11th May 2025

Maharashtra CM: ಏಕನಾಥ ಶಿಂಧೆ ನಿವಾಸಕ್ಕೆ ದೇವೇಂದ್ರ ಫಡ್ನವೀಸ್‌ ಭೇಟಿ; ಗರಿಗೆದರಿದ ಕುತೂಹಲ

Maharashtra CM

ಮುಂಬೈ: ಮಹಾರಾಷ್ಟ್ರದಲ್ಲಿ ವಿಧಾನಸಭಾ ಚುನಾವಣೆಯ ಫಲಿತಾಂಶ ಪ್ರಕಟಗೊಂಡು 1 ವಾರ ಕಳೆದಿದೆ. ಭರ್ಜರಿ ಬಹುಮತ ಪಡೆದು ಬಿಜೆಪಿ ನೇತೃತ್ವದ ಮಹಾಯುತಿ (Mahayuti) ಮೈತ್ರಿಕೂಟ ಅಧಿಕಾರಕ್ಕೆ ಮರಳಿದೆ. ಆದರೆ ಇನ್ನೂ ಮುಖ್ಯಮಂತ್ರಿ ಯಾರಾಗ್ತಾರೆ ಎನ್ನುವ ಪ್ರಶ್ನೆಗೆ ಉತ್ತರ ಸಿಕ್ಕಿಲ್ಲ. ಈ ಮಧ್ಯೆ ಬಿಜೆಪಿ ನಾಯಕ ದೇವೇಂದ್ರ ಫಡ್ನವೀಸ್‌ (Devendra Fadnavis) ಅವರು ಉಸ್ತುವಾರಿ ಮುಖ್ಯಮಂತ್ರಿ ಏಕನಾಥ ಶಿಂಧೆ (Eknath Shinde) ಅವರನ್ನು ಭೇಟಿಯಾಗಿದ್ದಾರೆ (Maharashtra CM).

ಕಳೆದ ತಿಂಗಳು ಸರ್ಕಾರ ರಚನೆಯ ಬಿಕ್ಕಟ್ಟು ಪ್ರಾರಂಭವಾದ ನಂತರ ದೇವೇಂದ್ರ ಫಡ್ನವೀಸ್ ಮತ್ತು ಏಕನಾಥ ಶಿಂಧೆ ಅವರ ಮೊದಲ ಸಭೆ ಇದು ಎನ್ನುವುದು ವಿಶೇಷ. ಮುಂದಿನ ಮುಖ್ಯಮಂತ್ರಿ ಎಂದೇ ಬಿಂಬಿತರಾಗಿರುವ ಫಡ್ನವೀಸ್ ಅವರು ಅಧಿಕಾರ ಹಂಚಿಕೆ ಸೂತ್ರದ ಬಗ್ಗೆ ಚರ್ಚಿಸಲು ಏಕನಾಥ್ ಶಿಂಧೆ ಅವರ ಅಧಿಕೃತ ನಿವಾಸಕ್ಕೆ ಭೇಟಿ ನೀಡಿದ್ದಾರೆ ಎಂದು ಮೂಲಗಳು ತಿಳಿಸಿವೆ.

288 ಸೀಟುಗಳ ವಿಧಾನಸಭೆಯಲ್ಲಿ 230 ಕಡೆ ಜಯಗಳಿಸಿ ಅಧಿಕಾರಕ್ಕೆ ಮರಳಿದ ಮಹಾಯುತಿ ಮೈತ್ರಿಕೂಟದಲ್ಲಿ ಸಿಎಂ ಗಾದಿಗೆ ಆರಂಭದಲ್ಲಿ ಏಕನಾಥ ಶಿಂಧೆ ಮತ್ತು ದೇವೇಂದ್ರ ಫಡ್ನವೀಸ್‌ ಹೆಸರು ಮುಂಚೂಣಿಯಲ್ಲಿ ಕೇಳಿ ಬಂದಿತ್ತು. ಬಳಿಕ ಏಕನಾಥ ಸಿಂಧೆ ಅವರು ರೇಸ್‌ನಿಂದ ಹಿಂದಕ್ಕೆ ಸರಿದು ಪ್ರಧಾನಿ ನರೇಂದ್ರ ಮೋದಿ ಅವರು ಆಯ್ಕೆ ಮಾಡುವ ಅಭ್ಯರ್ಥಿಗೆ ಸಂಪೂರ್ಣ ಸಹಕಾರ ನೀಡುವುದಾಗಿ ಘೋಷಿಸಿದ್ದರು. ಹೀಗಾಗಿ ದೇವೇಂದ್ರ ಫಡ್ನವೀಸ್‌ ಸಿಎಂ ಪಟ್ಟಕ್ಕೇರುವುದು ಬಹುತೇಕ ಖಚಿತವಾಗಿದ್ದು, ಅಧಿಕೃತ ಘೋಷಣೆ ಹೊರ ಬೀಳಬೇಕಿದೆ.

ಹೊಸದಿಲ್ಲಿಯಲ್ಲಿ ಮಹಾಯುತಿ ಮೈತ್ರಿಕೂಟದ ನಾಯಕರಿಗಾಗಿ ಆಯೋಜಿಸಿದ್ದ ಅಧಿಕಾರ ಹಂಚಿಕೆಯ ಸಭೆಯಿಂದ ಏಕನಾಥ ಶಿಂಧೆ ಏಕಾಏಕಿಯಾಗಿ ಸ್ವಗ್ರಾಮಕ್ಕೆ ಮರಳಿದ್ದು ಸಾಕಷ್ಟು ಅನುಮಾನ ಹುಟ್ಟು ಹಾಕಿತ್ತು. ಮೈತ್ರಿಕೂಟದಲ್ಲಿ ಅಸಮಾಧಾನ ಭುಗಿಲೆದ್ದಿದೆ ಎನ್ನಲಾಗಿತ್ತು. ಬಳಿಕ ಶಿವ ಸೇನೆ ಈ ವದಂತಿಯನ್ನು ತಳ್ಳಿ ಹಾಕಿ, ಏಕನಾಥ ಶಿಂಧೆ ಅವರು ಅನಾರೋಗ್ಯದ ಕಾರಣದಿಂದ ಮರಳಿದ್ದಾರೆ ಎನ್ನುವ ಸ್ಪಷ್ಟನೆ ನೀಡಿತ್ತು.

ಡಿ. 4ರಂದು ಬಿಜೆಪಿಯ ಶಾಸಕಾಂಗ ಪಕ್ಷದ ಸಭೆ ಕರೆಯಲಾಗಿದ್ದು, ಇದರಲ್ಲಿ ತಮ್ಮ ನಾಯಕರನ್ನಾಗಿ ದೇವೇಂದ್ರ ಫಡ್ನವೀಸ್‌ ಅವರನ್ನು ಆಯ್ಕೆ ಮಾಡಲಾಗುತ್ತದೆ ಎನ್ನಲಾಗಿದೆ. ಶಿವಸೇನೆ ಮತ್ತು ಎನ್‌ಪಿ ಈಗಾಗಲೇ ಕ್ರಮವಾಗಿ ಏಕನಾಥ ಶಿಂಧೆ ಮತ್ತು ಅಜಿತ್ ಪವಾರ್ ಅವರನ್ನು ತಮ್ಮ ಶಾಸಕಾಂಗ ಪಕ್ಷದ ನಾಯಕರಾಗಿ ಆಯ್ಕೆ ಮಾಡಿವೆ. ಡಿ. 5ರಂದು ಸಚಿವ ಸಂಪುಟ ಸಭೆಯ ಪ್ರಮಾಣ ವಚನ ಸ್ವೀಕಾರ ಸಮಾರಂಭ ನಡೆಯಲಿದೆ. ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಸುಮಾರು 2,000 ಗಣ್ಯರನ್ನೊಳಗೊಂಡ ಅದ್ಧೂರಿ ಸಮಾರಂಭ ನಡೆಸಲು ಮಹಾಯುತಿ ಮೈತ್ರಿಕೂಟ ಸಿದ್ಧತೆ ಆರಂಭಿಸಿದೆ ಎಂದು ಮೂಲಗಳು ತಿಳಿಸಿವೆ. ಅಜಾದ್‌ ಮೈದಾನದಲ್ಲಿ ಕಾರ್ಯಕ್ರಮ ನಡೆಯಲಿದೆ. ಮಹಾಯುತಿ ಮೈತ್ರಿಕೂಟದ 230 ಸೀಟುಗಳ ಪೈಕಿ ಬಿಜೆಪಿ 132, ಶಿವ ಸೇನೆ 57 ಮತ್ತು ಎನ್‌ಸಿಪಿ 41 ಕ್ಷೇತ್ರಗಳನ್ನು ಗೆದ್ದುಕೊಂಡಿದೆ.

ಈ ಸುದ್ದಿಯನ್ನೂ ಓದಿ: Devendra Fadnavis: ಮಹಾರಾಷ್ಟ್ರ ಮುಖ್ಯಮಂತ್ರಿಯಾಗಿ ದೇವೇಂದ್ರ ಫಡ್ನವೀಸ್‌ ಆಯ್ಕೆ: ಬಿಜೆಪಿ ನಾಯಕ