Saturday, 10th May 2025

Mahakumbh: ಮಹಾಕುಂಭದಲ್ಲಿ ಪಾಲ್ಗೊಳ್ಳಲು ಭಾರತಕ್ಕೆ ಆಗಮಿಸಿದ ಸ್ಟೀವ್‌ ಜಾಬ್ಸ್‌ ಪತ್ನಿ; 10 ದಿನ ಪ್ರಯಾಗ್‌ರಾಜ್‌ನಲ್ಲೇ ವಾಸ್ತವ್ಯ

Mahakumbh

ಲಖನೌ: ಜನವರಿ 13 ರಿಂದ ಫೆಬ್ರವರಿ 26 ರವರೆಗೆ ಉತ್ತರ ಪ್ರದೇಶದ (Uttar Pradesh) ಪ್ರಯಾಗ್‌ರಾಜ್‌ನಲ್ಲಿ ಮಹಾಕುಂಭ (Mahakumbh) ಮೇಳ ನಡೆಯಲಿದ್ದು, ಉತ್ತರ ಪ್ರದೇಶ ಮದುವಣಗಿತ್ತಿಯಂತೆ ಕಂಗೊಳಿಸುತ್ತಿದೆ. ಬೇರೆ ಬೇರೆ ರಾಜ್ಯ, ವಿದೇಶಗಳಿಂದ ಕುಂಭಮೇಳವನ್ನು ಕಣ್ತುಂಬಿಕೊಳ್ಳಲು ಭಕ್ತರು ಆಗಮಿಸುತ್ತಿದ್ದಾರೆ. ಆಪಲ್ ಸಂಸ್ಥೆಯ ಸಹ – ಸಂಸ್ಥಾಪಕ ಸ್ಟೀವ್‌ ಜಾಬ್‌ ಪತ್ನಿ ಲಾರೆನ್ ಪೊವೆಲ್ ಜಾಬ್ಸ್‌ (Laurene Powell Jobs) ಕೂಡ ಮಹಾಕುಂಭ ಮೇಳದಲ್ಲಿ ಭಾಗವಹಿಸಲಿದ್ದು, ಅವರು ಭಾರತಕ್ಕೆ ಬಂದಿಳಿದಿದ್ದಾರೆ.

ಮಹಾಕುಂಭ ಮೇಳದಲ್ಲಿ ಭಾಗವಹಿಸುವ ಮೊದಲು ಅವರು ವಾರಣಾಸಿಯ ಕಾಶಿ ವಿಶ್ವನಾಥ ದೇವಾಲಯಕ್ಕೆ ಶನಿವಾರ ಭೇಟಿ ನೀಡಿದ್ದರು. ಭಾರತೀಯ ಉಡುಪನ್ನು ಧರಿಸಿ ಕಾಶಿ ವಿಶ್ವನಾಥ ದೇವಾಲಯದಲ್ಲಿ ಗರ್ಭಗುಡಿಯ ಹೊರಗಿನಿಂದ ಪ್ರಾರ್ಥನೆ ಸಲ್ಲಿಸಿದರು. ಅವರ ಜೊತೆ ಕೈಲಾಶಾನಂದ ಗಿರಿ ಮಹಾರಾಜ್ ಕೂಡ ತೆರಳಿದ್ದಾರೆ.

ಈ ಬಗ್ಗೆ ಮಾತನಾಡಿದ ಕೈಲಾಶಾನಂದ ಗಿರಿ ಮಹಾರಾಜ್ ಅವರು ದೇವಸ್ಥಾನದ ಸಂಪ್ರದಾಯಗಳನ್ನು ಅನುಸರಿಸಿದ್ದಾರೆ. ನಮ್ಮ ಭಾರತೀಯ ಸಂಪ್ರದಾಯದಂತೆ, ಕಾಶಿ ವಿಶ್ವನಾಥದಲ್ಲಿ, ಹಿಂದೂಗಳನ್ನು ಹೊರತುಪಡಿಸಿ ಶಿವಲಿಂಗವನ್ನು ಬೇರೇ ಯಾರೂ ಮುಟ್ಟುವಂತಿಲ್ಲ. ಅದಕ್ಕಾಗಿಯೇ ಶಿವಲಿಂಗವನ್ನು ಹೊರಗಿನಿಂದ ನೋಡುವಂತೆ ಮಾಡಲಾಯಿತು ಎಂದು ತಿಳಿಸಿದ್ದಾರೆ.

ಇಂದು ನಾವು ಮಹಾದೇವನನ್ನು ಪ್ರಾರ್ಥಿಸಲು ಕಾಶಿಗೆ ಬಂದಿದ್ದೇವೆ. ಮಹಾಕುಂಭ ಮೇಳವು ಯಾವುದೇ ಅಡೆತಡೆಗಳಿಲ್ಲದೆ ಪೂರ್ಣಗೊಳ್ಳುತ್ತದೆ. ನಾನು ಮಹಾದೇವನನ್ನು ಆಹ್ವಾನಿಸಲು ಇಲ್ಲಿಗೆ ಬಂದಿದ್ದೇನೆ. ಲಾರೆನ್‌ ಅವರು ತಮ್ಮ ಹೆಸರನ್ನು ಕೂಡ ಮರುನಾಮಕರಣ ಮಾಡಿಕೊಂಡು ಕಮಲಾ ಎಂದು ಇಟ್ಟುಕೊಂಡಿದ್ದಾರೆ. ಕುಂಭ ಮೇಳದಲ್ಲಿಯೇ ಅವರು 10 ದಿನ ತಂಗಲಿದ್ದು, ಗಂಗಾ ಸ್ನಾನ ಕೂಡ ಮಾಡುತ್ತಾರೆ ಎಂದು ಕೈಲಾಶಾನಂದ ಗಿರಿ ಮಹಾರಾಜ್ ತಿಳಿಸಿದ್ದಾರೆ.

ಲಾರೆನ್ ಪೊವೆಲ್ ಜಾಬ್ಸ್ ಭಾರತೀಯ ಸಂಸ್ಕೃತಿ ಮತ್ತು ಸನಾತನ ಧರ್ಮದಿಂದ ಆಳವಾಗಿ ಪ್ರಭಾವಿತರಾಗಿದ್ದಾರೆ. ಅವರ ಪತಿ ಸ್ಟೀವ್‌ ಜಾಬ್ಸ್‌ ಕೂಡ ಬಾಲ್ಯದಿಂದಲೂ ಆಧ್ಯಾತ್ಮಿಕತೆಯ ಬಗ್ಗೆ ಆಸಕ್ತಿ ಹೊಂದಿದ್ದರು. ಅವರು ಸ್ಟೀವ್ ಬಾಬಾ ನೀಮ್ ಕರೌಲಿಯಲ್ಲಿ ಅಪಾರ ನಂಬಿಕೆಯನ್ನು ಹೊಂದಿದ್ದರು. ಅವರು 1970 ರ ದಶಕದಲ್ಲಿ ಏಳು ತಿಂಗಳ ಕಾಲ ಭಾರತದಲ್ಲಿದ್ದರು. ಬಿ ಹಿಯರ್ ನೌ ಮತ್ತು ಪರಮಹಂಸ ಯೋಗಾನಂದರ ಆತ್ಮಚರಿತ್ರೆ ಓದಿದ ನಂತರ ಅವರ ಆಸಕ್ತಿ ಇನ್ನಷ್ಟು ಹೆಚ್ಚಾಯಿತು. ಭಾರತ ಪ್ರವಾಸವು ಅವರ ಜೀವನವನ್ನು ಬದಲಾಯಿಸಿತು ಎಂದು ಹೇಳಲಾಗುತ್ತದೆ.

ಈ ಸುದ್ದಿಯನ್ನೂ ಓದಿ : Mahakumbh: ಮಹಾಕುಂಭ ಮೇಳಕ್ಕೆ ಪ್ರಯಾಗ್‌ರಾಜ್‌ ಸಜ್ಜು; 40 ಕೋಟಿಗೂ ಹೆಚ್ಚು ಭಕ್ತರು ಆಗಮಿಸುವ ನಿರೀಕ್ಷೆ

Leave a Reply

Your email address will not be published. Required fields are marked *