Sunday, 11th May 2025

Mahakumbh Mela: ಮಹಾಕುಂಭ ಮೇಳಕ್ಕೆ ಪ್ರಯಾಗ್ ರಾಜ್ ಸಜ್ಜು; ಈ ಬಾಬಾ 32 ವರ್ಷಗಳಿಂದ ಸ್ನಾನವನ್ನೇ ಮಾಡಿಲ್ಲ!

ಲಖನೌ: 12 ವರ್ಷಗಳಿಗೊಮ್ಮೆ ನಡೆಯುವ ಮಹಾಕುಂಭ ಮೇಳಕ್ಕೆ (Mahakumbh Mela) ದಿನಗಣನೆ ಪ್ರಾರಂಭಗೊಂಡಿದೆ. ಈ ನಡುವೆ ಮಹಾಕುಂಭ ಮೇಳಕ್ಕೆ ದೇಶದ ವಿವಿಧ ಕಡೆಗಳಿಂದ ಸಾಧು ಸಂತರು ಪುಣ್ಯ ಸ್ನಾನ ಕೈಗೊಳ್ಳುವುದಕ್ಕ ಈಗಾಗಲೇ ಉತ್ತರಪ್ರದೇಶದ (Uttar Pradesh) ಪ್ರಯಾಗ್ ರಾಜ್ (Prayagraj)ನತ್ತ ತಮ್ಮ ಪ್ರಯಾಣ ಬೆಳೆಸಿದ್ದಾರೆ. ಈ ಸಾಧು ಸಂತರಲ್ಲಿ ಹಲವರು ತರದ ವ್ಯಕ್ತಿತ್ವಗಳಿದ್ದು, ಇವರಲ್ಲಿ ಒಬ್ಬೊಬ್ಬರದ್ದು ಒಂದೊಂದು ವಿಶೇಷತೆಗಳಿವೆ. ಅಂತಹ ಒಂದು ವಿಶೇಷ ಸಾಧು ಇದೀಗ ಸುದ್ದಿಯ ಕೇಂದ್ರವಾಗಿದ್ದು ಇವರ ವರ್ತನೆಯ ಇದೀಗ ಮಾಧ್ಯಮಗಳ ಗಮನ ಸೆಳೆದಿದ್ದು, ವೈರಲ್ (Viral News) ಸುದ್ದಿಯಾಗುತ್ತಿದೆ.

ಗಂಗಾಪುರಿ ಮಹಾರಾಜ್ (Gangapuri Maharaj) ಅಥವಾ ಛೋಟಾ ಬಾಬಾ (Chhotu Baba) ಎಂದು ಕರೆಯಿಸಿಕೊಳ್ಳುತ್ತಿರುವ ಸಾಧುವೊಬ್ಬರು ಮಹಾಕುಂಭ ಮೇಳಕ್ಕೆ ಆಗಮಿಸಿದ್ದು, ಈ ಸಾಧು ಕಳೆದ 32 ವರ್ಷಗಳಿಂದ ಒಂದು ಬಾರಿಯೂ ಸ್ನಾನವನ್ನೇ ಮಾಡಿಲ್ಲವಂತೆ! ಹಾಗಾಗಿ ಈ ಬಾರಿಯೂ ಈ ಛೋಟೂ ಬಾಬಾ ಪುಣ್ಯ ಸ್ನಾನದಲ್ಲಿ ಪಾಲ್ಗೊಳ್ಳುವುದಿಲ್ಲವಂತೆ!

57 ವರ್ಷ ಪ್ರಾಯದ ಈ ಛೋಟಾ ಬಾಬ ತನ್ನ ಒಂದು ಕೋರಿಕೆ ಈಡೇರುವವರೆಗೂ ಸ್ನಾನವನ್ನೇ ಮಾಡುವುದಿಲ್ಲ ಎಂಬ ವಿಶಿಷ್ಟ ವ್ರತವನ್ನು ಕೈಗೊಂಡಿದ್ದಾರಂತೆ. ಆದರೆ ತನ್ನ ಆ ಕೋರಿಕೆ ಏನೆಂಬುದನ್ನು ಮಾತ್ರಾ ಈ ಬಾಬಾ ಬಹಿರಂಗಪಡಿಸಿಲ್ಲ.

‘ನಾನು 3 ಅಡಿ 8 ಇಂಚು ಎತ್ತರವಿದ್ದು, ನನಗೀಗ 57 ವರ್ಷ ಪ್ರಾಯ. ನನಗಿಲ್ಲಿ ಬಂದು ತುಂಬಾ ಸಂತೋಷವಾಗಿದೆ. ನೀವೆಲ್ಲಾ ಇಲ್ಲಿಗೆ ಬಂದಿರುವುದಕ್ಕೂ ನನಗೆ ತುಂಬಾ ಸಂತೋಷವಾಗುತ್ತಿದೆ’ ಎಂದು ಛೋಟಾ ಬಾಬಾ ಸುದ್ದಿ ಸಂಸ್ಥೆ ಜೊತೆ ಮಾತನಾಡುತ್ತಾ ತಿಳಿಸಿದ್ದಾರೆ.

‘ಆದರೆ, ನಾನು ಈ ಬಾರಿಯ ಕುಂಭ ಮೇಳದಲ್ಲಿ ಪುಣ್ಯ ಸ್ನಾನವನ್ನು ಕೈಗೊಳ್ಳುವುದಿಲ್ಲ ಯಾಕಂದರೆ, ನನ್ನದೊಂದು ಕೋರಿಕೆ ಕಳೆದ 32 ವರ್ಷಗಳಿಂದ ಈಡೇರಿಲ್ಲ. ನನ್ನ ಕೋರಿಕೆ ಈಡೇರಿದ ಬಳಿಕವೇ ನಾನು ಸ್ನಾನವನ್ನು ಮಾಡುವುದು’ ಎಂದು ಈ ಬಾಬಾ ಹೇಳಿಕೊಂಡಿದ್ದಾರೆ.

ಇದನ್ನೂ ಓದಿ: Controversy: ಸಿಪಿಐ(ಎಂ) ಕಾರ್ಯಕ್ರಮಕ್ಕೆ ಬಾಂಗ್ಲಾ ಗಾಯಕಿಗೆ ಆಹ್ವಾನ; ಭುಗಿಲೆದ್ದ ವಿವಾದ

ಗಂಗಾಪುರಿ ಮಹಾರಾಜ್ ಕಾಮಾಕ್ಯ ಪೀಠದಿಂದ ಇಲ್ಲಿಗೆ ಬಂದಿದ್ದಾರೆ. 12 ವರ್ಷಗಳಿಗೊಮ್ಮೆ ನಡೆಯುವ ಕುಂಭಮೇಳವನ್ನು ಕಣ್ತುಂಬಿಕೊಳ್ಳಲು ಬಂದಿರುವುದಾಗಿ ಅವರು ಹೇಳಿಕೊಂಡಿದ್ದಾರೆ. ಈ ಮೇಳವನ್ನು ಅವರು ಆತ್ಮಗಳು ಸಂಗಮಿಸುವ ‘ಮಿಲನ ಮೇಳ’ ಎಂದು ಕರೆದಿದ್ದಾರೆ. ಆದರೆ ಮಹಾಕುಂಭ ಮೇಳದಲ್ಲಿ ನಡೆಯುವ ‘ಶಾಹಿ ಸ್ನಾನ’ದಲ್ಲಿ ಮಾತ್ರ ಈ ಛೋಟಾ ಬಾಬಾ ಭಾಗಿಯಾಗುವುದಿಲ್ಲ.

ಪ್ರಮುಖ ಸ್ನಾನವೆಂದೇ ಕರೆಯಲಾಗುವ ಶಾಹಿ ಸ್ನಾನ ಜ. 14ರ ಮಕರ ಸಂಕ್ರಮಣ, ಜನವರಿ 29 (ಮೌನಿ ಅಮಾವ್ಯಾಸೆ) ಮತ್ತು ಫೆ. 3 (ವಸಂತ ಪಂಚಮಿ) ದಿನಗಳಂದು ಸಂಪನ್ನಗೊಳ್ಳಲಿದೆ.

ಜ.13 ರಿಂದ ಫೆ. 26ರವರೆಗೆ ನಡೆಯಲಿರುವ ಈ ಮಹಾ ಕುಂಭ ಮೇಳದಲ್ಲಿ ಪಾಲ್ಗೊಳ್ಳಲು ದೇಶ ವಿದೇಶಗಳ ಕೋಟ್ಯಂತರ ಜನ ಪ್ರಯಾಗ್ ರಾಜ್‌ಗೆ ಆಗಮಿಸುವ ನಿರೀಕ್ಷೆಯಿದೆ. ಹಾಗಾಗಿ ಭಕ್ತಾದಿಗಳು ಮತ್ತು ಪ್ರವಾಸಿಗರ ಸುರಕ್ಷತೆಗಾಗಿ ಜಿಲ್ಲಾಡಳಿತವು ಈಗಾಗಲೇ ಸಕಲ ಸಿದ್ಧತೆಗಳನ್ನು ಮಾಡಿಕೊಂಡಿದೆ.