Sunday, 11th May 2025

Maha Vikas Aghadi: ಪ್ರಮಾಣ ವಚನ ಸ್ವೀಕಾರ ಸಮಾರಂಭದಿಂದ ದೂರ ಉಳಿದ ಮಹಾ ವಿಕಾಸ ಅಘಾಡಿ ಮೈತ್ರಿಕೂಟದ ಶಾಸಕರು

ಮುಂಬೈ: ಮಹಾರಾಷ್ಟ್ರದಲ್ಲಿ ಬಿಜೆಪಿ ನೇತೃತ್ವದ ಮಹಾಯುತಿ (Mahayuti) ಸರ್ಕಾರ ಮತ್ತೊಮ್ಮೆ ಅಧಿಕಾರಕ್ಕೆ ಬಂದಿದೆ. ಮುಖ್ಯಮಂತ್ರಿಯಾಗಿ ಬಿಜೆಪಿ ನಾಯಕ ದೇವೇಂದ್ರ ಫಡ್ನವಿಸ್‌ ಅಧಿಕಾರ ಸ್ವೀಕರಿಸಿದ್ದಾರೆ. ಈ ಮಧ್ಯೆ ಇಂದು (ಡಿ. 7) ವಿಧಾನಸಭೆಯಲ್ಲಿ ಆಯೋಜಿಸಿರುವ ಪ್ರಮಾಣ ವಚನ ಸ್ವೀಕಾರ ಸಮಾರಂಭವನ್ನು ಬಹಿಷ್ಕರಿಸುವುದಾಗಿ ವಿಪಕ್ಷಗಳ ಮೈತ್ರಿಕೂಟ ಮಹಾ ವಿಕಾಸ ಅಘಾಡಿ (MVA) ಘೋಷಿಸಿದೆ. ವಿದ್ಯುನ್ಮಾನ ಮತಯಂತ್ರ(EVM)ವನ್ನು ಬಿಜೆಪಿ ದುರುಪಯೋಗಪಡಿಸಿಕೊಂಡಿದೆ ಎಂದು ಆರೋಪಿಸಿ ಎಂವಿಎ ಪ್ರಮಾಣ ವಚನ ಸಮಾರಂಭದಿಂದ ದೂರ ಉಳಿದಿದೆ.

ಶಿವ ಸೇನೆ (ಯುಬಿಟಿ) ನಾಯಕ ಆದಿತ್ಯ ಠಾಕ್ರೆ (Aaditya Thackeray) ಈ ಬಗ್ಗೆ ಮಾಹಿತಿ ನೀಡಿ, ʼʼಚುನಾವಣೆಯಲ್ಲಿ ಜಯ ಗಳಿಸಲು ಬಿಜೆಪಿ ಇವಿಎಂಗಳನ್ನು ದುರುಪಯೋಗಪಡಿಸಿಕೊಂಡಿದೆ. ಈ ಹಿನ್ನೆಲೆಯಲ್ಲಿ ನಮ್ಮ ಶಾಸಕರು ಇಂದು ಪ್ರಮಾಣ ವಚನ ಸ್ವೀಕರಿಸುವುದಿಲ್ಲʼʼ ಎಂದು ತಿಳಿಸಿದ್ದಾರೆ.

ಆದಿತ್ಯ ಠಾಕ್ರೆ ಹೇಳಿದ್ದೇನು?

ʼʼಮಹಾ ವಿಕಾಸ ಅಘಾಡಿಯ ಶಾಸಕರು ಇಂದಿನ ಪ್ರಮಾನ ವಚನ ಸ್ವೀಕಾರ ಸಮಾರಂಭದಿಂದ ದೂರ ಉಳಿಯಲು ನಿರ್ಧರಿಸಿದ್ದಾರೆ. ಇವಿಎಂ ಕಾರ್ಯಕ್ಷಮತೆಯ ಬಗ್ಗೆ ನಮಗೆ ಸಂಶಯ ಮೂಡಿದ್ದು, ಇದರ ವಿರುದ್ದ ನಡೆಸುವ ಪ್ರತಿಭಟನೆಯ ಭಾಗವಾಗಿ ಪ್ರಮಾಣ ವಚನ ಸ್ವೀಕಾರದಿಂದ ದೂರ ಉಳಿದಿದ್ದೇವೆ. ಪ್ರಜಾಪ್ರಭುತ್ವ ಅಪಾಯದಲ್ಲಿದೆʼʼ ಎಂದು ಆದಿತ್ಯ ಠಾಕ್ರೆ ಹೇಳಿದ್ದಾರೆ.

ಹೊಸದಾಗಿ ರಚನೆಯಾದ 288 ಸದಸ್ಯರ ಮಹಾರಾಷ್ಟ್ರ ವಿಧಾನಸಭೆಯ 3 ದಿನಗಳ ವಿಶೇಷ ಅಧಿವೇಶನದ ಹಿನ್ನೆಲೆಯಲ್ಲಿ ಮಹಾ ವಿಕಾಸ ಅಘಾಡಿ ಈ ಕ್ರಮಕ್ಕೆ ಮುಂದಾಗಿದೆ. ಹಂಗಾಮಿ ಸ್ಪೀಕರ್ ಕಾಳಿದಾಸ್ ಕೋಲಾಂಬ್ಕರ್ ಅವರ ಮೇಲ್ವಿಚಾರಣೆಯಲ್ಲಿ ನಡೆಯುವ ಅಧಿವೇಶನ ಶಾಸಕರ ಪ್ರಮಾಣ ವಚನ ಸ್ವೀಕಾರ, ವಿಧಾನಸಭಾ ಸ್ಪೀಕರ್ ಆಯ್ಕೆ, ಹೊಸ ಸರ್ಕಾರದ ವಿಶ್ವಾಸ ಮತಯಾಚನೆ ಮತ್ತು ರಾಜ್ಯಪಾಲರ ಭಾಷಣವನ್ನು ಒಳಗೊಂಡಿದೆ. ಬಿಜೆಪಿಯ ಹಿರಿಯ ಶಾಸಕರಾಗಿರುವ ಕೋಲಾಂಬ್ಕರ್ ಅವರನ್ನು ಹಂಗಾಮಿ ಸ್ಪೀಕರ್ ಆಗಿ ರಾಜ್ಯಪಾಲ ಸಿ.ಪಿ.ರಾಧಾಕೃಷ್ಣನ್ ಶುಕ್ರವಾರ (ಡಿ. 6) ನೇಮಕ ಮಾಡಿದ್ದಾರೆ.

“ಚುನಾವಣಾ ಫಲಿತಾಂಶ ಹಲವು ಅನುಮಾನಗಳನ್ನು ಹುಟ್ಟು ಹಾಕಿದೆ. ಈ ಬಗ್ಗೆ ಜನರು ಅಸಮಾಧಾನಗೊಂಡಿದ್ದಾರೆ” ಎಂದು ಕಾಂಗ್ರೆಸ್ ಶಾಸಕ ವಿಜಯ್ ವಾಡೆಟ್ಟಿವಾರ್ ಆರೋಪಿಸಿದ್ದಾರೆ.

ಬಿಜೆಪಿ, ಏಕನಾಥ್ ಶಿಂಧೆ ಅವರ ಶಿವ ಸೇನೆ ಮತ್ತು ಅಜಿತ್ ಪವಾರ್ ಅವರ ಎನ್‌ಸಿಪಿಯನ್ನು ಒಳಗೊಂಡ ಮಹಾಯುತಿ ಮೈತ್ರಿಕೂಟವು ನ. 20ರಂದು ನಡೆದ ಚುನಾವಣೆಯಲ್ಲಿ 288 ವಿಧಾನಸಭಾ ಕ್ಷೇತ್ರಗಳ ಪೈಕಿ 230 ಸ್ಥಾನಗಳನ್ನು ಗೆದ್ದಿದೆ. ಈ ಪೈಕಿ ಬಿಜೆಪಿಯೊಂದೇ 130 ಸ್ಥಾನಗಳನ್ನು ಗೆದ್ದುಕೊಂಡಿದೆ.

ಮಹಾರಾಷ್ಟ್ರ ನೂತನ ಮುಖ್ಯಮಂತ್ರಿಯಾಗಿ ದೇವೇಂದ್ರ ಫಡ್ನವೀಸ್‌ ಡಿ. 5ರಂದು ಪ್ರಮಾಣ ವಚನ ಸ್ವೀಕರಿಸಿದರು. ಮುಂಬೈನ ಆಜಾದ್ ಮೈದಾನದಲ್ಲಿ ನಡೆದ ಸಮಾರಂಭದಲ್ಲಿ ಉಪ ಮುಖ್ಯಮಂತ್ರಿಗಳಾಗಿ ಏಕನಾಥ್‌ ಶಿಂಧೆ ಮತ್ತು ಎನ್‌ಸಿಪಿಯ ಅಜಿತ್‌ ಪವಾರ್‌ ಅವರೂ ಪ್ರಮಾಣ ವಚನ ಸ್ವೀಕರಿಸಿದರು. ಇನ್ನು ಪ್ರಮಾಣ ವಚನ ಸ್ವೀಕಾರ ಸಮಾರಂಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಕೇಂದ್ರ ಸಚಿವರಾದ ಅಮಿತ್ ಶಾ, ಜೆಪಿ ನಡ್ಡಾ ಮತ್ತು ನಿತಿನ್ ಗಡ್ಕರಿ ಉಪಸ್ಥಿತರಿದ್ದರು. ಅಲ್ಲದೆ, ಬಾಲಿವುಡ್‌ ನಟರಾದ ಸಲ್ಮಾನ್‌ ಖಾನ್‌, ಶಾರುಖ್ ಖಾನ್, ರಣವೀರ್ ಸಿಂಗ್, ರಣಬೀರ್ ಕಪೂರ್, ಮಾಜಿ ಕ್ರಿಕೆಟಿಗ ಸಚಿನ್ ತೆಂಡೂಲ್ಕರ್, ಕೈಗಾರಿಕೋದ್ಯಮಿಗಳಾದ ಮುಖೇಶ್ ಅಂಬಾನಿ ಮತ್ತು ಗೌತಮ್ ಅದಾನಿ ಕೂಡ ಭಾಗಿಯಾಗಿದ್ದರು.

ಈ ಸುದ್ದಿಯನ್ನೂ ಓದಿ: Maharashtra oath Ceremony: ಮಹಾರಾಷ್ಟ್ರ ಸಿಎಂ ಆಗಿ ದೇವೇಂದ್ರ ಫಡ್ನವೀಸ್‌ ಪ್ರಮಾಣ ವಚನ