Monday, 12th May 2025

Magician Sorcar: ಮೂವರು ಹೆಣ್ಣು ಮಕ್ಕಳ ಮದುವೆ ಮಾಡಲು ʼಸ್ವಯಂವರʼ ಏರ್ಪಡಿಸಿದ್ದಾರೆ ಖ್ಯಾತ ಜಾದೂಗಾರ!

Magician Sorcar

ಹಿಂದಿನ ಕಾಲದಲ್ಲಿ ರಾಜಕುಮಾರಿಯರ ಮದುವೆಗಾಗಿ ಸ್ವಯಂವರವನ್ನು ನಡೆಸಲಾಗುತ್ತಿತ್ತು. ಆದರೆ ಇತ್ತೀಚೆಗೆ ಕೋಲ್ಕತಾದ ಜಾದೂಗಾರ ಪಿ ಸಿ ಸರ್ಕಾರ್(Magician Sorcar) ಅವರು ತಮ್ಮ ಮೂವರು ಹೆಣ‍್ಣುಮಕ್ಕಳಿಗಾಗಿ ಸ್ವಯಂವರವನ್ನು ನಡೆಸುವುದಾಗಿ ಘೋಷಿಸಿ ಈ ಬಗ್ಗೆ ಪತ್ರಿಕೆಯಲ್ಲಿ ಜಾಹೀರಾತನ್ನು ನೀಡಿದ್ದಾರೆ. ಈ ಜಾಹೀರಾತನ್ನು ಕಂಡು ಅನೇಕರು ಹುಬ್ಬೇರಿಸಿದ್ದಾರೆ.  

ಭಾನುವಾರ ಪತ್ರಿಕೆಯೊಂದರ ‘ಪತ್ರಾ-ಪತ್ರಿ ಚಾಯ್’ ವಿಭಾಗದಲ್ಲಿ ಕಾಣಿಸಿಕೊಂಡ ಜಾಹೀರಾತಿನಲ್ಲಿ ಅವರು, “ಜಾತಿ, ಮತ, ವಯಸ್ಸು (38-45) ಲೆಕ್ಕಿಸದೆ, ಸುಂದರ, ಎತ್ತರದ, ವ್ಯಕ್ತಿ ಬೇಕಾಗಿದ್ದಾರೆ” ಎಂಬುದಾಗಿ ತಿಳಿಸಿದ್ದಾರೆ. ಅವರ ಮೂವರು ಹೆಣ್ಣುಮಕ್ಕಳ ಮದುವೆಗಾಗಿ ಈ ಜಾಹೀರಾತನ್ನು ನೀಡಿದ್ದು,  ಅನೇಕರನ್ನು ಆಶ್ಚರ್ಯಚಕಿತಗೊಳಿಸಿದೆ. ಆದರೆ ಪ್ರಸಿದ್ಧ ಜಾದುಗಾರ ಹೆಣ್ಣುಮಕ್ಕಳ ಮದುವೆಗಾಗಿ  ಈ ಅಸಾಂಪ್ರದಾಯಿಕ ವಿಧಾನವನ್ನು ಅನುಸರಿಸಲು ಮುಂದಾಗಿದ್ದು, ಅನೇಕರ ಹುಬ್ಬೇರುವಂತೆ ಮಾಡಿದೆ.

Magician Sorcar

ಪ್ರಸಿದ್ಧ ಜಾದೂಗಾರ ಪಿಸಿ ಸರ್ಕಾರ್ ಜೂನಿಯರ್ ಅವರು ಮ್ಯಾಜಿಕ್‌ ಲೋಕದಲ್ಲಿ ಹೆಸರು ಮಾಡಿದವರು. ಅದೇರೀತಿ ಅವರ  ಮೂವರು ಹೆಣ್ಣುಮಕ್ಕಳಾದ ಮೇನಕಾ, ಮುಮ್ತಾಜ್ ಮತ್ತು ಮೌಬಾನಿ ತಮ್ಮದೇ ಆದ ರೀತಿಯಲ್ಲಿ ಹೆಸರು ಮಾಡಿದ್ದಾರೆ. ಹಿರಿಯ ಮಗಳು ಮೇನಕಾ ತನ್ನ ತಂದೆಯ ದಾರಿಯನ್ನೇ ಅನುಸರಿಸಿದ್ದಾರೆ. ತನ್ನ ಮ್ಯಾಜಿಕ್‍ನಿಂದ ಪ್ರೇಕ್ಷಕರನ್ನು ಮಂತ್ರಮುಗ್ಧಗೊಳಿಸಿದ್ದಾಳೆ. ಮುಮ್ತಾಜ್ ಮತ್ತು ಮೌಬಾನಿ ಇಬ್ಬರೂ ನಟನಾ ಜಗತ್ತಿನಲ್ಲಿ ಹೆಸರು ಗಳಿಸಿದ್ದಾರೆ.

ಕಿರಿಯ ಮಗಳು ಮೌಬಾನಿ ಇತ್ತೀಚಿಗೆ ನೀಡಿದ ಸಂದರ್ಶನವೊಂದರಲ್ಲಿ , “ಸ್ವಯಂವರ ಇದು ಜೀವನ ಸಂಗಾತಿಯನ್ನು ಆಯ್ಕೆ ಮಾಡುವ ಸುಂದರವಾದ ಪ್ರಕ್ರಿಯೆಯಾಗಿದೆ, ಮತ್ತು ನಾನು ಈ ಮದುವೆಯನ್ನು ನೋಡಲು ಇಷ್ಟಪಡುತ್ತೇನೆ” ಎಂಬುದಾಗಿ ತಿಳಿಸಿದ್ದಾಳೆ. ಅಲ್ಲದೇ “ಇಂದಿನ ಜಗತ್ತಿನಲ್ಲಿ  ಬಾಹ್ಯ ಸೌಂದರ್ಯವು ಮುಖ್ಯವಾಗಬಹುದು, ಆದರೆ ನಿಜವಾಗಿಯೂ ಮುಖ್ಯವಾದುದು ಪ್ರಾಮಾಣಿಕತೆ ಮತ್ತು ಕರುಣೆ. ಅಂತವರ ಜೊತೆ ಸುಖದ ಸಂಸಾರ ಮಾಡಬಹುದು” ಎಂದು ಆಕೆ ಹೇಳಿದ್ದಾಳೆ.  ಹಾಗೇ ವಿಚ್ಛೇದನದ ಬಗ್ಗೆ ಮಾತನಾಡಿದ ಆಕೆ, “ಮದುವೆ ಒಂದು ದೊಡ್ಡ ನಿರ್ಧಾರ, ಆದರೆ ಇದರಲ್ಲಿ ಕೆಲವೊಮ್ಮೆ ಸಮಸ್ಯೆಯಾಗಿ ಅಲ್ಲೇ ಒದ್ದಾಡುವ ಬದಲು ವಿಚ್ಛೇದನ ಪಡೆಯುವುದು ಒಳ್ಳೆಯದು. ವಿಚ್ಛೇದನವನ್ನು ಯಾರು ಕೀಳಾಗಿ ನೋಡಬಾರದು. ಜೀವನದಲ್ಲಿ ಮುಂದೆ ಸಾಗಲು ಸಮಾಜವು ಜನರನ್ನು ಬೆಂಬಲಿಸಬೇಕು” ಎಂದು ತಿಳಿಸಿದ್ದಾಳೆ.

ಇದನ್ನೂ ಓದಿ: ಒಂದಲ್ಲ, ಎರಡಲ್ಲ ಬರೋಬ್ಬರಿ 14 ಶ್ವಾನಗಳ ಮಾರಣಹೋಮ! ಚರಂಡಿಯಲ್ಲಿ ತೇಲಿದ ಶವಗಳು- ಶಾಕಿಂಗ್‌ ವಿಡಿಯೋ ವೈರಲ್‌

ಹೆಣ್ಣುಮಕ್ಕಳಿಗೆ ಸೂಕ್ತ ವರರ ಹುಡುಕಾಟಕ್ಕಾಗಿ ಜಾಹೀರಾತು ನೀಡಿದ ಪಿಸಿ ಸರ್ಕಾರ್ ಅವರ ನಿರ್ಧಾರವು ಆಧುನಿಕ ಜಗತ್ತಿನಲ್ಲಿಯೂ ಪರಿಪೂರ್ಣ ಜೋಡಿ ಹುಡುಕುವ ಅವರ ನಂಬಿಕೆಯನ್ನು ತೋರಿಸುತ್ತದೆ.