Monday, 12th May 2025

ಆಸ್ಪತ್ರೆಗೆ ತಂದೆಯನ್ನು ತಳ್ಳುಗಾಡಿಯಲ್ಲೇ ಸಾಗಿಸಿದ ಬಾಲಕ..!

ಭೋಪಾಲ್: ತಳ್ಳುಗಾಡಿಯ ಮೂಲಕ 6 ವರ್ಷದ ಬಾಲಕ ಅನಾರೋಗ್ಯ ಪೀಡಿತ ತನ್ನ ತಂದೆಯನ್ನು ಸಾಗಿಸುತ್ತಿದ್ದ ಘಟನೆ ಮಧ್ಯಪ್ರದೇಶದಲ್ಲಿ ನಡೆದಿದೆ.

ಸಮಯಕ್ಕೆ ಸರಿಯಾಗಿ ಆಸ್ಪತ್ರೆಗೆ ಸೇರಿಸಲು ಅಂಬುಲೆನ್ಸ್ ಲಭ್ಯವಿರಲಿಲ್ಲ. ಇದರಿಂದಾಗಿ ರೋಗಿಯನ್ನು ಆತನ ಮಗ ತಳ್ಳುಗಾಡಿಯಲ್ಲಿ ಮಲಗಿಸಿ ಅವರನ್ನು ತಳ್ಳುತ್ತಿರುವ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾ ಡುತ್ತಿದೆ.

ನೀಲಿ ಬಣ್ಣದ ಶರ್ಟ್ ಹಾಗೂ ಜೀನ್ಸ್ ಧರಿಸಿರುವ ಬಾಲಕ ತನ್ನ ತಂದೆಯನ್ನು ತಳ್ಳು ಗಾಡಿಯಲ್ಲಿ ಮಲಗಿಸಿ 3 ಕಿ.ಮೀವರೆಗೆ ತಳ್ಳಿಕೊಂಡು ಕರೆದೊಯ್ದಿದ್ದಾನೆ. ಬಾಲಕನ ತಾಯಿಯು ಇದ್ದು, ಆಕೆ ಇನ್ನೊಂದು ತುದಿಯಲ್ಲಿ ತಳ್ಳುಗಾಡಿಯನ್ನು ತಳ್ಳುತ್ತಿದ್ದಾರೆ. ಮಧ್ಯಪ್ರದೇಶದ ಸಿಂಗ್ರೌಲಿಯಲ್ಲಿ ಈ ಘಟನೆ ನಡೆದಿದೆ.

ಷಾ ಕುಟುಂಬದವರು ಅಂಬುಲೆನ್ಸ್ಗಾಗಿ ಸರ್ಕಾರಿ ಆಸ್ಪತ್ರೆಗಾಗಿ ಕರೆ ಮಾಡಿದ್ದಾರೆ. ಆದರೆ ಅಂಬುಲೆನ್ಸ್ 20 ನಿಮಿಷಗಳ ಕಾಲ ಕಾದಿದ್ದಾರೆ. ಆದರೂ ಅಂಬುಲೆನ್ಸ್ ಬಾರದಿದ್ದರಿಂದ ಷಾ ಕುಟುಂಬವು ಆತನನ್ನು ತಳ್ಳುವ ಗಾಡಿಯಲ್ಲಿ ಆಸ್ಪತ್ರೆಗೆ ಕರೆದೊಯ್ಯಲು ನಿರ್ಧರಿಸಿತು.

ಘಟನೆ ಕುರಿತು ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕ ಚರ್ಚೆ ಆಗುತ್ತಿದ್ದಂತೆ, ಅಲ್ಲಿನ ಜಿಲ್ಲಾಡಳಿತ ಎಚ್ಚೆತ್ತುಕೊಂಡಿದ್ದು, ತನಿಖೆಗೆ ಆದೇಶಿಸಿದೆ.