ಮುಂಬೈ: ಮನುಷ್ಯನ ಜೀವನ ನೀರ ಮೇಲಿನ ಗುಳ್ಳೆಯಂತೆ. ಅನಿಶ್ಚಿತತೆ ಇಲ್ಲಿ ಸಾಮಾನ್ಯ. ಆರೋಗ್ಯವಂತರಾಗಿ ಲವಲವಿಕೆಯಿಂದ ಓಡಾಡುತ್ತಿರುವ ಯುವಕರೂ ಹಠಾತ್ ಹೃದಯಾಘಾತವೋ, ಅಪಘಾತವೋ ಆಗಿ ಸಾವಿಗೀಡಾಗುತ್ತಾರೆ. ಆದ್ದರಿಂದ ನಿಮಗಾಗಿ ಮತ್ತು ನಿಮ್ಮ ಕುಟುಂಬಕ್ಕೋಸ್ಕರ ಹೂಡಿಕೆ ಮಾಡುವುದಕ್ಕೂ ಮುನ್ನ ಅದರ ರಕ್ಷಣೆಗಾಗಿ ವಿಮೆಯನ್ನು ತಪ್ಪದೆ ಮಾಡಿಸಿಕೊಳ್ಳಿ. ಇನ್ನೂ ಸರಳವಾಗಿ ವಿಮೆಯ ಮಹತ್ವವನ್ನು ಅರ್ಥ ಮಾಡಿಕೊಳ್ಳಲು ಈ ಕಥೆಯನ್ನು ಓದಿ(Life Insurance).
ಶೇಖರ ಎನ್ನುವವರಿಗೆ ಪ್ರತಿ ತಿಂಗಳು ಕುಟುಂಬದ ಖರ್ಚು ವೆಚ್ಚ 25,000 ರೂ. ಬರುತ್ತಿದೆ. 25 ಲಕ್ಷ ರೂ.ಗಳ ಗೃಹ ಸಾಲ ಅವರಿಗಿದ್ದು 10 ವರ್ಷಗಳೊಳಗೆ ಮರು ಪಾವತಿಸಬೇಕಿದೆ. ಶೇಖರ ಅವರಿಗೆ 27 ವರ್ಷ ವಯಸ್ಸು. ಪತ್ನಿ ಮತ್ತು ಇಬ್ಬರು ಮಕ್ಕಳು ಮತ್ತು ಪೋಷಕರಿದ್ದಾರೆ. ಎಲ್ಲರೂ ಹಣಕಾಸಿನ ವಿಚಾರದಲ್ಲಿ ಶೇಖರ್ ಅವರನ್ನೇ ಅವಲಂಬಿಸಿದ್ದಾರೆ. ಈಗ ಶ್ಯಾಮ್ ಅವರು ದಿಢೀರ್ ಹೃದಯಾಘಾತದಿಂದ ಮೃತಪಟ್ಟರೆ ಗೃಹ ಸಾಲವನ್ನು ಮರು ಪಾವತಿಸುವ ಜವಾಬ್ದಾರಿ ಯಾರು ತೆಗೆದುಕೊಳ್ಳುತ್ತಾರೆ? ಕುಟುಂಬದ ಖರ್ಚು ವೆಚ್ಚ ಯಾರು ನೋಡಿಕೊಳ್ಳುತ್ತಾರೆ
ತಿಂಗಳಿಗೆ ಖರ್ಚಿಗೆ 25,000 ರೂ.ಗಳಂತೆ ವಾರ್ಷಿಕ 3 ಲಕ್ಷ ರೂ. ಬೇಕು. ಬ್ಯಾಂಕ್‌ನಲ್ಲಿ 35 ಲಕ್ಷದಿಂದ 40 ಲಕ್ಷ ರೂ. ತನಕ ನಿಧಿ ಇದ್ದರೆ ಬಡ್ಡಿ ಆದಾಯದಲ್ಲಿ ಭರಿಸಬಹುದು. ಹೋಮ್‌ಲೋನ್ 25 ಲಕ್ಷ ರೂ. ಸೇರಿಸಿದರೆ ಕನಿಷ್ಠ 65 ಲಕ್ಷ ರೂ. ಬೇಕಾಗುತ್ತದೆ. ಆದರೆ ಹಣದುಬ್ಬರ ಪರಿಗಣಿಸಿದರೆ ಮುಂದಿನ ಕೆಲ ವರ್ಷಗಳಲ್ಲಿ 65 ಲಕ್ಷ ರೂ. ಸಾಲದಿರಬಹುದು. ಆಗ ಆ ಖರ್ಚನ್ನು ಭರಿಸಲು ಕನಿಷ್ಠ 75 ರಿಂದ 80 ಲಕ್ಷ ರೂ. ಮೌಲ್ಯದ ವಿಮೆಯ ಕವರೇಜ್ ಬೇಕಾಗುತ್ತದೆ. ಆದ್ದರಿಂದ ಶ್ಯಾಮ್ ಅವರು ಈ ಮೊತ್ತದ ವಿಮೆ ತೆಗೆದುಕೊಂಡರೆ, ಅವರು ನಿಶ್ಚಿಂತೆಯಿಂದ ಬದುಕಬಹುದು. ನಿಮ್ಮ ವೈಯಕ್ತಿಕ ಆದಾಯದ ಕನಿಷ್ಠ 10ರಿಂದ 15 ಪಟ್ಟು ಮೌಲ್ಯಕ್ಕೆ ಸಮವಾಗುವಷ್ಟು ಜೀವ ವಿಮೆಯ ಕವರೇಜ್ ಅಗತ್ಯ ಎನ್ನುತ್ತಾರೆ ವಿಮೆ ತಜ್ಞರು.
ಜೀವ ವಿಮೆಗಳಲ್ಲಿ ಎಷ್ಟು ವಿಧ? ಯಾವುದು ಬೆಸ್ಟ್?
ಜೀವ ವಿಮೆಗಳಲ್ಲಿ ಮುಖ್ಯವಾಗಿ ಐದು ವಿಧಗಳು ಇವೆ. ಟರ್ಮ್ ಇನ್ಷೂರೆನ್ಸ್, ಎಂಡೊಮೆಂಟ್ ಇನ್ಷೂರೆನ್ಸ್, ಸಮಗ್ರ ಜೀವ ವಿಮೆ, ಮನಿ-ಬ್ಯಾಕ್ ಪ್ಲಾನ್ ಮತ್ತು ಯುಲಿಪ್. ಟರ್ಮ್ ಇನ್ಷೂರೆನ್ಸ್ ಎಂದರೆ, ಅಪ್ಪಟ ಜೀವ ವಿಮೆ ಉತ್ಪನ್ನ. ಇದು ಹೆಸರೇ ಸೂಚಿಸುವಂತೆ ನಿರ್ದಿಷ್ಟ ಅವಧಿಯನ್ನು ಒಳಗೊಂಡಿರುತ್ತದೆ. ಇದರ ಪ್ರೀಮಿಯಂ ವೆಚ್ಚ ಅತ್ಯಲ್ಪ. 1 ವರ್ಷದಿಂದ 35 ವರ್ಷದ ತನಕ ಅವಧಿಯನ್ನು ಆಯ್ಕೆ ಮಾಡಿಕೊಳ್ಳಬಹುದು. ಪಾಲಿಸಿಯ ಅವಧಿಯಲ್ಲಿ ಪ್ರೀಮಿಯಂ ದರ ಸ್ಥಿರವಾಗಿರುತ್ತದೆ. ಇಲ್ಲಿ ಪ್ರೀಮಿಯಂ ರಿಫಂಡ್ ಆಗುವುದಿಲ್ಲ.
ಪಾಲಿಸಿದಾರರು ಅವಧಿಯೊಳಗೆ ಮೃತಪಟ್ಟರೆ ವಿಮೆ ಕವರೇಜ್ ಮೊತ್ತದ ಹಣ ಸಿಗುತ್ತದೆ. ಎಂಡೊಮೆಂಟ್ ವಿಮೆಯಲ್ಲಿ ಜೀವ ವಿಮೆಯ ಜತೆಗೆ, ಮೆಚ್ಯೂರಿಟಿಯ ಅವಧಿ ಆದ ಬಳಿಕ ಹಣ ಸಿಗುತ್ತದೆ. ಪಾಲಿಸಿದಾರ ಮೃತಪಟ್ಟರೆ ನಾಮಿನಿಗೆ ಇಡಿಯಾಗಿ ಪರಿಹಾರ ಮೊತ್ತ ಸಿಗುತ್ತದೆ. ಪಾಲಿಸಿ ಮೆಚ್ಯೂರ್ ಆದಾಗ ಪಾಲಿಸಿದಾರ ಬದುಕಿದ್ದರೂ, ಆತನಿಗೆ ಮೆಚ್ಯೂರಿಟಿಯ ಬೆನಿಫಿಟ್‌ಗಳು ಸಿಗುತ್ತವೆ. ಇದರಿಂದ ಜೀವ ವಿಮೆಯ ಜತೆಗೆ ಉಳಿತಾಯದ ಅಭ್ಯಾಸವೂ ಹೆಚ್ಚುತ್ತದೆ. ಹೋಲ್ ಲೈಫ್ ಇನ್ಸೂರೆನ್ಸ್ ಪಾಲಿಸಿಗಳಲ್ಲಿ ಫಿಕ್ಸೆಡ್ ಎಂಡ್ ಡೇಟ್ ಇರುವುದಿಲ್ಲ. ಡೆತ್ ಬೆನಿಫಿಟ್ ಮಾತ್ರ ಇರುತ್ತದೆ. ಖಾತರಿಯ ಡೆತ್ ಬೆನಿಫಿಟ್ ಕೊಡುವುದು ಇದರ ಉದ್ದೇಶ.
ಮನಿ ಬ್ಯಾಕ್ ಪಾಲಿಸಿಗಳಲ್ಲಿ ಪಾಲಿಸಿಯ ಅವಧಿಯುದ್ದಕ್ಕೂ ನಿಗದಿತ ಅವಧಿಗಳಲ್ಲಿ ನಿಮಗೆ ನಿರ್ದಿಷ್ಟ ಹಣ ಸಿಗುತ್ತದೆ. ಮಧ್ಯೆ ಪಾಲಿಸಿದಾರ ಮೃತಪಟ್ಟರೆ ವಿಮೆಯ ಬೆನಿಫಿಟ್ ಸಿಗುತ್ತದೆ. ಇಲ್ಲಿಯೂ ವಿಮೆ ಮತ್ತು ಸೇವಿಂಗ್ಸ್ ಅನುಕೂಲ ದೊರೆಯುತ್ತದೆ. ಇದು ಕೂಡ ದೀರ್ಘಕಾಲೀನ ಉಳಿತಾಯಕ್ಕೆ ಉತ್ತೇಜನಕಾರಿಯಾಗಿದೆ. ಯುಲಿಪ್ ಎಂದರೆ ಯುನಿಟ್ ಲಿಂಕ್ಡ್ ಇನ್ಷೂರೆನ್ಸ್ ಪಾಲಿಸಿಯಾಗಿದೆ. ಇಲ್ಲಿ ನಿಮಗೆ ಜೀವ ವಿಮೆ ಮತ್ತು ಮ್ಯೂಚುವಲ್ ಫಂಡ್ ಬೆನಿಫಿಟ್ ಸಿಗುತ್ತದೆ. ಯುಲಿಪ್‌ಗಳಲ್ಲಿ ಪ್ರೀಮಿಯಂನ ನಿರ್ದಿಷ್ಟ ಪಾಲನ್ನು ಮ್ಯೂಚುವಲ್ ಫಂಡ್, ಷೇರುಗಳಲ್ಲಿ ಹೂಡಿಕೆ ಮಾಡುತ್ತಾರೆ. ಹೀಗೆ ಜೀವ ವಿಮೆಗಳಲ್ಲಿ ಇರುವ ವಿಧಗಳ ವ್ಯತ್ಯಾಸಗಳ ಬಗ್ಗೆ ಅರಿತುಕೊಂಡು ನಿಮ್ಮ ಅಗತ್ಯಕ್ಕೆ ಸೂಕ್ತವಾಗಬಲ್ಲ ವಿಮೆಯನ್ನು ಖರೀದಿಸಿಕೊಳ್ಳಿ.
ಆಸ್ಪತ್ರೆ ಖರ್ಚು ಭರಿಸಲು ಯಾವ ಹೆಲ್ತ್ ಇನ್ಷೂರೆನ್ಸ್ ಬೇಕು?
ಆರೋಗ್ಯವೇ ಭಾಗ್ಯ ಎಂಬ ಗಾದೆ ಮಾತನ್ನು ನೀವು ಕೇಳಿರಬಹುದು. ಇದು ಸಂಪೂರ್ಣ ಸತ್ಯ. ಈಗಿನ ಜಮಾನದಲ್ಲಿ ಆಸ್ಪತ್ರೆ ವೆಚ್ಚಗಳು ಅತಿ ದುಬಾರಿಯಾಗಿವೆ. ಬಹುತೇಕ ಭಾರತೀಯರು ಆರ್ಥಿಕವಾಗಿ ದಿವಾಳಿಯಾಗಲು ಒಂದು ಸಲ ಆಸ್ಪತ್ರೆಗೆ ದಾಖಲಾದರೆ ಸಾಕು! ಎಂದು ಜೆರೊಧಾದ ಸಂಸ್ಥಾಪಕರಾದ ನಿತಿನ್ ಕಾಮತ್ ಅವರು ಹೇಳಿದ್ದಾರೆ. ಭಾರತೀಯರಿಗೆ ಆರೋಗ್ಯ ವಿಮೆ ಅಥವಾ ಹೆಲ್ತ್ ಇನ್ಷೂರೆನ್ಸ್ ಎಷ್ಟು ಮುಖ್ಯ ಎಂಬುದನ್ನು ಇದು ಬಿಂಬಿಸುತ್ತದೆ.
ಸಮೀಕ್ಷೆಯೊಂದರ ಪ್ರಕಾರ, ಭಾರತದ ಜನಸಂಖ್ಯೆಯಲ್ಲಿ 10%ಗಿಂತ ಕಡಿಮೆ ಮಂದಿಗೆ ಆಸ್ಪತ್ರೆ ವೆಚ್ಚವಾಗಿ 5 ಲಕ್ಷ ರೂ. ಅಥವಾ ಅದಕ್ಕಿಂತ ಕಡಿಮೆ ಮೊತ್ತವಾದರೂ ಭರಿಸಲು ಶಕ್ತಿ ಇಲ್ಲ. ಈಗಂತೂ ಕ್ಯಾನ್ಸರ್, ಹೃದಯದ ಸಮಸ್ಯೆ, ನಾನಾ ಗಂಭೀರ ಕಾಯಿಲೆಗಳು ಸಾಮಾನ್ಯವಾಗಿದೆ. ಆದ್ದರಿಂದ ಆಸ್ಪತ್ರೆ ವೆಚ್ಚ ಭರಿಸಲು ಆರೋಗ್ಯ ವಿಮೆ ಸೂಕ್ತ ಪರಿಹಾರ. ಆರೋಗ್ಯ ವಿಮೆಗಳ ಪೈಕಿ ಮೆಡಿಕ್ಲೇಮ್ ಪಾಲಿಸಿಯೂ ಮಹತ್ವದ್ದು. ಇದು ಆಸ್ಪತ್ರೆ ವೆಚ್ಚಗಳನ್ನು ಭರಿಸುತ್ತದೆ. ಇದರಲ್ಲಿ ಫ್ಯಾಮಿಲಿ ಫ್ಲೋಟರ್ ಪಾಲಿಸಿ ಮತ್ತು ವೈಯಕ್ತಿಕ ಪಾಲಿಸಿ ಎಂಬ ಎರಡು ವಿಧಗಳಿವೆ. ಫ್ಯಾಮಿಲಿ ಫ್ಲೋಟರ್ ಪಾಲಿಸಿಯು ಒಂದೇ ಪ್ರೀಮಿಯಂನಲ್ಲಿ ಇಡೀ ಕುಟುಂಬಕ್ಕೆ ಕವರೇಜ್ ನೀಡುತ್ತದೆ. ವೈಯಕ್ತಿಕ ಪಾಲಿಸಿಯಲ್ಲಿ ಪ್ರತಿ ವ್ಯಕ್ತಿಗೆ ಪ್ರತ್ಯೇಕ ಕವರೇಜ್ ಸಿಗುತ್ತದೆ.
ಸಾರ್ವಜನಿಕ ವಲಯದ ನ್ಯಾಶನಲ್ ಇನ್ಷೂರೆನ್ಸ್ ಕಂಪನಿ, ನ್ಯೂ ಇಂಡಿಯಾ ಅಶ್ಶೂರೆನ್ಸ್, ಯುನೈಟೆಡ್ ಇಂಡಿಯಾ ಅಶ್ಶೂರೆನ್ಸ್ ಸಂಸ್ಥೆಗಳು ಆರೋಗ್ಯ ವಿಮೆ ವಿತರಿಸುತ್ತವೆ. ಖಾಸಗಿ ವಲಯದಲ್ಲಿ ಬಜಾಜ್ ಅಲಿಯಾನ್ಜ್, ಫ್ಯೂಚರ್ ಜನರಲಿ ಇಂಡಿಯಾ ಇನ್ಷೂರೆನ್ಸ್, ಐಸಿಐಸಿಐ ಲ್ಯಾಂಬೋರ್ಡ್, ಎಚ್‌ಡಿಎಫ್‌ಸಿ ಅರ್ಗೊ ಜನರಲ್ ಇನ್ಷೂರೆನ್ಸ್, ಟಾಟಾ ಎಐಜಿ ಜನರಲ್, ಭಾರ್ತಿ ಅಕ್ಸಾ ಜನರಲ್ ಇನ್ಸೂರೆನ್ಸ್ ಮುಂತಾದ ಸಂಸ್ಥೆಗಳು ಹೆಲ್ತ್ ಇನ್ಷೂರೆನ್ಸ್ ಒದಗಿಸುತ್ತವೆ.
ಈ ಸುದ್ದಿಯನ್ನೂ ಓದಿ: ವಾಣಿಜ್ಯ ಸಂಸ್ಥೆಗಳ ಕಾಯ್ದೆಗೆ ತಿದ್ದುಪಡಿಯಾಗಲಿ