Sunday, 11th May 2025

Heavy Rain: ಕರ್ನಾಟಕ ಸೇರಿ ದಕ್ಷಿಣ ಭಾರತದಲ್ಲಿ ಕಡಿಮೆ, ಹಿಮಾಲಯದ ತಪ್ಪಲಿನಲ್ಲಿ ಹೆಚ್ಚು ಮಳೆ ನಿರೀಕ್ಷೆ

Heavy Rain

ಆಗಸ್ಟ್ ನಲ್ಲಿ ಭಾರಿ ಮಳೆಯ (Heavy Rain) ಬಳಿಕ ಇದೀಗ ಭಾರತೀಯ ಹವಾಮಾನ ಇಲಾಖೆಯು ( India Meteorological Department) ಸೆಪ್ಟೆಂಬರ್‌ನಲ್ಲೂ ಸಾಮಾನ್ಯಕ್ಕಿಂತ ಹೆಚ್ಚು ಮಳೆಯಾಗುವ ಮುನ್ಸೂಚನೆ ನೀಡಿದೆ. ದೇಶದ ವಿವಿಧ ಭಾಗಗಳಲ್ಲಿ ಸೆಪ್ಟೆಂಬರ್‌ ತಿಂಗಳಿನಲ್ಲಿ ಸರಾಸರಿ 168 ಮಿಮೀ ಗಿಂತ ಹೆಚ್ಚು ಮಳೆ ಬೀಳುವ ಸಾಧ್ಯತೆ ಇದ್ದರೂ ಕರ್ನಾಟಕದಲ್ಲಿ (karnataka) ಮಾತ್ರ ಸರಾಸರಿಗಿಂತ ಕಡಿಮೆ ಮಳೆಯಾಗಲಿದೆ ಎಂದು ತಿಳಿಸಿದೆ.

ವಾಯುಭಾರ ಕುಸಿತದ ಪರಿಣಾಮ ನಿರಂತರ ಮಳೆಯಾಗಲಿದೆ. ಹಿಮಾಲಯದ ತಪ್ಪಲಿನಲ್ಲಿ ವಿಶೇಷವಾಗಿ ಉತ್ತರಾಖಂಡ, ಹಿಮಾಚಲ ಪ್ರದೇಶ, ಜಮ್ಮು ಮತ್ತು ಕಾಶ್ಮೀರ, ಪಂಜಾಬ್, ರಾಜಸ್ಥಾನದಲ್ಲಿ ಭಾರೀ ಮಳೆಯಿಂದಾಗಿ ಭೂಕುಸಿತ, ಪ್ರವಾಹ ಉಂಟಾಗುವ ಸಾಧ್ಯತೆ ಇದೆ ಎಂದು ಹವಾಮಾನ ಮಹಾನಿರ್ದೇಶಕ (ಡಿಜಿಎಂ) ಎಂ. ಮೊಹಪಾತ್ರ ತಿಳಿಸಿದ್ದಾರೆ.

ಈ ವಾರದಲ್ಲಿ ಎರಡು ಚಂಡಮಾರುತಗಳು ಉಂಟಾಗುವ ಸಾಧ್ಯತೆ ಇದೆ. ಇದರಲ್ಲಿ ಒಂದು ಅರಬ್ಬಿ ಸಮುದ್ರ ಮತ್ತು ಇನ್ನೊಂದು ಬಂಗಾಳ ಕೊಲ್ಲಿಯಲ್ಲಿ ರೂಪುಗೊಳ್ಳಲಿದೆ. ಎರಡು ಮತ್ತು ಮೂರನೇ ವಾರದಲ್ಲಿ ಅಂತಹ ಇನ್ನೂ ಎರಡು ಚಂಡಮಾರುತಗಳು ಮತ್ತೆ ರೂಪುಗೊಳ್ಳುವ ಸಾಧ್ಯತೆಯಿದೆ. ಇವೆಲ್ಲವೂ ಒಡಿಶಾದ ಪಶ್ಚಿಮ ಉತ್ತರ ಪ್ರದೇಶದ ಕಡೆಗೆ ಚಲಿಸಲಿದೆ.

ಬಂಗಾಳ ಕೊಲ್ಲಿಯಲ್ಲಿ ಏಳುವ ಚಂಡಮಾರುತ ರಾಜಸ್ಥಾನದವರೆಗೆ ಪ್ರಯಾಣಿಸುವ ಸಾಧ್ಯತೆಯಿದೆ. ಇದರಿಂದ ವಾಯುವ್ಯ ಭಾರತದ ಮೇಲೆ ಹೆಚ್ಚಿನ ಮಳೆಯಾಗಲಿದೆ.

ದಕ್ಷಿಣ ಭಾರತದ ರಾಯಲಸೀಮಾ, ಕರ್ನಾಟಕ, ಉತ್ತರ ಬಿಹಾರ ಮತ್ತು ಈಶಾನ್ಯ ಭಾರತದ ಬಹುತೇಕ ಭಾಗಗಳಲ್ಲಿ ಕಡಿಮೆ ಮಳೆಯಾಗಬಹುದು. ಒಟ್ಟಾರೆಯಾಗಿ ನೈಋತ್ಯ ಮಾನ್ಸೂನ್ ದೀರ್ಘಾವಧಿಯ ಸರಾಸರಿ ಗಿಂತ ಶೇ. 7ರಷ್ಟು ಹೆಚ್ಚಾಗಿದೆ.

ಹಗಲು ಮತ್ತು ರಾತ್ರಿಯಲ್ಲಿ ತಾಪಮಾನವು ಸಾಮಾನ್ಯಕ್ಕಿಂತ ಹೆಚ್ಚಾಗಿರುತ್ತದೆ. ಮುಂದಿನ ಎರಡು ವಾರಗಳ ಗುಜರಾತ್ ಮತ್ತು ಆಂಧ್ರಪ್ರದೇಶದಲ್ಲಿ ಅತೀ ಹೆಚ್ಚು ಮಳೆಯಾಗಲಿದೆ. ಮಧ್ಯ ಭಾರತ, ವಾಯುವ್ಯ ಭಾರತ ಮತ್ತು ಉತ್ತರ ಭಾಗಗಳಲ್ಲಿ ಮುಂದಿನ ಎರಡು ವಾರಗಳವರೆಗೆ ಭಾರೀ ಮಳೆಯಾಗುವ ಸೂಚನೆ ಇದೆ.

ಜೂನ್‌ನಲ್ಲಿ ನಿರೀಕ್ಷಿತ ಪ್ರಮಾಣದಲ್ಲಿ ಮಳೆಯಾಗಿದ್ದು, ಅನಂತರ ಜುಲೈನಲ್ಲಿ ವೇಗ ಪಡೆದುಕೊಂಡಿತುಬಳಿಕ ಸಾಮಾನ್ಯಕ್ಕಿಂತ ಹೆಚ್ಚಿನ ಮಳೆ ಸುರಿಯಿತು. ಆಗಸ್ಟ್ ತಿಂಗಳಲ್ಲಿ ಶೇ. 15ರಷ್ಟು ಹೆಚ್ಚಿನ ಮಳೆಯಾಗಿದೆ. ಇದು ಸಾಮಾನ್ಯ ಮಳೆಗಿಂತ ಹೆಚ್ಚಾಗಿದ್ದರೂ ದೀರ್ಘಾವಧಿಯ ಸರಾಸರಿಗಿಂತ ಕಡಿಮೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

Leave a Reply

Your email address will not be published. Required fields are marked *