Tuesday, 13th May 2025

ಡೊರಂಡ ಖಜಾನೆ ಪ್ರಕರಣ: ಲಾಲು ’ದೋಷಿ’

ರಾಂಚಿ: ಬಿಹಾರದ ಮಾಜಿ ಮುಖ್ಯಮಂತ್ರಿ ಲಾಲು ಪ್ರಸಾದ್‌ ಯಾದವ್‌ ಅವರನ್ನು ಮೇವು ಹಗರಣಕ್ಕೆ ಸಂಬಂಧಿಸಿದ ಡೊರಂಡ ಖಜಾನೆ ಪ್ರಕರಣದಲ್ಲಿ ದೋಷಿ ಎಂದು ಸಿಬಿಐ ವಿಶೇಷ ನ್ಯಾಯಾಲಯ ತೀರ್ಪು ನೀಡಿದೆ. ಶಿಕ್ಷೆ ಪ್ರಮಾಣವನ್ನು ಕೋರ್ಟ್‌ ಫೆ.18ರಂದು ಪ್ರಕಟಿಸಲಿದೆ.

ಪ್ರಕರಣದ ಇತರ 36ರ ಮಂದಿಗೆ ಮೂರು ವರ್ಷಗಳ ಜೈಲು ಶಿಕ್ಷೆ ಘೋಷಿಸಲಾಗಿದೆ. ಲಾಲೂ ಅವ ರನ್ನು ದೋಷಿ ಎಂದು ಕೋರ್ಟ್‌ ಹೇಳಿದ್ದು, ಅವರ ಶಿಕ್ಷೆಯ ಪ್ರಮಾಣವನ್ನು ತಿಳಿಸಬೇಕಾಗಿದೆ ಎಂದು ಪ್ರಕರಣದ ಪ್ರತಿವಾದಿ ವಕೀಲ ಸಂಜಯ್‌ ಕುಮಾರ್‌ ತಿಳಿಸಿದ್ದಾರೆ.

ಅವಿಭಜಿತ ಬಿಹಾರದಲ್ಲಿ ನಡೆದಿದ್ದ ₹950 ಕೋಟಿ ಮೊತ್ತದ ಮೇವು ಹಗರಣದಲ್ಲಿ, ವಿವಿಧ ಜಿಲ್ಲೆಗಳಲ್ಲಿನ ಸರ್ಕಾರಿ ಖಜಾನೆಗಳಿಂದ ಹಣವನ್ನು ಅಕ್ರಮ ವಾಗಿ ಪಡೆದುಕೊಳ್ಳಲಾಗಿತ್ತು. ಡೊರಂಡ ಜಿಲ್ಲಾ ಸರ್ಕಾರಿ ಖಜಾನೆಯಿಂದ ₹139 ಕೋಟಿಗಳನ್ನು ಅಕ್ರಮವಾಗಿ ಪಡೆಯಲಾಗಿತ್ತು.

ಮೇವು ಹಗರಣದ ದುಮ್ಕಾ, ದಿಯೋಘರ್ ಮತ್ತು ಚೈಬಾಸಾ ಖಜಾನೆಗಳಿಂದ ಹಣ ಪಡೆದುಕೊಂಡ ನಾಲ್ಕು ಪ್ರಕರಣಗಳಲ್ಲಿ ಲಾಲು ಅವರಿಗೆ ಈಗಾಗಲೇ 14 ವರ್ಷಗಳ ಜೈಲು ಶಿಕ್ಷೆ ಮತ್ತು ಒಟ್ಟು 60 ಲಕ್ಷ ರೂ.ಗಳ ದಂಡ ವಿಧಿಸಲಾಗಿದೆ.