Monday, 12th May 2025

Kolkata Horror: ಟಿಎಂಸಿ ಕೌನ್ಸಿಲರ್ ಮೇಲೆ ಗುಂಡಿನ ದಾಳಿ ಯತ್ನ; ಓರ್ವ ಆರೋಪಿಯ ಬಂಧನ

Kolkata Horror

ಕೊಲ್ಕತ್ತಾ: ತೃಣಮೂಲ ಕಾಂಗ್ರೆಸ್‌ನ (TMC) ಕೌನ್ಸಿಲರ್ ಸುಶಾಂತ ಘೋಷ್ ಅವರನ್ನು ಗುಂಡಿಕ್ಕಿ ಕೊಲೆ ಮಾಡಲು ಯತ್ನಿಸಿದ (Kolkata Horror) ಆರೋಪಿಯನ್ನು ಬಂಧಿಸಲಾಗಿದೆ. ಶುಕ್ರವಾರ (ನ. 15) ರಾತ್ರಿ 8:10ರ ಸುಮಾರಿಗೆ ಇಬ್ಬರು ವ್ಯಕ್ತಿಗಳು ಕಸ್ಬಾ ಪ್ರದೇಶದಲ್ಲಿ ಇರುವ ಸುಭಾಷ್‌ ಅವರ ನಿವಾಸಕ್ಕೆ ಸ್ಕೂಟರ್‌ನಲ್ಲಿ ಬಂದು ಕೊಲೆ ಮಾಡಲು ಯತ್ನಿಸಿದ್ದರು.

ಶುಕ್ರವಾರ ರಾತ್ರಿ ಕೌನ್ಸಿಲರ್ ನಿವಾಸದ ಬಳಿ ಬಂದ ಹಂತಕರು ಸುಶಾಂತ ಘೋಷ್ ಅವರ ಮೇಲೆ ಗುಂಡು ಹಾರಿಸಲು ಪ್ರಯತ್ನ ಪಟ್ಟಿದ್ದಾರೆ. ರಿವಾಲ್ವರ್ ಹಿಡಿದು ಬಂದ ವ್ಯಕ್ತಿಗಳು 2 ಬಾರಿ ಗುಂಡು ಹಾರಿಸಲು ಪ್ರಯತ್ನ ಪಟ್ಟಿದ್ದರು. ಆದರೆ ರಿವಾಲ್ವರ್ ಅಸಮರ್ಪಕವಾಗಿ ಕೆಲಸ ಮಾಡಿದ್ದರಿಂದ ಗುಂಡು ಹಾರಿಸಲು ಸಾಧ್ಯವಾಗಲಿಲ್ಲ.

ಯೋಜನೆ ವಿಫಲವಾದುದನ್ನು ನೋಡಿದ ಇಬ್ಬರು ಸ್ಥಳದಿಂದ ತಪ್ಪಿಸಿಕೊಳ್ಳಲು ಪ್ರಯತ್ನಿಸಿದರು. ಆದರೆ ನೆರೆಹೊರೆಯವರು ಮತ್ತು ಕೆಲವು ತೃಣಮೂಲ ಕಾಂಗ್ರೆಸ್ ಬೆಂಬಲಿಗರು ಅವರನ್ನು ಬೆನ್ನಟ್ಟಿದ್ದಾರೆ. ಈ ಪೈಕಿ ಓರ್ವ ಆರೋಪಿ ಪರಾರಿಯಾಗಿದ್ದು, ಓರ್ವನನ್ನು ಬಂಧಿಸಲಾಗಿದೆ.

ಕೋಲ್ಕತ್ತಾ ಪೋಲೀಸರು ಸದ್ಯ ಆರೋಪಿಯನ್ನು ಬಂಧಿಸಿದ್ದು, ಆತನ ಬಳಿಯಿಂದ ಒಂದು ರಿವಾಲ್ವರ್ ಮತ್ತು ಎರಡು ಮ್ಯಾಗಜೀನ್‌ಗಳನ್ನು ವಶಪಡಿಸಿಕೊಂಡಿದ್ದಾರೆ. ಇನ್ನೊಬ್ಬ ಆರೋಪಿಯ ಹುಡುಕಾಟ ನಡೆಯುತ್ತಿದೆ. ಸುಶಾಂತ ಘೋಷ್‌ ಕೋಲ್ಕತ್ತಾದ ವಾರ್ಡ್ ನಂ 108ರಿಂದ ತೃಣಮೂಲ ಕಾಂಗ್ರೆಸ್ ಕೌನ್ಸಿಲರ್  ಆಗಿದ್ದಾರೆ.

ಇದನ್ನೂ ಓದಿ : Udaipur horror: ಥೈಯ್ಲೆಂಡ್‌ ಯುವತಿಗೆ ಗುಂಡೇಟು: ಆಸ್ಪತ್ರೆಗೆ ದಾಖಲಿಸಿ ಹುಡುಗರು ಎಸ್ಕೇಪ್‌- ಭಾರೀ ನಿಗೂಢವಾಗಿದೆ ಈ ಕೇಸ್‌!

ಮೂಲಗಳ ಪ್ರಕಾರ ಆರೋಪಿ ಉತ್ತರ ಪ್ರದೇಶದ ನಿವಾಸಿಯಾಗಿದ್ದು, ಸುಶಾಂತ ಘೋಷ್ ಅವರನ್ನು ಹತ್ಯೆ ಮಾಡಲು ಮುಹಮ್ಮದ್ ಇಕ್ಬಾಲ್ ಎಂಬ ವ್ಯಕ್ತಿ ತನ್ನನ್ನು ನೇಮಿಸಿಕೊಂಡಿದ್ದ ಎಂದು ಪೊಲೀಸರಿಗೆ ತಿಳಿಸಿದ್ದಾನೆ. ತೃಣಮೂಲ ಕಾಂಗ್ರೆಸ್ ನಾಯಕನ ಫೋಟೋ ತೋರಿಸಿ ಗುಂಡು ಹಾರಿಸುವಂತೆ ಸೂಚಿಸಲಾಗಿದೆ ಎಂದು ಆರೋಪಿ ಪೊಲೀಸ್‌ ವಿಚಾರಣೆಯಲ್ಲಿ ಬಾಯಿಬಿಟ್ಟಿದ್ದಾನೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ. ಉಳಿದ ಆರೋಪಿಗಳಿಗಾಗಿ ಶೋಧ ನಡೆಯುತ್ತಿದೆ.