Monday, 12th May 2025

Kolkata Doctor Murder: ಕೆಲವೇ ಕ್ಷಣದಲ್ಲಿ ಪ್ರತಿಭಟನಾ ನಿರತ ವೈದ್ಯರ ಜತೆ ಮಮತಾ ಬ್ಯಾನರ್ಜಿ ಮಹತ್ವದ ಸಭೆ

kolkata doctor murder

ಕೋಲ್ಕತ್ತಾ: ಪಶ್ಚಿಮ ಬಂಗಾಳದ ಆರ್‌ಜಿ ಕರ್‌ ಮೆಡಿಕಲ್‌ ಕಾಲೇಜಿ(RG Kar College)ನಲ್ಲಿ ನಡೆದ ಟ್ರೈನಿ ವೈದ್ಯೆ ಅತ್ಯಾಚಾರ ಕೊಲೆ ಪ್ರಕರಣ(Kolkata Doctor Murder) ಖಂಡಿಸಿ ಕಳೆದೊಂದು ತಿಂಗಳಿಂದ ಪ್ರತಿಭಟನೆ ನಡೆಸುತ್ತಿರುವ ವೈದ್ಯರ ಜತೆ ಇದೀಗ ಮಮತಾ ಬ್ಯಾನರ್ಜಿ(Mamata Banerjee) ಸರ್ಕಾರ ಮಾತುಕತೆ ಮುಂದಾಗಿದೆ. ಇಂದು ಸಂಜೆ ಸಭೆಗೆ ಹಾಜರಾಗುವಂತೆ ವೈದ್ಯರಿಗೆ ಸರ್ಕಾರ ಕರೆ ಕೊಟ್ಟಿದೆ.

ಈ ಬಗ್ಗೆ ಪಶ್ಚಿಮ ಬಂಗಾಳ ಸರ್ಕಾರದ ಮುಖ್ಯ ಕಾರ್ಯದರ್ಶಿ ಮನೋಜ್‌ ಪಂತ್‌ ಪ್ರಕಟಣೆಯೊಂದನ್ನು ಹೊರಡಿಸಿದ್ದು, ರಾಜ್ಯ ಕಾರ್ಯದರ್ಶಿ ನಿಲಯ ನಬನ್ನಾಗೆ ಬಂದು ಸಂಜೆ 5ಗಂಟೆಗೆ ಸಿಎಂ ಮಮತಾ ಬ್ಯಾನರ್ಜಿ ಜತೆ ಮಾತುಕತೆ ನಡೆಸುವಂತೆ ವೈದ್ಯರಿಗೆ ಮನವಿ ಮಾಡಿದ್ದಾರೆ. ಸರ್ಕಾರದ ಮನವಿಗೆ ಒಪ್ಪಿರುವ ವೈದ್ಯರು ಸಭೆಯ ನೇರ ಪ್ರಸಾರಕ್ಕೆ ಅವಕಾಶ ಕೋರಿದ್ದಾರೆ. ಅಲ್ಲದೇ ಸಭೆಯಲ್ಲಿ 30ಕ್ಕೂ ಅಧಿಕ ವೈದ್ಯರು ಭಾಗಿಯಾಗಲು ಅವಕಾಶ ನೀಡುವಂತೆ ಬೇಡಿಕೆ ಇಟ್ಟಿದ್ದಾರೆ.

ವೈದ್ಯರ ಬೇಡಿಕೆಗೆ ಒಪ್ಪದ ಸರ್ಕಾರ, ಸಭೆಯ ನೇರ ಪ್ರಸಾರ ಸಾಧ್ಯವಿಲ್ಲ. ಅಲ್ಲದೇ ಕೇವಲ 15ವೈದ್ಯರು ಸಭೆಯಲ್ಲಿ ಭಾಗಿಯಾಗಬಹುದೆಂದು ಹೇಳಿದೆ. ಇನ್ನು ಸಭೆಯಲ್ಲಿ ಪ್ರಸ್ತುತ ರಾಜ್ಯವ್ಯಾಪಿ ನಡೆಯುತ್ತಿರುವ ವೈದ್ಯರ ಪ್ರತಿಭಟನೆ, ಮುಷ್ಕರಕ್ಕೆ ಅಂತ್ಯ ಹಾಡಿ, ವೈದ್ಯೆಯ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸರ್ಕಾರದ ನಿಲುವು ಏನೆಂಬುದನ್ನು ಸ್ಪಷ್ಟಪಡಿಸುವ ಉದ್ದೇಶ ಈ ಸಭೆಯದ್ದಾಗಿದೆ.

ಸಭೆಯನ್ನು ನೇರ ಪ್ರಸಾರ ಮಾಡಲು ಅವಕಾಶ ಇಲ್ಲ. ಆದಾಗ್ಯೂ, ಪಾರದರ್ಶಕತೆಯನ್ನು ಕಾಪಾಡಿಕೊಳ್ಳಲು ಅದನ್ನು ರೆಕಾರ್ಡ್‌ ಮಾಡಿಕೊಳ್ಳಬಹುದು. ಮನೋಜ್‌ ಪಂತ್‌ ಹೇಳಿದ್ದಾರೆ.

ಏನಿದು ಘಟನೆ?

ಪಶ್ಚಿಮ ಬಂಗಾಳದ ಕೋಲ್ಕತಾದಲ್ಲಿನ ಸರ್ಕಾರಿ ಸ್ವಾಮ್ಯದ ಆರ್‌ಜಿ ಕರ್ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯ ಸೆಮಿನಾರ್ ಹಾಲ್‌ನಲ್ಲಿ ಆಗಸ್ಟ್‌ 9ರಂದು ಟ್ರೈನಿ ವೈದ್ಯೆಯ ಶವ ಪತ್ತೆಯಾಗಿತ್ತು. ಎರಡನೇ ವರ್ಷದ ಸ್ನಾತಕೋತ್ತರ ವೈದ್ಯಕೀಯ ಪದವಿ ವಿದ್ಯಾರ್ಥಿಯಾಗಿದ್ದ ಆಕೆ, ಆಗಸ್ಟ್‌ 8ರ ರಾತ್ರಿ ತಡವಾಗಿ ಊಟ ಮುಗಿಸಿ ಕ್ಯಾಂಪಸ್‌ನ ಮೂರನೇ ಮಹಡಿಯಲ್ಲಿನ ಸೆಮಿನಾರ್ ಹಾಲ್‌ಗೆ ಓದುವ ಸಲುವಾಗಿ ತೆರಳಿದ್ದರು. ಮರುದಿನ ಬೆಳಿಗ್ಗೆ ಅವರ ಶವ ಪತ್ತೆಯಾಗಿತ್ತು. ಮರಣೋತ್ತರ ಪರೀಕ್ಷೆಯಲ್ಲಿ ವೈದ್ಯೆಯ ಮೇಲೆ ಅತ್ಯಾಚಾರ ಎಸಗಿ ಕ್ರೂರವಾಗಿ ಹತ್ಯೆಗೈದಿರುವುದು ಬೆಳಕಿಗೆ ಬಂದಿತ್ತು. ಕುತ್ತಿಗೆ ಮುರಿದ ಸ್ಥಿತಿಯಲ್ಲಿ ಕಂಡು ಬಂದಿತ್ತು. ಈ ಪ್ರಕರಣ ದೇಶಾದ್ಯಂತ ಸಂಚಲನ ಸೃಷ್ಟಿಸಿದೆ.

ಈ ಸುದ್ದಿಯನ್ನೂ ಓದಿ: Kolkata Murder Case: ಕೋಲ್ಕತ್ತಾ ಆರ್‌.ಜಿ.ಕರ್‌ ಆಸ್ಪತ್ರೆಯ ಮಾಜಿ ಪ್ರಾಂಶುಪಾಲ ಸಂದೀಪ್ ಘೋಷ್ ನಿವಾಸದ ಮನೆ ಮೇಲೆ ಇಡಿ ದಾಳಿ


Leave a Reply

Your email address will not be published. Required fields are marked *