ನವದೆಹಲಿ: ಯೆಮೆನ್‌ನಲ್ಲಿ(Yemen) ಮರಣದಂಡನೆ(Death Penalty) ಶಿಕ್ಷೆಗೆ ಗುರಿಯಾಗಿರುವ ಕೇರಳದ ನರ್ಸ್(Kerala Nurse) ನಿಮಿಷಾ ಪ್ರಿಯಾ(Nimisha Priya Case) ರಕ್ಷಣೆಗೆ ಕೇಂದ್ರ ಸರ್ಕಾರ ಮುಂದಾಗಿದೆ. ಪ್ರಕರಣದಲ್ಲಿ ಇರುವ ಪರ್ಯಾಯ ಆಯ್ಕೆಗಳನ್ನು ಹುಡುಕಾಡಲು ಎಲ್ಲಾ ರೀತಿಯ ನೆರವು ನೀಡಲಾಗುವುದು ಎಂದು ಭಾರತದ ವಿದೇಶಾಂಗ ಸಚಿವಾಲಯ ಮಂಗಳವಾರ(ಡಿ.31) ಹೇಳಿದೆ ಎಂದು ಮೂಲಗಳು ತಿಳಿಸಿವೆ.
Our response to media queries regarding the case of Ms. Nimisha Priya:https://t.co/DlviLboqKG pic.twitter.com/tSgBlmitCy
— Randhir Jaiswal (@MEAIndia) December 31, 2024
ಯೆಮೆನ್ ಅಧ್ಯಕ್ಷ ರಶಾದ್ ಅಲ್-ಅಲಿಮಿ ಸೋಮವಾರ(ಡಿ.30) ಕೇರಳದ ನರ್ಸ್‌ಗೆ ಮರಣದಂಡನೆ ಶಿಕ್ಷೆಗೆ ಅನುಮೋದನೆ ನೀಡಿದ್ದು, ಇದರ ಬೆನ್ನಲ್ಲೇ ಕೇಂದ್ರ ವಿದೇಶಾಂಗ ವ್ಯವಹಾರಗಳ ಸಚಿವಾಲಯ ಈ ರೀತಿಯ ಹೇಳಿಕೆ ನೀಡಿದೆ ಎಂಬ ಮಾಹಿತಿಯಿದೆ. ಯೆಮೆನ್ ಪ್ರಜೆಯನ್ನು ಕೊಂದಿದ್ದಕ್ಕಾಗಿ ನಿಮಿಷಾ ಪ್ರಿಯಾ ಮರಣದಂಡನೆ ಶಿಕ್ಷೆಗೆ ಗುರಿಯಾಗಿದ್ದಾರೆ. ವರದಿಗಳ ಪ್ರಕಾರ, ಒಂದು ತಿಂಗಳೊಳಗೆ ಮರಣದಂಡನೆ ಜಾರಿಯಾಗುವ ಸಾಧ್ಯತೆಯಿದೆ. ಯೆಮೆನ್‌ನಲ್ಲಿ ನಿಮಿಷಾ ಪ್ರಿಯಾಗೆ ವಿಧಿಸಿರುವ ಶಿಕ್ಷೆಯ ಬಗ್ಗೆ ನಮಗೆ ತಿಳಿದಿದೆ. ಉಳಿದಿರುವ ಪರ್ಯಾಯ ಆಯ್ಕೆಗಳನ್ನು ಅವರ ಕುಟುಂಬ ಹುಡುಕುತ್ತಿದೆ ಎಂಬುದನ್ನು ನಾವು ಅರ್ಥ ಮಾಡಿಕೊಂಡಿದ್ದೇವೆ. ಸರ್ಕಾರ ಈ ವಿಷಯದಲ್ಲಿ ಸಾಧ್ಯವಿರುವ ಎಲ್ಲ ರೀತಿಯ ನೆರವನ್ನು ನೀಡಲು ಸಿದ್ಧವಾಗಿದೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯ ವಕ್ತಾರ ರಣದೀರ್ ಜೈಸ್ವಾಲ್(Randhir Jaiswal) ಹೇಳಿದ್ದಾರೆ.
ಏನಿದು ಪ್ರಕರಣ?
ಕೇರಳದ ಪಾಲಕ್ಕಾಡ್ ಜಿಲ್ಲೆಯ ಕೊಲ್ಲಂಗೋಡ್‌ನ ನರ್ಸ್ ನಿಮಿಷಾ ಪ್ರಿಯಾ 2008 ರಲ್ಲಿ ಯೆಮೆನ್ ದೇಶಕ್ಕೆ ತೆರಳಿದ್ದರು. ಹಲವಾರು ಆಸ್ಪತ್ರೆಗಳಲ್ಲಿ ಕೆಲಸ ಮಾಡಿದ ನಂತರ ತನ್ನದೇ ಆದ ಸ್ವಂತ ಕ್ಲಿನಿಕ್ ಸ್ಥಾಪಿಸುವ ಯೋಜನೆಗೆ ಕೈ ಹಾಕಿದ್ದರು. 2017 ರಲ್ಲಿ ಸ್ಥಳೀಯ ಪಾಲುದಾರ ತಲಾಲ್ ಅಬ್ದೋ ಮಹದಿ ಅವರೊಂದಿಗೆ ಜಗಳವಾಡಿದ್ದರು. ಆತ ಆಕೆಯ ಮೇಲೆ ದೈಹಿಕ ಹಲ್ಲೆ ನಡೆಸಿದ್ದು, ಹಣವನ್ನು ಕೂಡ ದುರುಪಯೋಗಪಡಿಸಿಕೊಂಡಿದ್ದ.
ಅಲ್ಲದೆ ತನ್ನ ಸ್ನೇಹಿತರೊಂದಿಗೂ ದೈಹಿಕ ಸಂಬಂಧವನ್ನು ಹೊಂದುವಂತೆ ಮಾನಸಿಕವಾಗಿ ಹಿಂಸೆ ನೀಡಿದ್ದನು ಎಂದು ಹೇಳಲಾಗಿತ್ತು. “ಆತನನ್ನು ಪ್ರಿಯಾ ಸಾಕಷ್ಟು ವಿರೋಧಿಸಿದ್ದಳು. ಮನವೊಲಿಸಲು ಪ್ರಯತ್ನಪಟ್ಟರೂ ಅವನು ಬಗ್ಗಿರಲಿಲ್ಲ ಎಂದು ಪ್ರಿಯಾ ಕುಟುಂಬ ಸದಸ್ಯರು ಹೇಳಿದ್ದಾರೆ. ಆತ ವಶಪಡಿಸಿಕೊಂಡಿದ್ದ ತನ್ನ ಪಾಸ್‌ಪೋರ್ಟ್ ಅನ್ನು ಮರುಪಡೆಯುವ ಪ್ರಯತ್ನದಲ್ಲಿ ಮತ್ತಿನ ಇಂಜೆಕ್ಷನ್ (Sedatives) ಹಾಕಿದ್ದಾರೆ. ಆತನ ಸಾವಿಗೆ ಇದೇ ಕಾರಣ ಎಂಬ ಆರೋಪವಿದೆ.
ಬಳಿಕ ಯೆಮೆನ್‌ನಿಂದ ಪರಾರಿಯಾಗಲು ಪ್ರಯತ್ನಿಸುತ್ತಿದ್ದಾಗ ಆಕೆಯನ್ನು ಕೊಲೆ ಪ್ರಕರಣದ ಆರೋಪದ ಮೇಲೆ ಬಂಧಿಸಲಾಗಿತ್ತು. 2018 ರಲ್ಲಿ ಅಪರಾಧಿ ಎಂದು ಘೋಷಿಸಲಾಯಿತು. 2020 ರಲ್ಲಿ ಸನಾದಲ್ಲಿನ ವಿಚಾರಣಾ ನ್ಯಾಯಾಲಯವು ಆಕೆಗೆ ಮರಣದಂಡನೆ ವಿಧಿಸಿತು.
ಈ ಸುದ್ದಿಯನ್ನೂ ಓದಿ:Rahul Gandhi: ಮನಮೋಹನ್ ಸಿಂಗ್ ನಿಧನದ ಶೋಕಾಚರಣೆ ಮಧ್ಯೆಯೇ ನ್ಯೂ ಇಯರ್ ಪಾರ್ಟಿಗೆ ವಿಯೆಟ್ನಾಂಗೆ ಹೊರಟ ರಾಗಾ; ಬಿಜೆಪಿ ಕಿಡಿ