Thursday, 15th May 2025

Kamikaze Drone : ಭಾರತೀಯ ಸೇನೆಗೂ ಬಂತು ʼಕಾಮಿಕೇಜ್‌ʼ; ಈ ಸೂಸೈಡ್‌ ಡ್ರೋನ್‌ ಬಗ್ಗೆ ನಿಮಗೆಷ್ಟು ಗೊತ್ತು?

ನವದೆಹಲಿ: ಭಾರತೀಯ ಸೇನೆಯು(Indian Army) ‘ಖರ್ಗಾ(Kharga)’ ಕಾಮಿಕೇಜ್ ಡ್ರೋನ್(Kamikaze Drone) ಅನ್ನು ಇದೀಗ ಅಭಿವೃದ್ಧಿಪಡಿಸಿದೆ. ಗುಪ್ತಚರ ಮತ್ತು ಕಣ್ಗಾವಲು ಕ್ಷೇತ್ರದಲ್ಲಿ ಅತ್ಯಂತ ಸಮರ್ಥವಾಗಿ ಕಾರ್ಯನಿರ್ವಹಿಸಬಲ್ಲ ಏರೋ ಸಿಸ್ಟಮ್‌ ಇದಾಗಿದ್ದು, ಈ ಡ್ರೋನ್ ಅತಿ ವೇಗದ ಮತ್ತು ಕಡಿಮೆ ತೂಕದ ವೈಮಾನಿಕ ವಾಹನವಾಗಿದೆ. ಈ ಅಪರೂಪದ ಡ್ರೋನ್ ಪ್ರತಿ ಸೆಕೆಂಡಿಗೆ 40 ಮೀಟರ್ ವೇಗವನ್ನು ಹೊಂದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.‌

ಕಾಮಿಕೇಜ್ ಡ್ರೋನ್ ವೈಮಾನಿಕ ಶಸ್ತ್ರಾಸ್ತ್ರ ವ್ಯವಸ್ಥೆಯಾಗಿದ್ದು (Aerial Targeting Defence System), ಇದರಲ್ಲಿರುವ ಯುದ್ಧ ಸಾಮಗ್ರಿ (loitering munitions) ವಾಯು ಮಾರ್ಗದಲ್ಲಿಯೇ ನಿರ್ದಿಷ್ಟವಾಗಿ ಗುರಿಗಾಗಿ ಕಾದು, ಲಾಕ್‌ ಮಾಡಿದ ಬಳಿಕ ದಾಳಿ ಮಾಡುತ್ತದೆ. 2ನೇ ಮಹಾಯುದ್ಧದ ಸಮಯದಲ್ಲಿ ಶೌರ್ಯ ಮೆರೆದಿದ್ದ ಜಪಾನ್‌ನ ಕಾಮಿಕೇಜ್‌ ಪೈಲಟ್‌ಗಳಿಂದ ಈ ಹೆಸರು ಬಂದಿದೆ. ಸ್ಫೋಟಕ ತುಂಬಿದ ಯುದ್ಧವಿಮಾನಗಳನ್ನು ಎದುರಾಳಿಯ ಟಾರ್ಗೆಟ್‌ನಲ್ಲಿ ಸೂಸೈಡ್ ದಾಳಿಯಾಗಿ ಸ್ಪೋಟಿಸುವ ಮೂಲಕ ಕಾಮಿಕೇಜ್‌ ಪೈಲಟ್‌ಗಳು ಹೆಸರುವಾಸಿಯಾಗಿದ್ದರು.

ಖರ್ಗಾ’ 700 ಗ್ರಾಂ ಸ್ಫೋಟಕಗಳನ್ನು ಸಾಗಿಸುತ್ತದೆ. ಅಷ್ಟೇ ಅಲ್ಲದೆ, ಜಿಪಿಎಸ್(GPS) ನ್ಯಾವಿಗೇಷನ್ ಸಿಸ್ಟಮ್(Navigation System) ಮತ್ತು ಹೈ-ಡೆಫಿನಿಷನ್(High-Definition) ಕ್ಯಾಮೆರಾವನ್ನು ಹೊಂದಿದೆ. ಇದು ಎಲೆಕ್ಟ್ರೋಮ್ಯಾಗ್ನಟಿಕ್ ಸ್ಪೆಕ್ಟ್ರಮ್ ಜ್ಯಾಮಿಂಗ್‌ ಗಳನ್ನು ಹೊಂದಿದ್ದು, ಶತ್ರುಗಳ ಆಕ್ರಮಣವನ್ನು ಎದುರಿಸಬಲ್ಲದು. ಹಾಗೆ ಡ್ರೋನ್ ಸರಿ ಸುಮಾರು ಒಂದೂವರೆ ಕಿಲೋಮೀಟರ್ ವ್ಯಾಪ್ತಿಯನ್ನು ಹೊಂದಿದೆ. ರೂ. 30,000 ವೆಚ್ಚದಲ್ಲಿ ಈ ಡ್ರೋನ್ ಅನ್ನು ನಿರ್ಮಿಸಲಾಗಿದೆ.

ಒಂದು ರೀತಿಯ ‘ಸೂಸೈಡ್’ ಡ್ರೋನ್ ಎಂದು ಕರೆಯಲ್ಪಡುವ ಇದು ಶತ್ರು‌ ಗುರಿಗಳನ್ನು ಸುಲಭವಾಗಿ ನಾಶಪಡಿಸಲಿದ್ದು, ‘ಖಾರ್ಗಾ’ ರಾಡಾರ್ ವ್ಯಾಪ್ತಿಯಲ್ಲಿ ಬರುವುದಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ರಷ್ಯಾ- ಉಕ್ರೇನ್ ಯುದ್ಧದಲ್ಲಿ ಇಂತಹ ಡ್ರೋನ್‌ಗಳನ್ನು ಬಳಸಲಾಗಿತ್ತು. ರಷ್ಯಾ ತನ್ನ ಮೇಲೆ ಕಾಮಿಕೇಜ್‌ ಡ್ರೋನ್‌ಗಳಿಂದ ದಾಳಿ ಮಾಡಿದೆ ಎನ್ನುವುದನ್ನು ಸ್ವತಃ ಉಕ್ರೇನ್‌ ಅಧ್ಯಕ್ಷ ಹೇಳಿದ್ದರು.

ಅಮಿತ್‌ ಶಾ ಶ್ಲಾಘನೆ

ಗಡಿ ಭದ್ರತಾ ಪಡೆಯು (ಬಿಎಸ್‌ಎಫ್) ಪಂಜಾಬ್‌ನ ಭಾರತ-ಪಾಕಿಸ್ತಾನ ಗಡಿಯಲ್ಲಿ ಭಾರತದ ಸ್ಥಳೀಯ ಮಾನವರಹಿತ ವೈಮಾನಿಕ ವ್ಯವಸ್ಥೆ (ಸಿ-ಯುಎಎಸ್) ಡ್ರೋನ್ ಅನ್ನು ಬಳಸಿಕೊಂಡು ಶೇ. 55ರಷ್ಟು ಡ್ರೋನ್‌ಗಳನ್ನು ಹೊಡೆದುರುಳಿವಂತಹ ಸಾಮರ್ಥ್ಯ ಹೊಂದಿದೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿದ್ದಾರೆ.

ಬಾರ್ಡರ್‌ ಸೆಕ್ಯುರಿಟಿ ಫೋರ್ಸ್‌ ನ 60 ನೇ ದಿನವನ್ನು ಉದ್ದೇಶಿಸಿ ಮಾತನಾಡುತ್ತಾ, “ನಾನು ರಾತ್ರಿ ವೇಳೆ ಭಯವಿಲ್ಲದೆ ಮಲಗುತ್ತಿದ್ದೇನೆ. ಯಾಕೆಂದರೆ ನೀವು ಗಡಿಗಳನ್ನು ಕಾಯುತ್ತಿದ್ದೀರಿ. ನಾವು ಅಳವಡಿಸಿಕೊಂಡ ಹೊಸ ವ್ಯವಸ್ಥೆಯು ಯಶಸ್ವಿಯಾಗಿದೆ” ಎಂದು ಶಾ ಹೇಳಿದರು.

ಈ ಸುದ್ದಿಯನ್ನೂ ಓದಿ:Narendra Modi: ಜಾಗತಿಕ ಸಮಸ್ಯೆಗಳಿಗೆ ಯುದ್ಧ ಭೂಮಿಯಿಂದ ಪರಿಹಾರ ದೊರೆಯದು; ನರೇಂದ್ರ ಮೋದಿ