Sunday, 11th May 2025

JP Nadda: ಭಾರತದಲ್ಲಿ ಹೆಚ್ಚುತ್ತಿರುವ ಹಠಾತ್‌ ಸಾವಿಗೆ ಕೋವಿಡ್‌ ಲಸಿಕೆ ಕಾರಣವಲ್ಲ: ಆರೋಗ್ಯ ಸಚಿವ ಜೆ.ಪಿ.ನಡ್ಡಾ ಸ್ಪಷ್ಟನೆ

ಹೊಸದಿಲ್ಲಿ: ಇತ್ತೀಚಿನ ದಿನಗಳಲ್ಲಿ ಯುವಜನತೆಯಲ್ಲಿನ ಹೃದಯಾಘಾತದ ಪ್ರಮಾಣ ಹೆಚ್ಚಾಗುತ್ತಿದ್ದು, ಇದಕ್ಕೆ ಕೋವಿಡ್‌-19 ವಿರುದ್ಧದ ಲಸಿಕೆ ಕಾರಣವಲ್ಲ ಎಂದು ರಾಜ್ಯಸಭೆಯಲ್ಲಿ ಆರೋಗ್ಯ ಸಚಿವ ಜೆ.ಪಿ.ನಡ್ಡಾ (JP Nadda) ತಿಳಿಸಿದ್ದಾರೆ. ಇದಕ್ಕೆ ಪೂರಕವಾಗಿ ಅವರು ದಿ ಇಂಡಿಯನ್‌ ಕೌನ್ಸಿಲ್‌ ಆಫ್‌ ಮೆಡಿಕಲ್‌ ರಿಸರ್ಚ್‌ (Indian Council of Medical Research-ICMR)ನ ಸಂಶೋಧನಾ ವರದಿಯನ್ನು ಉಲ್ಲೇಖಿಸಿದ್ದಾರೆ. ರಾಜ್ಯಸಭೆಯಲ್ಲಿ ಕೇಳಿದ ಪ್ರಶ್ನೆಯೊಂದಕ್ಕೆ ಉತ್ತರಿಸಿ ಅವರು ಈ ಸ್ಪಷ್ಟನೆ ನೀಡಿದ್ದಾರೆ.

ಕೆಲವೊಮ್ಮೆ ನೃತ್ಯ ಮಾಡುವಾಗ ಮತ್ತು ಕೆಲವೊಮ್ಮೆ ಜಿಮ್‌ನಲ್ಲಿ ವರ್ಕೌಟ್‌ ಮಾಡುವಾಗ ಹೃದಯಾಘಾತದಿಂದ ಸಾವನ್ನಪ್ಪುವ ಪ್ರಕರಣಗಳು ಇತ್ತೀಚಿನ ದಿನಗಳಲ್ಲಿ ದೇಶದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ವರದಿಯಾಗುತ್ತಿದೆ. ಹಲವರು ಇದಕ್ಕೆ ಕಾರಣ ಕೊರೊನಾ ಲಸಿಕೆ ಕಾರಣ ಎನ್ನುತ್ತಿದ್ದಾರೆ. ಈ ಬಗ್ಗೆ ಸೋಷಿಯಲ್‌ ಮೀಡಿಯಾದಲ್ಲಿ ಚರ್ಚೆ ನಡೆಯುತ್ತಿದೆ. ಈ ವದಂತಿಗೆ ಇದೀಗ ಕೇಂದ್ರ ಫುಲ್‌ಸ್ಟಾಪ್‌ ಇಟ್ಟಿದೆ.

ಜೆ.ಪಿ.ನಡ್ಡಾ ಹೇಳಿದ್ದೇನು?

ʼʼಐಸಿಎಂಆರ್-ನ್ಯಾಷನಲ್ ಇನ್‌ಸ್ಟಿಟ್ಯೂಟ್‌ ಆಫ್ ಎಪಿಡೆಮಿಯಾಲಜಿ ಕಳೆದ ವರ್ಷದ ಮೇ-ಆಗಸ್ಟ್ ಅವಧಿಯಲ್ಲಿ 19 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ 47 ತೃತೀಯ ಆರೈಕೆ ಆಸ್ಪತ್ರೆಗಳಲ್ಲಿ ಸಂಶೋಧನೆ ನಡೆಸಿ ‘ಭಾರತದ 18-45 ವಯಸ್ಕರಲ್ಲಿ ವಿವರಿಸಲಾಗದ ಹಠಾತ್ ಸಾವುಗಳಿಗೆ ಸಂಬಂಧಿಸಿದ ಅಂಶಗಳು’ ಎಂಬ ಅಧ್ಯಯನದ ಮೂಲಕ ಈ ನಿಗಮನಕ್ಕೆ ಬರಲಾಗಿದೆ ಎಂದು ನಡ್ಡಾ ತಿಳಿಸಿದ್ದಾರೆ.

ʼʼಕೋವಿಡ್-19 ಲಸಿಕೆಯ ಕನಿಷ್ಠ 1 ಡೋಸ್ ಅಥವಾ 2 ಡೋಸ್‌ಗಳನ್ನು ತೆಗೆದುಕೊಳ್ಳುವುದು ಯಾವುದೇ ಕಾರಣವಿಲ್ಲದೆ ಸಂಭವಿಸುವ ಹಠಾತ್ ಸಾವಿನ ಸಾಧ್ಯತೆಯನ್ನು ಗಮನಾರ್ಹವಾಗಿ ಕಡಿಮೆ ಮಾಡುತ್ತದೆ ಎಂದು ಸಂಶೋಧನೆಗಳು ತೋರಿಸಿವೆʼʼ ಎಂದು ಕೇಂದ್ರ ಆರೋಗ್ಯ ಸಚಿವ ಜೆಪಿ ನಡ್ಡಾ ವಿವರಿಸಿದ್ದಾರೆ.

729 ಹಠಾತ್‌ ಸಾವಿನ ಪ್ರಕರಣ

ʼʼಸಂಶೋಧನೆಯ ವೇಳೆ ಹಠಾತ್ ಮರಣ ಹೊಂದಿದ 729 ಪ್ರಕರಣಗಳನ್ನು ಮಾದರಿಗಳಾಗಿ ತೆಗೆದುಕೊಳ್ಳಲಾಗಿದೆ. ಈ ಹಿಂದೆ ಕೋವಿಡ್ ಕಾಣಿಸಿಕೊಂಡಿದ್ದರೆ, ಹಠಾತ್ ಸಾವಿನ ಕುಟುಂಬದ ಇತಿಹಾಸ ಹೊಂದಿದ್ದರೆ, ಸಾವಿನ 48 ಗಂಟೆಗಳ ಮೊದಲು ಅತಿಯಾದ ಮದ್ಯಪಾನ, ಡ್ರಗ್ಸ್‌ ಸೇವಿಸಿದ್ದರೆ, ತೀವ್ರವಾದ ದೈಹಿಕ ಚಟುವಟಿಕೆಯನ್ನು ನಡೆಸಿದ್ದರೆ ಹಠಾತ್ ಸಾವು ಸಂಭವಿಸುವ ಸಾಧ್ಯತೆ ಇದೆ ಎನ್ನುವುದನ್ನು ಕಂಡುಕೊಳ್ಳಲಾಗಿದೆʼʼ ಎಂದು ಕೇಂದ್ರ ಆರೋಗ್ಯ ಸಚಿವರು ಹೇಳಿದ್ದಾರೆ.

“ಕೋವಿಡ್ -19 ವ್ಯಾಕ್ಸಿನೇಷನ್ ಭಾರತದಲ್ಲಿ ಯುವ ವಯಸ್ಕರಲ್ಲಿ ವಿವರಿಸಲಾಗದ ಹಠಾತ್ ಸಾವಿನ ಅಪಾಯವನ್ನು ಹೆಚ್ಚಿಸುವುದಿಲ್ಲ ಎನ್ನುವುದು ಅಧ್ಯಯನದ ಮೂಲಕ ಸ್ಪಷ್ಟವಾಗಿದೆ. ಕೋವಿಡ್ -19 ಬಾಧಿಸಿ ಆಸ್ಪತ್ರೆಗೆ ದಾಖಲಾದವರು, ಹಠಾತ್ ಸಾವಿನ ಕುಟುಂಬದ ಇತಿಹಾಸ ಹೊಂದಿದವರು ಮತ್ತು ಕೆಲವು ಅನಾರೋಗ್ಯ ಜೀವನ ಶೈಲಿ ಅಳವಡಿಸಿಕೊಂಡವರಲ್ಲಿ ವಿವರಿಸಲಾಗದ ಹಠಾತ್ ಸಾವಿನ ಸಾಧ್ಯತೆ ಹೆಚ್ಚಿದೆ” ಎಂದು ಜೆ.ಪಿ.ನಡ್ಡಾ ಹೇಳಿದ್ದಾರೆ.

ʼʼವ್ಯಾಕ್ಸಿನೇಷನ್‌ನ ಅಡ್ಡ ಪರಿಣಾಮಗಳನ್ನು ಪತ್ತೆ ಹಚ್ಚಲು ಅಡ್ವರ್ಸ್ ಈವೆಂಟ್ ಫಾಲೋಯಿಂಗ್ ಇಮ್ಯುನೈಸೇಶನ್ (AEFI) ಹೆಸರಿನ ಪ್ರಬಲ ಕಣ್ಗಾವಲು ವ್ಯವಸ್ಥೆಯನ್ನು ರಚಿಸಲಾಗಿದೆʼʼ ಎಂದೂ ಅವರು ಮಾಹಿತಿ ನೀಡಿದ್ದಾರೆ.

ಈ ಸುದ್ದಿಯನ್ನೂ ಓದಿ: Kangana Ranaut: ಬೆಂಗಳೂರು ಎಂಜಿನಿಯರ್‌ ಆತ್ಮಹತ್ಯೆ ಪ್ರಕರಣ; ಶೇ. 99ರಷ್ಟು ಮದುವೆಗಳಲ್ಲಿ ಪುರುಷರೇ ತಪ್ಪು ಮಾಡುತ್ತಾರೆ ಎಂದ ಕಂಗನಾ