ನವದೆಹಲಿ: ಸದಾ ಒಂದಿಲ್ಲೊಂದು ಕಾರಣದಿಂದ ದೆಹಲಿ ಜವಾಹರಲಾಲ್ ನೆಹರೂ ವಿಶ್ವವಿದ್ಯಾನಿಲಯ(JNU) ಸದ್ದು ಮಾಡುತ್ತಲೇ ಇರುತ್ತದೆ. ಇದೀಗ ಈ ವಿಶ್ವ ವಿದ್ಯಾನಿಲಯದಲ್ಲಿ ಪಶ್ಚಿಮ ಏಷ್ಯಾದಲ್ಲಿ ನಡೆಯುತ್ತಿರುವ ಸಂಘರ್ಷದ ಮೇಲೆ ಕೇಂದ್ರೀಕರಿಸಿದ ಮೂರು ಸೆಮಿನಾರ್(Seminar)ಗಳನ್ನು ಆಯೋಜಿಲಾಗಿತ್ತು ಮತ್ತು ಈ ಸೆಮಿನಾರ್‌ಗಳಲ್ಲಿ ಭಾರತದಲ್ಲಿರುವ ಇರಾನ್, ಪ್ಯಾಲೆಸ್ಟೀನಿಯನ್ ಮತ್ತು ಲೆಬನಾನ್‌ನ ರಾಯಭಾರಿಗಳು ಭಾಷಣ ಮಾಡಲಿದ್ದರು ಎಂಬ ವಿಚಾರ ಬೆಳಕಿಗೆ ಬಂದಿದೆ. ಆದರೆ ಸೆಮಿನಾರ್ ಪ್ರಾರಂಭವಾಗುವುದಕ್ಕೂ ಕೆಲವೇ ಗಂಟೆಗಳಿಗೆ ಮುನ್ನ ಅದನ್ನು ರದ್ದುಗೊಳಿಸಲಾಗಿತ್ತು.
ಈ ಸೆಮಿನಾರ್‌ಗಳಲ್ಲಿ ಇರಾನ್ ರಾಯಭಾರಿ ಡಾ ಇರಾಜ್ ಇಲಾಹಿ ಅವರು “ಪಶ್ಚಿಮ ಏಷ್ಯಾದಲ್ಲಿನ ಇತ್ತೀಚಿನ ಬೆಳವಣಿಗೆಗಳನ್ನು ಇರಾನ್ ಹೇಗೆ ವೀಕ್ಷಿಸುತ್ತದೆ” ಎಂಬ ಬಗ್ಗೆ ಸವಿಸ್ತಾರವಾದ ಭಾಷಣ ಮಾಡಲಿದ್ದರು. ಆದರೆ ಸೆಮಿನಾರ್ ಪ್ರಾರಂಭಕ್ಕೆ ಇನ್ನೇನು ಕೆಲವೇ ಗಂಟೆಗಳಿವೆ ಎನ್ನುವಾಗಲೇ ಕಾರ್ಯಕ್ರಮ ರದ್ದುಗೊಂಡಿದೆ. ಈ ಬಗ್ಗೆ ಡಾ. ಇಲಾಯಿ ಅವರಿಗೆ ಇಮೇಲ್ ಕಳುಹಿಸಲಾಗಿತ್ತು.
ಮತ್ತೊಂದೆಡೆ ನವೆಂಬರ್ 7 ರಂದು ಪ್ಯಾಲೆಸ್ತೀನ್ ರಾಯಭಾರಿ ಅದ್ನಾನ್ ಅಬು ಅಲ್-ಹೈಜಾ ಅವರು ಪ್ಯಾಲೆಸ್ತೀನ್ ಸ್ಥಿತಿಗತಿ ಬಗ್ಗೆ ತಮ್ಮ ಅಭಿಪ್ರಾಯ ಮಂಡಿಸಬೇಕಾಗಿತ್ತು. ಅಲ್ಲದೇ ನ.14ರಂದು ಲೆಬನಾನ್ ಕುರಿತು ಅಲ್ಲಿನ ರಾಯಭಾರಿ ರಾಬಿ ನಾರ್ಶ್ ಅವರ ಸೆಮಿನಾರ್ ನಿಗದಿಯಾಗಿತ್ತು. ಇವೆಲ್ಲವನ್ನೂ ರದ್ದುಗೊಳಿಸಲಾಗಿದೆ.
ರದ್ದುಗೊಳಿಸಲು ಕಾರಣ ಏನು?
ಇನ್ನು ಈ ಪ್ರಮುಖ ಸೆಮಿನಾರ್‌ಗಳನ್ನು ಇದ್ದಕ್ಕಿದ್ದಂತೆ ರದ್ದುಗೊಳಿಸಲು ಕಾರಣ ಏನು ಎಂಬ ಕುತೂಹಲ ಮೂಡಿದೆ. ಯಾವುದೇ ನಿರ್ದಿಷ್ಟ ವಿವರಣೆಯನ್ನು ನೀಡದೆ ಈವೆಂಟ್‌ಗಳನ್ನು ರದ್ದುಗೊಳಿಸುವ ನಿರ್ಧಾರವನ್ನು ವಿಶ್ವವಿದ್ಯಾನಿಲಯವು ತೆಗೆದುಕೊಂಡಿದೆ ಎನ್ನಲಾಗಿದೆ. ಇನ್ನು ಈ ಸೆಮಿನಾರ್‌ಗಳನ್ನು ವಿರೋಧಿಸಿ ಪ್ರತಿಭಟನೆಗಳು ನಡೆಯುವ ಸಾಧ್ಯತೆ ಇರುವ ಕಾರಣ ಈ ಸೆಮಿನಾರ್‌ಗಳನ್ನು ರದ್ದುಗೊಳಿಸಲಾಗಿದೆ ಎಂದು ಇನ್ನು ಕೆಲವು ಮೂಲಗಳು ತಿಳಿಸಿವೆ. ಇನ್ನು ಇಂತಹ ಸೂಕ್ಷ್ಮ ವಿಚಾರಗಳು ವಿದ್ಯಾರ್ಥಿಗಳಲ್ಲಿ ಘರ್ಷಣೆಗೆ ಪ್ರಚೋದಿಸುವ ಸಾಧ್ಯತೆ ಇದೆ. ಇದು ವಿವಿ ಆಡಳಿತ ಮಂಡಳಿಯನ್ನು ಚಿಂತೆಗೀಡು ಮಾಡಿತ್ತು. ಈ ಎಲ್ಲಾ ದೃಷ್ಟಿಕೋನದಿಂದಾಗಿ ಸೆಮಿನಾರ್‌ಗಳನ್ನು ರದ್ದುಗೊಳಿಸಲಾಗಿದೆ ಎಂದು ಅಧಿಕೃತ ಮೂಲಗಳು ತಿಳಿಸಿವೆ.
ಸಾರ್ವಜನಿಕ ಕಾರ್ಯಕ್ರಮಗಳಿಗೆ ರಾಜತಾಂತ್ರಿಕರನ್ನು ಆಹ್ವಾನಿಸುವ ಮೊದಲು ತಮ್ಮೊಂದಿಗೆ ಸಮಾಲೋಚಿಸುವಂತೆ ಪ್ರಾಧ್ಯಾಪಕರಿಗೆ SIS ಡೀನ್ ಅಮಿತಾಭ್ ಮಟ್ಟೂ ಖಡಕ್ ಸೂಚನೆ ನೀಡಿದ್ದಾರೆ. ಅಲ್ಲದೇ ಬೇರೆ ದೇಶದ ರಾಜತಾಂತ್ರಿಕ ಅಧಿಕಾರಿಗಳು ಬಾಹ್ಯ ವೇದಿಕೆಗಳನ್ನು ತಮ್ಮ ಸ್ವಾರ್ಥಕ್ಕಾಗಿ ದುರ್ಬಳಕೆ ಮಾಡಿಕೊಳ್ಳುವ ಸಾಧ್ಯತೆ ಇದೆ ಎಂದಿದ್ದಾರೆ.
ಪಶ್ಚಿಮ ಏಷ್ಯಾ ಅಧ್ಯಯನ ಕೇಂದ್ರದ ಅಧ್ಯಕ್ಷೆ ಸಮೀನಾ ಹಮೀದ್ ಮಾತನಾಡಿ, ಇರಾನ್ ರಾಯಭಾರಿ ಜೊತೆಗಿನ ಸೆಮಿನಾರ್ ಅನ್ನು ಕೊನೆಯ ಕ್ಷಣದಲ್ಲಿ ಮುಂದೂಡಲಾಗಿದೆ. ಅಗತ್ಯ ಪ್ರೋಟೋಕಾಲ್‌ಗಳನ್ನು ಅನುಸರಿಸಲು ಸಾಕಷ್ಟು ಸಮಯ ಇರಲಿಲ್ಲ ಎಂದು ಹೇಳಿದ್ದಾರೆ.
ಈ ಸುದ್ದಿಯನ್ನೂ ಓದಿ: Israeli Airstrike: ಇಸ್ರೇಲ್ ಪಡೆಗಳಿಂದ ಉತ್ತರ ಗಾಜಾದ ಮೇಲೆ ದಾಳಿ; ಕನಿಷ್ಠ 73 ಮಂದಿ ಸಾವು