Wednesday, 14th May 2025

Jharkhand Election Result: ಜಾರ್ಖಂಡ್‌ ಫಲಿತಾಂಶದಲ್ಲಿ ಬಿಗ್‌ ಟ್ವಿಸ್ಟ್‌; ಬಿಜೆಪಿಗೆ ಆಘಾತ, ಸರಳ ಬಹುಮತದತ್ತ ‘ಇಂಡಿಯಾ’ ಒಕ್ಕೂಟ

Jharkhand Election Result

ರಾಂಚಿ: ದೇಶಾದ್ಯಂತ ತೀವ್ರ ಕುತೂಹಲ ಕೆರಳಿಸಿರುವ ಜಾರ್ಖಂಡ್‌ ವಿಧಾನಸಭಾ ಚುನಾವಣೆಯ ಮತ ಎಣಿಕೆ ಆರಂಭಗೊಂಡಿದ್ದು (Jharkhand Election Result), ಅಚ್ಚರಿ ಎನಿಸುವಂತೆ ಜಾರ್ಖಂಡ್‌ ಮುಕ್ತಿ ಮೋರ್ಚಾ (Jharkhand Mukti Morcha-JMM) ನೇತೃತ್ವದ ʼಇಂಡಿಯಾʼ ಮೈತ್ರಿಕೂಟ ಮುನ್ನಡೆ ಸಾಧಿಸಿದೆ. 81 ಸೀಟುಗಳ ಪೈಕಿ 51 ಸ್ಥಾನಗಳಲ್ಲಿ ಮುನ್ನಡೆ ಕಾಯ್ದುಕೊಂಡು ಸರಳ ಬಹುಮತದತ್ತ ದಾಪುಗಾಲು ಇಟ್ಟಿದೆ. ಆರಂಭದಲ್ಲಿ ಮುನ್ನಡೆ ಕಾಯ್ದುಕೊಂಡಿದ್ದ ಬಿಜೆಪಿ ನೇತೃತ್ವದ ಎನ್‌ಡಿಎ ಮೈತ್ರಿಕೂಟ ಸದ್ಯ ಹಿನ್ನಡೆಯಲ್ಲಿದ್ದು, ಬಹು ದೊಡ್ಡ ಆಘಾತ ಎದುರಾಗಿದೆ.

ಮುಖ್ಯಮಂತ್ರಿ ಹೇಮಂತ್‌ ಸೊರೇನ್‌ (Hemant Soren) ನೇತೃತ್ವದ ಜೆಎಂಎಂ ಈ ಬಾರಿ 81 ಕ್ಷೇತ್ರಗಳ ಪೈಕಿ 41 ಸ್ಥಾನಗಳಲ್ಲಿ ಸ್ಪರ್ಧಿಸಿದೆ. ಮೈತ್ರಿಕೂಟದ ಇತರ ಪಕ್ಷಗಳಾದ ಕಾಂಗ್ರೆಸ್‌ 30, ಆರ್‌ಜೆಡಿ 6 ಮತ್ತು ಸಿಪಿಐ (ಎಂ) 4 ಸ್ಥಾನಗಳಲ್ಲಿ ಕಣಕ್ಕಿಳಿದಿದೆ. ಇನ್ನು ಎನ್‌ಡಿಎ ಒಕ್ಕೂಟದಲ್ಲಿ ಬಿಜೆಪಿ 68, ಆಲ್‌ ಜಾರ್ಖಂಡ್‌ ಸ್ಟುಡೆಂಟ್ಸ್‌ ಯೂನಿಯನ್‌ (All Jharkhand Students Union-AJSU) 10, ಜನತಾ ದಳ (ಸಂಯುಕ್ತ) 2 ಮತ್ತು ಲೋಕ್‌ ಜನಶಕ್ತಿ ಪಾರ್ಟಿ (ರಾಮ್‌ ವಿಲಾಸ್‌) 1 ಕಡೆ ಅದೃಷ್ಟ ಪರೀಕ್ಷೆಗೆ ಇಳಿದಿದೆ.

ಜಾರ್ಖಂಡ್‌ನಲ್ಲಿ 2 ಹಂತಗಳಲ್ಲಿ ಮತದಾನ ನಡೆದಿತ್ತು. ನ. 13ರಂದು 43 ಕ್ಷೇತ್ರಗಳಲ್ಲಿ ಮತ್ತು ನ. 20ರಂದು 38 ಕ್ಷೇತ್ರಗಳಲ್ಲಿ ಮತದಾರರು ತಮ್ಮ ಹಕ್ಕು ಚಲಾಯಿಸಿದ್ದರು. ಒಟ್ಟಾರೆಯಾಗಿ ಶೇ. 67.74 ಮತ ಚಲಾವಣೆಯಾಗಿದ್ದು, 2019ಕ್ಕಿಂತ ಶೇ. 1.65 ಹೆಚ್ಚಾಗಿತ್ತು.

ತಲೆ ಕೆಳಗಾದ ಸಮೀಕ್ಷೆ

ಬಹುತೇಕ ಚುನಾವಣೋತ್ತರ ಸಮೀಕ್ಷೆಗಳು ಎನ್‌ಡಿಎ ಒಕ್ಕೂಟಕ್ಕೆ ಬಹುಮತ ಸಿಗಲಿದೆ ಎಂದು ಊಹಿಸಿದ್ದವು. ಬಿಜೆಪಿ ನೇತೃತ್ವದ ಬಿಜೆಪಿ 42-47 ಸೀಟುಗಳಲ್ಲಿ ಮತ್ತು ಜೆಎಂಎಂ ನೇತೃತ್ವದ ಇಂಡಿಯಾ ಮೈತ್ರಿಕೂಟ 25-30 ಸೀಟು ಗೆಲ್ಲಲಿದೆ ಎಂದು ಹೇಳಿದ್ದವು. ಸದ್ಯ ಈ ಸಮೀಕ್ಷಾ ವರದಿ ತಲೆಕೆಳಗಾಗಿದೆ. ತಮ್ಮ ಮೈತ್ರಿಕೂಟ ಸರಳ ಬಹುಮತದತ್ತ ಸಾಗುತ್ತಿರುವ ಹಿನ್ನೆಲೆಯಲ್ಲಿ ಕಾಂಗ್ರೆಸ್‌ ಮುಖಂಡರು ಸಭೆ ಆರಂಭಿಸಿದ್ದಾರೆ. ಜಾರ್ಖಂಡ್‌ನಲ್ಲಿ ಬಹುಮತ ಸಾಧಿಸಿ ಸರ್ಕಾರ ರಚಿಸಲು 41 ಸ್ಥಾನಗಳಲ್ಲಿ ಗೆಲುವುದು ಅಗತ್ಯ.

ಮಹಾರಾಷ್ಟ್ರದಲ್ಲಿ ಬಿಜೆಪಿ ಮೈತ್ರಿಕೂಟಕ್ಕೆ ಮುನ್ನಡೆ

ಇನ್ನು ಮಹಾರಾಷ್ಟ್ರದಲ್ಲಿ ನಿರೀಕ್ಷೆಯಂತೆ ಬಿಜೆಪಿ ನೇತೃತ್ವದ ಮಹಾಯುತಿ ಮೈತ್ರಿಕೂಟಕ್ಕೆ ಮುನ್ನಡೆ ಲಭಿಸಿದೆ. ಇಲ್ಲಿ ಮಹಾಯುತಿ ಮೈತ್ರಿಕೂಟ ಸುಮಾರು 220 ಕಡೆ ಮುನ್ನಡೆ ಸಾಧಿಸಿದರೆ ವಿಪಕ್ಷಗಳ ಮಹಾ ವಿಕಾಸ್‌ ಆಘಾಡಿ ಒಕ್ಕೂಟ 52 ಕಡೆ ಮಾತ್ರ ಮುಂದಿದೆ. ಈ ಮೂಲಕ ಮಹಾಯುತಿ ಮತ್ತೊಮ್ಮೆ ರಾಜ್ಯದಲ್ಲಿ ಅದಿಕಾರಕ್ಕೆ ಬರುವುದು ಬಹುತೇಕ ಖಚಿತ ಎನ್ನಲಾಗಿದೆ. ಇಲ್ಲಿ ಒಟ್ಟು 288 ಕ್ಷೇತ್ರಗಳಿದ್ದು, ಮ್ಯಾಜಿಕ್‌ ನಂಬರ್‌ 145. ಬಹುತೇಕ ಸಮೀಕ್ಷೆಗಳು ಮಹಾಯುತಿ ಸರ್ಕಾರ ಅಧಿಕಾರಕ್ಕೆ ಬರಲಿದೆ ಎಂದೇ ಊಹಿಸಿವೆ. ಪಿ-ಎಂಎಆರ್‌ಕ್ಯು (P-MARQ) ಸಮೀಕ್ಷೆಯಲ್ಲಿ ಮಹಾಯುತಿ ಸರ್ಕಾರ 137-157 ಕಡೆ ಜಯ ಗಳಿಸಿದರೆ, ಮಹಾ ವಿಕಾಸ ಆಘಾಡಿ 126-147 ಸೀಟು ಗಳಿಸಲಿದೆ. ಇತರರು 2-8 ಕಡೆ ಜಯ ದಾಖಲಿಸಬಹುದು ಎಂದು ಹೇಳಿದೆ.

ಈ ಸುದ್ದಿಯನ್ನೂ ಓದಿ: Exit poll Results 2024: ಮಹಾರಾಷ್ಟ್ರ, ಜಾರ್ಖಂಡ್‌ನಲ್ಲಿ ಬಿಜೆಪಿ ಮೈತ್ರಿಕೂಟಕ್ಕೆ ಜಯ ಎಂದಿದೆ ಸಮೀಕ್ಷೆ!