ಮುಂಬೈ: ಭೂಗತ ಪಾತಕಿ ದಾವೂದ್ ಇಬ್ರಾಹಿಂನ (Dawood Ibrahim) ಸಹೋದರ ಇಕ್ಬಾಲ್ ಕಸ್ಕರ್‌ಗೆ ಸೇರಿದ ಫ್ಲಾಟನ್ನು ವಶಪಡಿಸಿಕೊಳ್ಳಲಾಗಿದೆ. (Iqbal Kaskar) ಆತ ಮತ್ತು ಆತನ ಸಹಚರರನ್ನು ಒಳಗೊಂಡ ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯ (Enforcement Directorate) ಮಹಾರಾಷ್ಟ್ರದ ಥಾಣೆಯಲ್ಲಿರುವ ಆತನ ಫ್ಲಾಟ್ ಅನ್ನು ಸ್ವಾಧೀನಪಡಿಸಿಕೊಂಡಿದೆ. ವೇಸರ್‌ನಲ್ಲಿರುವ ನಿಯೋಪೊಲಿಸ್ ಟವರ್‌ನಲ್ಲಿರುವ ಈ ಫ್ಲಾಟ್ ಅನ್ನು ಮಾರ್ಚ್ 2022ರಿಂದಲೇ ತನ್ನ ವಶದಲ್ಲಿಟ್ಟುಕೊಂಡಿತ್ತು.
ಕಸ್ಕರ್ ವಿರುದ್ಧ 2017 ರಲ್ಲಿ ಥಾಣೆ ಪೊಲೀಸರು ಮೂರು ಸುಲಿಗೆ ಪ್ರಕರಣಗಳನ್ನು ದಾಖಲಿಸಿ, ಮಹಾರಾಷ್ಟ್ರದ ಸಂಘಟಿತ ಅಪರಾಧಗಳ ನಿಯಂತ್ರಣ ಕಾಯ್ದೆ (MCOCA) ಅಡಿಯಲ್ಲಿ ಆರೋಪ ಹೊರಿಸಿ ಜೈಲಿನಲ್ಲಿಟ್ಟಿದ್ದರು. ಮುಮ್ತಾಜ್ ಶೇಖ್ ಮತ್ತು ಇಸ್ರಾರ್ ಸಯೀದ್ ಸೇರಿದಂತೆ ಕಸ್ಕರ್ ಮತ್ತು ಅವರ ಸಹಚರರು ದಾವೂದ್ ಇಬ್ರಾಹಿಂ ಜೊತೆಗಿನ ನಂಟಿನ ಪ್ರಭಾವ ಬಳಸಿ ರಿಯಲ್ ಎಸ್ಟೇಟ್ ಡೆವಲಪರ್ಸ್‌ನಿಂದ ಆಸ್ತಿ ಮತ್ತು ಹಣವನ್ನು ಸುಲಿಗೆ ಮಾಡಿದ್ದಾರೆ ಎಂದು ಇಡಿ ತನಿಖೆಯಿಂದ ತಿಳಿದುಬಂದಿದೆ.
ಸುಮಾರು 75 ಲಕ್ಷ ಮೌಲ್ಯದ ಫ್ಲ್ಯಾಟ್ ಶೇಖ್ ಹೆಸರಿನಲ್ಲಿದ್ದು, ಬಿಲ್ಡರ್ ಸುರೇಶ್ ಮೆಹ್ತಾ ಮತ್ತು ಅವರ ಸಂಸ್ಥೆ ದರ್ಶನ್ ಎಂಟರ್ ಪ್ರೈಸಸ್ ಅನ್ನು ಗುರಿಯಾಗಿಸಿಕೊಂಡು ಸುಲಿಗೆ ಮಾಡಿದ್ದಾರೆ ಎಂದು ತಿಳಿದು ಬಂದಿದೆ. ಆರೋಪಿಗಳು ನಕಲಿ ಚೆಕ್ ಗಳ ಮೂಲಕ ಫ್ಲ್ಯಾಟ್ ಮತ್ತು 10 ಲಕ್ಷ ಹಣಕ್ಕೆ ಬೇಡಿಕೆ ಇಟ್ಟಿದ್ದರು ಇ. ಡಿ ಅಧಿಕಾರಿಗಳು ತಿಳಿಸಿದ್ದಾರೆ.
2003 ರಲ್ಲಿ ಯುಎಇಯಿಂದ ಗಡಿಪಾರು ಆಗಿದ್ದ ಕಸ್ಕರ್, ಭಾರತದಲ್ಲಿ ದಾವೂದ್ ಇಬ್ರಾಹಿಂನ ಕಾರ್ಯಾಚರಣೆಗಳನ್ನು ನಿರ್ವಹಿಸುತ್ತಿದ್ದನೆಂದು ಶಂಕಿಸಲಾಗಿದೆ. ಫೆಬ್ರವರಿ 2022 ರಲ್ಲಿ ಕಸ್ಕರ್‌ನನ್ನು ಬಂಧಿಸಲಾಗಿತ್ತು. ಮುಂಬೈ ಮತ್ತು ಭಾರತದ ಇತರ ಭಾಗಗಳಲ್ಲಿ ದಾವೂದ್ ಗ್ಯಾಂಗ್‌ನ ಕಾರ್ಯಾಚರಣೆಗಳ ಬಗ್ಗೆ ಆತನ ಬಳಿ ಪ್ರಶ್ನಿಸಲಾಗಿತ್ತು.
1993ರ ಮುಂಬೈ ಸ್ಫೋಟದ ಮಾಸ್ಟರ್ ಮೈಂಡ್ ಇಬ್ರಾಹಿಂ ಜತೆ ನಂಟು ಹೊಂದಿರುವ 10 ಸ್ಥಳಗಳಲ್ಲಿ ಇಡಿ ಶೋಧ ನಡೆಸಿತ್ತು. ಇದರ ಭಾಗವಾಗಿ ಕಸ್ಕರ್, ಛೋಟಾ ಶಕೀಲ್‌ನ ಸೋದರ ಮಾವ ಸಲೀಂ ಮತ್ತು ಪಾರ್ಕರ್ ಅವರ ಮಗ ಸೇರಿದಂತೆ ಮುಂಬೈನ 10 ನಿವೇಶನಗಳನ್ನು ಶೋಧಿಸಲಾಗಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ನ್ಯಾಯಾಲಯ ಕಸ್ಕರ್ ವಿರುದ್ಧ ಪ್ರೊಡಕ್ಷನ್ ವಾರೆಂಟ್ ಜಾರಿ ಮಾಡಿತ್ತು.
ಈ ಸುದ್ದಿಯನ್ನೂ ಓದಿ : Danish Chikna : ದಾವೂದ್ ಇಬ್ರಾಹಿಂನ ಡ್ರಗ್ಸ್ ಫ್ಯಾಕ್ಟರಿ ಮ್ಯಾನೇಜರ್ ಡಾನಿಶ್ ಚಿಕ್ನಾ ಅರೆಸ್ಟ್