Thursday, 15th May 2025

ತಾಂತ್ರಿಕ ಸಮಸ್ಯೆ: ಇಂಡಿಗೋ ವಿಮಾನ ತುರ್ತು ಭೂಸ್ಪರ್ಶ

ವದೆಹಲಿ: ವಾರಾಣಸಿಗೆ ಹೊರಟಿದ್ದ ಇಂಡಿಗೋ ವಿಮಾನವು ತಾಂತ್ರಿಕ ಸಮಸ್ಯೆಯಿಂದಾಗಿ ಮಂಗಳವಾರ ತೆಲಂಗಾಣದ ಶಂಶಾಬಾದ್‌ನ ರಾಜೀವ್ ಗಾಂಧಿ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ತುರ್ತು ಭೂಸ್ಪರ್ಶ ಮಾಡಿದೆ.

137 ಪ್ರಯಾಣಿಕರನ್ನು ಹೊತ್ತು ಬೆಂಗಳೂರಿನಿಂದ ವಾರಾಣಸಿಗೆ ಹೊರಟಿದ್ದ ಇಂಡಿಗೋ 6E897 ವಿಮಾನ ಶಂಶದಾಬಾದ್ ವಿಮಾನ ನಿಲ್ದಾಣದಲ್ಲಿ ಬೆಳಿಗ್ಗೆ ತುರ್ತು ಭೂಸ್ಪರ್ಶ ಮಾಡಿತು ಎಂದು ನಾಗರಿಕ ವಿಮಾನಯಾನ ಮಹಾನಿರ್ದೇಶನಾಲಯ ದೃಢಪಡಿಸಿದೆ.

‘ತಾಂತ್ರಿಕ ಸಮಸ್ಯೆಯ ಕಾರಣಕ್ಕೆ ವಿಮಾನವನ್ನು ತುರ್ತಾಗಿ ಇಳಿಸಲಾಯಿತು. ವಿಮಾನದಲ್ಲಿದ್ದ ಎಲ್ಲರೂ ಸುರಕ್ಷಿತವಾಗಿದ್ದಾರೆ’ ಎಂದು ಡಿಜಿಸಿಎ ತಿಳಿಸಿದೆ.

ಘಟನೆಯ ಕುರಿತ ತನಿಖೆಗೆ ಡಿಜಿಸಿಎ ಆದೇಶಿಸಿದೆ ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದರು.