Monday, 12th May 2025

ನೌಕಾಪಡೆಯ ಮುಖ್ಯಸ್ಥರಾಗಿ ವೈಸ್ ಅಡ್ಮಿರಲ್ ದಿನೇಶ್ ತ್ರಿಪಾಠಿ ನೇಮಕ

ವದೆಹಲಿ: ವೈಸ್ ಅಡ್ಮಿರಲ್ ದಿನೇಶ್ ತ್ರಿಪಾಠಿ ಅವರು ಭಾರತೀಯ ನೌಕಾಪಡೆಯ ಮುಂದಿನ ಮುಖ್ಯಸ್ಥರಾಗಿ ನೇಮಕಗೊಂಡಿದ್ದಾರೆ.

40 ವರ್ಷಗಳ ಸುದೀರ್ಘ ವೃತ್ತಿ ಜೀವನದಲ್ಲಿ ಹಲವು ಪ್ರಮುಖ ಹುದ್ದೆಗಳಲ್ಲಿ ಸೇವೆ ಸಲ್ಲಿಸಿದ ಅಡ್ಮಿರಲ್ ದಿನೇಶ್ ಇದೀಗ ನೌಕಾ ಪಡೆಯ ಉನ್ನತ ಹುದ್ದೆಯಲ್ಲಿ ಸೇವೆ ಸಲ್ಲಿಸಲು ಸಿದ್ಧರಾಗಿದ್ದಾರೆ.

ತ್ರಿಪಾಠಿ ಪ್ರಸ್ತುತ ನೌಕಾಪಡೆಯ ಉಪ ಮುಖ್ಯಸ್ಥರಾಗಿದ್ದಾರೆ. ಗುರುವಾರ ಹೊರಡಿಸಿದ ಹೇಳಿಕೆಯ ಪ್ರಕಾರ, ನೌಕಾಪಡೆಯ ನೂತನ ಮುಖ್ಯಸ್ಥರಾಗಿ ಏಪ್ರಿಲ್ 30 ರಂದು ಅಧಿಕಾರ ವಹಿಸಿಕೊಳ್ಳಲಿದ್ದಾರೆ ಎಂದು ಹೇಳಲಾಗಿದೆ.

ನೌಕಾಪಡೆಯ ಉಪ ಮುಖ್ಯಸ್ಥರಾಗಿ ಅಧಿಕಾರ ವಹಿಸಿಕೊಳ್ಳುವ ಮೊದಲು, ಅಡ್ಮಿರಲ್ ತ್ರಿಪಾಠಿ ಅವರು ಪಶ್ಚಿಮ ನೌಕಾ ಕಮಾಂಡ್‌ನ ಫ್ಲಾಗ್ ಆಫೀಸರ್ ಕಮಾಂಡಿಂಗ್-ಇನ್-ಚೀಫ್ ಆಗಿಯೂ ಸೇವೆ ಸಲ್ಲಿಸಿದರು. ತ್ರಿಪಾಠಿ ಅವರು ಅಡ್ಮಿರಲ್ ಆರ್ ಹರಿಕುಮಾರ್ ಅವರ ಸ್ಥಾನವನ್ನು ತುಂಬಲಿದ್ದಾರೆ.

ಜುಲೈ 1985 ರಲ್ಲಿ ನೌಕಾಪಡೆಗೆ ಸೇರಿದ ವೈಸ್ ಅಡ್ಮಿರಲ್ ತ್ರಿಪಾಠಿ ಅವರು ಸಂವಹನ ಮತ್ತು ಎಲೆಕ್ಟ್ರಾನಿಕ್ಸ್ ಯುದ್ಧ ತಜ್ಞ ಮತ್ತು INS ಕಿರ್ಚ್ ಮತ್ತು INS ತ್ರಿಶೂಲ್‌ನಂತಹ ನೌಕಾ ಹಡಗುಗಳಿಗೆ ಕಮಾಂಡರ್ ಆಗಿ ಸೇವೆ ಸಲ್ಲಿಸಿದ್ದರು. ಅಷ್ಟುಮಾತ್ರವಲ್ಲದೆ ಈ ಹಿಂದೆ ಡೈರೆಕ್ಟರ್ ಜನರಲ್ ನೇವಲ್ ಆಪರೇಷನ್ಸ್ ಮತ್ತು ಫ್ಲಾಗ್ ಆಫೀಸರ್ ಕಮಾಂಡಿಂಗ್ ಇನ್ ಚೀಫ್, ವೆಸ್ಟರ್ನ್ ನೇವಲ್ ಕಮಾಂಡ್ ಹುದ್ದೆಗಳನ್ನು ಅಲಂಕರಿಸಿದ್ದಾರೆ.

ವೈಸ್ ಅಡ್ಮಿರಲ್ ತ್ರಿಪಾಠಿ ಅವರು ತಮ್ಮ ಅತ್ಯುತ್ತಮ ಸೇವೆಗಾಗಿ ಅತಿ ವಿಶಿಷ್ಟ ಸೇವಾ ಪದಕ ಮತ್ತು ನೌಕಾಪಡೆಯ ಪದಕವನ್ನು ಪಡೆದಿದ್ದಾರೆ.

Leave a Reply

Your email address will not be published. Required fields are marked *