ನವದೆಹಲಿ: ಸ್ವದೇಶಿ ನಿರ್ಮಿತ (indigenous) ಲಘು ಯುದ್ಧ ಟ್ಯಾಂಕ್ (light tank) ಇದೀಗ ಹೊಸ ಮೈಲುಗಲ್ಲೊಂದನ್ನು ಸಾಧಿಸಿದೆ. ನಿರಂತರ ಸ್ಥಿರತೆ ಮೂಲಕ 4,200 ಮೀಟರ್‌ಗಳಿಗೂ ಅಧಿಕ ಎತ್ತರಕ್ಕೆ ಹಲವು ಸುತ್ತಿನ ಫೈರಿಂಗ್ ಪರೀಕ್ಷೆಯನ್ನು ಯಶಸ್ವಿಯಾಗಿ ಮುಗಿಸಿದೆ. ಅತ್ಯುನ್ನತ ವೈವಿಧ್ಯತೆಗಳಿಂದ ಕೂಡಿರುವ 25 ಟನ್ ತೂಕದ ಇಂಡಿಯನ್ ಲೈಟ್ ಟ್ಯಾಂಕ್ (Indian Light Tank) ಅನ್ನು ಭಾರತ-ಚೀನಾ ಗಡಿಭಾಗದಲ್ಲಿ ನಮ್ಮ ಸೇನೆಗೆ (Indian Army) ಹೆಚ್ಚಿನ ಬಲ ತುಂಬು ಉದ್ದೆಶದಿಂದ ಅಭಿವೃದ್ಧಿಪಡಿಸಲಾಗಿದೆ.
ಈ ಯುದ್ಧ ಟ್ಯಾಂಕ್‌ನ ಸುಧಾರಿತ ಮಾದರಿಯ ಪರಿಕ್ಷೆಯನ್ನು ಕಳೆದ ಸೆಪ್ಟೆಂಬರ್‌ನಲ್ಲಿ ಮರುಭೂಮಿ ವಾತಾವರಣದಲ್ಲಿ ನಡೆಸಲಾಗಿತ್ತು.
“ವಿವಿಧ ಪರಿಮಾಣಗಳಲ್ಲಿ ಸುಮಾರು 4,200 ಮೀಟರ್ ಎತ್ತರಕ್ಕೆ ಉನ್ನತ ಮಟ್ಟದಲ್ಲಿ ಹಲವಾರು ಸುತ್ತಿನ ಫೈರಿಂಗ್ ಮಾಡುವ ಮೂಲಕ ಇಂಡಿಯನ್ ಲೈಟ್ ಟ್ಯಾಂಕ್ ಮಹತ್ವದ ಮೈಲುಗಲ್ಲನ್ನು ಸಾಧಿಸಿದೆ” ಎಂದು ರಕ್ಷಣಾ ಸಚಿವಾಲಯವು ಮಾಹಿತಿ ನೀಡಿದೆ.
ಪರ್ವತ ಶ್ರೇಣಿಯ ಗಡಿ ಪ್ರದೇಶಗಳಲ್ಲಿ ಸುಮಾರು 350 ಲಘು ಯುದ್ಧ ಟ್ಯಾಂಕ್‌ಗಳನ್ನು ನಿಯೋಜಿಸಲು ಭಾರತೀಯ ಸೇನೆ ಯೋಚಿಸುತ್ತಿದೆ ಎಂಬ ಮಾಹಿತಿ ಲಭ್ಯವಾಗಿದೆ.
ನೆರೆ ರಾಷ್ಟ್ರ ಚೀನಾ (China) ಇದೇ ಮಾದರಿಯ ಲಘು ಯುದ್ಧ ಟ್ಯಾಂಕ್‌ಗಳನ್ನು ಗಡಿಭಾಗದಲ್ಲಿ ನಿಯೋಜಿಸಿರುವುದಕ್ಕೆ ಪ್ರತಿಯಾಗಿ ಭಾರತ ಇದೀಗ ತನ್ನದೇ ತಂತ್ರಜ್ಞಾನದ ಈ ಲಘು ಯುದ್ಧ ಟ್ಯಾಂಕ್‌ಗಳನ್ನು ಅಭಿವೃದ್ಧಿಸಿಪಡಿಸಿದೆ.
ಈ ಲಘು ಯುದ್ಧ ಟ್ಯಾಂಕ್‌ಗಳನ್ನು ಡಿ.ಆರ್.ಡಿ.ಒ.ದ ಯುದ್ಧ ವಾಹನ ಸಂಶೋಧನಾ ಮತ್ತು ಅಭಿವೃದ್ಧಿ ಸಂಸ್ಥೆ, ಲಾರ್ಸೆನ್ ಆ್ಯಂಡ್ ಟರ್ಬೋ ಪ್ರಿಷಿಸನ್ ಇಂಜಿನಿಯರಿಂಗ್ ಆ್ಯಂಡ್ ಸಿಸ್ಟಮ್ಸ್ ಜೊತೆಯಾಗಿ ಯಶಸ್ವಿಯಾಗಿ ಅಭಿವೃದ್ಧಿಪಡಿಸಿದೆ.
ರಕ್ಷಣಾ ಸಚಿವ (Defence Minister) ರಾಜನಾಥ್ ಸಿಂಗ್ (Rajnath Singh) ಅವರು ಡಿ.ಆರ್.ಡಿ.ಒ. (DRDO), ಭಾರತೀಯ ಸೇನೆ, ಭಾರತೀಯ ವಾಯುದಳ (Indian Air Force) ಮತ್ತು ಎಲ್ ಆ್ಯಂಡ್ ಟಿ (L&T) ಸಂಸ್ಥೆಗಳನ್ನು ಈ ಅಪೂರ್ವ ಸಾಧನೆಗಾಗಿ ಅಭಿನಂದಿಸಿದ್ದಾರೆ.
”ಈ ಲಘು ಯುದ್ಧ ಟ್ಯಾಂಕ್ ಗಳನ್ನು ಏರ್ ಲಿಫ್ಟ್ (Air Lift) ಮಾಡುವ ಪ್ರಾತಕ್ಷಿಕೆಯನ್ನೂ ಸಹ ಭಾರತೀಯ ವಾಯು ಸೇನೆ ಇದೇ ಸಂದರ್ಭದಲ್ಲಿ ಪ್ರಸ್ತುತಪಡಿಸಿತು. ರಸ್ತೆ ಅಥವಾ ರೈಲು ಮಾರ್ಗದ ಮೂಲಕ ತಲುಪಲು ಅಸಾಧ್ಯವಾಗುವ ಸ್ಥಳಗಳಿಗೆ ಈ ಟ್ಯಾಂಕ್ ಗಳನ್ನು ಅಗತ್ಯ ಸಂದರ್ಭದಲ್ಲಿ ಈ ರೀತಿಯಾಗಿ ಏರ್ ಲಿಫ್ಟ್ ಮಾಡಿ ಕೊಂಡೊಯ್ಯಬಹುದಾಗಿದೆʼʼ ಎಂದು ರಕ್ಷಣಾ ಸಚಿವಾಲಯವು ತನ್ನ ಹೇಳಿಕೆಯಲ್ಲಿ ತಿಳಿಸಿದೆ.
ಈ ಟ್ಯಾಂಕನ್ನು ಮೂರು ವರ್ಷಗಳ ಹಿಂದೆ ವಿನ್ಯಾಸಗೊಳಿಸಲಾಗಿತ್ತು ಮತ್ತು ಇದರ ಒಟ್ಟಾರೆ ಅಭಿವೃದ್ಧಿಯನ್ನು ಆ ಬಳಿಕ ಆದ್ಯತೆಯ ಮೇಲೆ ಕೈಗೊಳ್ಳಲಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ʼʼಭಾರತಿಯ ಸೇನೆ ಮತ್ತು ಭಾರತೀಯ ವಾಯು ದಳದ ಬೆಂಬಲದೊಂದಿಗೆ ನಡೆದ ಈ ಎರಡು ಹಂತದ ಆಂತರಿಕ ನಿರ್ವಹಣೆ ಬಳಿಕ, ಈ ಲಘು ಯುದ್ಧ ಟ್ಯಾಂಕ್‌ಗಳು ಇನ್ನು ಕೆಲವು ಪರಿಕ್ಷೆಗಳಿಗೆ ಒಳಗಾಗಲಿವೆ. ಬಳಿಕವಷ್ಟೇ ಇದು ಸೇನಾ ಕಾರ್ಯಕ್ಕೆ ನಿಯೋಜನೆಗೊಳ್ಳಲಿದೆʼʼ ಎಂಬ ಮಾಹಿತಿಯನ್ನೂ ರಕ್ಷಣಾ ಸಚಿವಾಲಯವು ಇದೇ ಸಂದರ್ಭದಲ್ಲಿ ನೀಡಿದೆ.
ಈ ಲಘು ಟ್ಯಾಂಕ್ ನಿರ್ಮಾಣದ ಹಿಂದೆ ಪರಿಶ್ರಮವಹಿಸಿದ ಸಂಪೂರ್ಣ ತಂಡವನ್ನು ಹಾಗೂ ಇಂಡಸ್ಟ್ರಿ ಪಾರ್ಟನರ್ ಆಗಿರುವ ಎಲ್ ಆ್ಯಂಡ್ ಟಿ ಸಂಸ್ಥೆಯನ್ನು ರಕ್ಷಣಾ ಆರ್ ಆ್ಯಂಡ್ ಡಿಯ ಕಾರ್ಯದರ್ಶಿ ಮತ್ತು ಡಿ.ಆರ್.ಡಿ.ಒ. ಅಧ್ಯಕ್ಷರಾಗಿರುವ ಸಮಿರ್ ವಿ. ಕಾಮತ್ ಅವರು ಅಭಿನಂದಿಸಿದ್ದಾರೆ.