Monday, 12th May 2025

ಉತ್ತರಾಖಂಡದಲ್ಲಿ ಭಾರಿ ಮಳೆ: ಯಾತ್ರಾರ್ಥಿಗಳ ಸ್ಥಳಾತರಕ್ಕೆ ಹೆಲಿಕಾಪ್ಟರ್ ಬಳಕೆ

ರುದ್ರಪ್ರಯಾಗ್: ಉತ್ತರಾಖಂಡದಲ್ಲಿ ಭಾರಿ ಮಳೆ ಸುರಿಯುತ್ತಿದ್ದು, ಕೇದಾರನಾಥ ಮಾರ್ಗದಲ್ಲಿ ಸಿಲುಕಿರುವ ಯಾತ್ರಾರ್ಥಿಗಳನ್ನು ಸುರಕ್ಷಿತ ಸ್ಥಳಕ್ಕೆ ಕರೆದೊಯ್ಯಲು ವಾಯುಸೇನೆಯ ಚಿನೂಕ್ ಹಾಗೂ ಎಂಐ17 ಹೆಲಿಕಾಪ್ಟರ್ ಬಳಕೆ ಮಾಡಲಾಗುತ್ತಿದೆ ಎಂದು ಮುಖ್ಯಮಂತ್ರಿ ಪುಷ್ಕರ್ ಸಿಂಗ ಧಾಮಿ ಹೇಳಿದ್ದಾರೆ.

ಗುರುವಾರದಿಂದ ಆರಂಭವಾದ ಈ ಕಾರ್ಯಾಚರಣೆ ಶುಕ್ರವಾರವೂ ಮುಂದುವರಿಯಿತು. ಸುಮಾರು 5 ಸಾವಿರ ಜನರನ್ನು ಸ್ಥಳಾಂತರಿಸಲಾಗಿದೆ. ಇವರಲ್ಲಿ ಕೆಲವರನ್ನು ಸೇನಾ ಹೆಲಿಕಾಪ್ಟರ್ ಮೂಲಕ ಸ್ಥಳಾಂತರಿಸಿದರೆ, ಇನ್ನೂ ಕೆಲವರನ್ನು ರಾಜ್ಯ ನೈಸರ್ಗಿಕ ವಿಕೋಪ ದಳದ ಸಿಬ್ಬಂದಿ ಹಾಗೂ ರಾಷ್ಟ್ರೀಯ ನೈಸರ್ಗಿಕ ವಿಕೋಪ ದಳ ಸಿಬ್ಬಂದಿ ಸ್ಥಳಾಂತರಿಸಿದ್ದಾರೆ ಎಂದು ತಿಳಿಸಿದ್ದಾರೆ.

‘ಉತ್ತರಾಖಂಡದಲ್ಲಿ ಭಾರಿ ಪ್ರಮಾಣದಲ್ಲಿ ಮಳೆ ಸುರಿಯುತ್ತಿದೆ. ಪರಿಹಾರ ಕಾರ್ಯದಲ್ಲಿ ಸರ್ಕಾರದ ಇಡೀ ಆಡಳಿತ ಯಂತ್ರದೊಂದಿಗೆ ವಿಪತ್ತು ನಿರ್ವಹಣಾ ತಂಡಗಳೂ ಭಾಗಿಯಾಗಿವೆ. ಪ್ರಧಾನಮಂತ್ರಿಗೆ ಮನವಿ ಮಾಡಿಕೊಂಡ ಪರಿಣಾಮ ವಾಯುಸೇನೆಯ ಚಿನೂಕ್ ಹಾಗೂ ಎಂಐ17 ಹೆಲಿಕಾ ಪ್ಟರ್‌ಗಳೂ ಈ ಕಾರ್ಯಾಚರಣೆಯಲ್ಲಿ ಭಾಗಿಯಾಗಿವೆ’ ಎಂದು ಧಾಮಿ ತಿಳಿಸಿದ್ದಾರೆ.

‘ಹವಾಮಾನ ಪರಿಸ್ಥಿತಿ ಸುಧಾರಿಸಿದರೆ, ಸಿಕ್ಕಿಬಿದ್ದಿರುವ ಯಾತ್ರಾರ್ಥಿಗಳನ್ನು ಶುಕ್ರವಾರ ಸಂಜೆಯೊಳಗೆ ಸುರಕ್ಷಿತ ಸ್ಥಳಕ್ಕೆ ಕರೆದೊಯ್ಯಲಾಗುವುದು. ಗೃಹ ಸಚಿವ ಅಮಿತ್ ಶಾ ಅವರು ಕರೆ ಮಾಡಿ, ರಕ್ಷಣಾ ಕಾರ್ಯಾಚರಣೆ ಬಗ್ಗೆ ವಿಚಾರಿಸಿದ್ದಾರೆ. ಪರಿಸ್ಥಿತಿ ನಿಭಾಯಿಸಲು ಎಲ್ಲಾ ರೀತಿಯ ಅಗತ್ಯ ನೆರವು ನೀಡುವುದಾಗಿಯೂ ಭರವಸೆ ನೀಡಿದ್ದಾರೆ’ ಎಂದಿದ್ದಾರೆ.

ಕೇದಾರನಾಥ ತಲುಪುವ ಕಾಲುದಾರಿಯಲ್ಲಿನ ಜಂಗಲ್‌ಚಟ್ಟಿ ಹಾಗ ಲಿಂಚೋಳಿ ಬಳಿ ಮೇಘಸ್ಫೋಟದಿಂದ ಭಾರಿ ಪ್ರಮಾಣದ ಹಾನಿಯಾಗಿದೆ.

ಕೇದಾರನಾಥ ಯಾತ್ರಾರ್ಥಿಗಳು ಗೌರಿಕುಂಡ ಹಾಗೂ ಕೇದಾರನಾಥ ಮಾರ್ಗ ನಡುವಿನ ಭಿಂಬಲಿ ಬಳಿ ಸಿಲುಕಿದ್ದಾರೆ. ಈ ಮಾರ್ಗದಲ್ಲಿ ಸುಮಾರು 20ರಿಂದ 25 ಮೀಟರ್‌ ಉದ್ದದ ರಸ್ತೆಯೇ ಕೊಚ್ಚಿಹೋಗಿದೆ.

ಯಾತ್ರಾರ್ಥಿಗಳು ಸುರಕ್ಷಿತವಾಗಿದ್ದಾರೆ. 5 ಸಾವಿರ ಆಹಾರ ಪೊಟ್ಟಣವನ್ನು ವಿತರಿಸಲಾಗಿದೆ. ಕೇದಾರನಾಥ ಯಾತ್ರೆಯನ್ನು ತಾತ್ಕಾಲಿಕವಾಗಿ ಸ್ಥಗಿತ ಗೊಳಿಸಲಾಗಿದೆ.

Leave a Reply

Your email address will not be published. Required fields are marked *