ಹರಿಯಾಣ: ದೇಶದ ಮೊದಲ ಹೈಡ್ರೋಜನ್ ರೈಲು (Hydrogen Train) ಹರಿಯಾಣದ ಜಿಂದ್ (Haryana’s Jind) ಮತ್ತು ಸೋನಿಪತ್ ರೈಲು ನಿಲ್ದಾಣಗಳ ನಿಲ್ದಾಣಗಳ (Sonipat railway stations) ನಡುವೆ ಶೀಘ್ರದಲ್ಲಿ ಸಂಚರಿಸಲು ಸಜ್ಜಾಗಿದೆ. ಈ ರೈಲಿಗೆ ಇನ್ನೂ ಹೆಸರಿಡಲಾಗಿಲ್ಲ. ಆರ್‌ಡಿಎಸ್‌ಒ (RDSO) ವಿನ್ಯಾಸಗೊಳಿಸಿರುವ 8 ಪ್ಯಾಸೆಂಜರ್ ಕೋಚ್‌ಗಳನ್ನು ಹೊಂದಿರುವ ಈ ರೈಲು ಏಕಕಾಲಕ್ಕೆ 2,638 ಪ್ರಯಾಣಿಕರನ್ನು ಸಾಗಿಸುವ ಸಾಮರ್ಥ್ಯ ಹೊಂದಿದೆ.
ಹೈಡ್ರೋಜನ್ ಚಾಲಿತ ರೈಲನ್ನು ಪ್ರಾರಂಭಿಸುವುದರೊಂದಿಗೆ ಭಾರತೀಯ ರೈಲ್ವೆ (Indian Railways) ಮತ್ತೊಂದು ಮೈಲಿಗಲ್ಲು ಸಾಧಿಸಲು ಸಜ್ಜಾಗಿದೆ. ಶೀಘ್ರದಲ್ಲೇ ಹರಿಯಾಣದ ಜಿಂದ್ ಮತ್ತು ಸೋನಿಪತ್ ರೈಲು ನಿಲ್ದಾಣಗಳ ನಡುವೆ ಈ ವಿನೂತನ ರೈಲು ಪ್ರಾಯೋಗಿಕ ಓಡಾಟ ನಡೆಸಲಿದೆ.
ಸಂಶೋಧನೆ, ವಿನ್ಯಾಸ ಮತ್ತು ಪ್ರಮಾಣಿತ ಸಂಸ್ಥೆ ಆರ್‌ಡಿಎಸ್‌ಒ ಹೈಡ್ರೋಜನ್ ರೈಲು ವಿನ್ಯಾಸಗೊಳಿಸಿದ್ದು, ಇದರೊಂದಿಗೆ ರೈಲುಗಳಿಗೆ ಇಂಧನವಾಗಿ ಹೈಡ್ರೋಜನ್ ಬಳಕೆಯನ್ನು ಪ್ರಾರಂಭಿಸಿದ ದೇಶಗಳ ಆಯ್ದ ಗುಂಪಿಗೆ ಭಾರತವು ಸೇರಿಕೊಳ್ಳಲಿದೆ. ಇದು ವಿಶ್ವದಲ್ಲೇ ಮೊದಲ ದೊಡ್ಡ ಪ್ರಮಾಣದ ಪ್ರಯತ್ನವಾಗಿದೆ. ಭಾರತದ ಮೊದಲ ಹೈಡ್ರೋಜನ್ ಇಂಧನ ರೈಲಿನ ವಿನ್ಯಾಸ ಪೂರ್ಣಗೊಂಡಿದೆ. ಅಗತ್ಯ ಔಪಚಾರಿಕತೆಗಳನ್ನು ಅನುಸರಿಸಿ ಮುಂಬರುವ ವರ್ಷದ ಮೊದಲ ತ್ರೈಮಾಸಿಕದಲ್ಲಿ ರೈಲು ತನ್ನ ಅಂತಿಮ ಪ್ರಯೋಗಕ್ಕೆ ಒಳಗಾಗುವ ನಿರೀಕ್ಷೆಯಿದೆ.
ಭಾರತೀಯ ರೈಲ್ವೇಯ ಪ್ರಮುಖ ವಿಭಾಗವಾದ ಆರ್‌ಡಿಎಸ್‌ಒ 2021ರ ಡಿಸೆಂಬರ್ ನಲ್ಲಿ ಹೈಡ್ರೋಜನ್ ರೈಲಿನ ವಿನ್ಯಾಸವನ್ನು ಬಿಡುಗಡೆ ಮಾಡಿತ್ತು. ಬಳಿಕ ಈ ಯೋಜನೆಯ ಕೆಲಸಗಳು ನಡೆಯುತ್ತಿವೆ. ಲಕ್ನೋದಲ್ಲಿ ನಡೆದ ಇಂಟರ್ ನ್ಯಾಷನಲ್ ಇನ್ನೋವೇಟಿವ್ ರೈಲ್ ಎಕ್ಸ್ ಪೋದಲ್ಲಿ ಹೈಡ್ರೋಜನ್ ರೈಲಿನ ವಿನ್ಯಾಸವನ್ನು ಅನಾವರಣಗೊಳಿಸಲಾಗಿತ್ತು.
ಹೈಡ್ರೋಜನ್ ರೈಲಿನ ಕುರಿತು ಮಾಹಿತಿ ನೀಡಿರುವ ಆರ್‌ಡಿಎಸ್‌ಒ ಮಹಾನಿರ್ದೇಶಕ ಉದಯ್ ಬೋರ್ವಾಂಕರ್, ಆರ್‌ಡಿಎಸ್‌ಒ ನಿರಂತರವಾಗಿ ಹೊಸ ಮತ್ತು ನವೀನ ಯೋಜನೆಗಳತ್ತ ಗಮನಹರಿಸುತ್ತದೆ. ಜಾಗತಿಕವಾಗಿ ರಸ್ತೆ ಸಾರಿಗೆಯಲ್ಲಿ ಹೈಡ್ರೋಜನ್ ಇಂಧನವನ್ನು ಪರೀಕ್ಷಿಸಲಾಗಿದ್ದರೂ ರೈಲು ಸಾರಿಗೆಯಲ್ಲಿ ಅದರ ಬಳಕೆಯು ಗಮನಾರ್ಹವಾದ ಯಶಸ್ಸನ್ನು ಸಾಧಿಸಿಲ್ಲ. ಈ ನಿಟ್ಟಿನಲ್ಲಿ ಭಾರತದ ಪ್ರಯತ್ನ ಖಂಡಿತವಾಗಿಯೂ ಯಶಸ್ವಿಯಾಗುತ್ತವೆ. ಇದೊಂದು ಪ್ರಮುಖ ಸಾಧನೆಯಾಗಿದೆ ಎಂದು ಹೇಳಿದ್ದಾರೆ.
ಹಸಿರು ಶಕ್ತಿಯ ಮೇಲೆ ಹೆಚ್ಚಿನ ಗಮನ ಹರಿಸುತ್ತಿರುವುದರಿಂದ ಈ ಯೋಜನೆಯನ್ನು ಹೆಚ್ಚು ಮಹತ್ವದ್ದಾಗಿದೆ. ಎಕ್ಸ್‌ಪೋದಲ್ಲಿ ಪ್ರದರ್ಶಿಸಲಾದ ಮಾದರಿಯಲ್ಲಿ “ನಮೋ ಗ್ರೀನ್ ರೈಲ್” ಎಂದು ಬರೆಯಲಾಗಿದ್ದು, ಅಧಿಕೃತ ಹೆಸರನ್ನು ಬಿಡುಗಡೆ ಸಮಯದಲ್ಲಿ ನಿರ್ಧರಿಸಲಾಗುವುದು ಎಂದು ಅವರು ತಿಳಿಸಿದ್ದಾರೆ.

ರೈಲಿನ ವೈಶಿಷ್ಟ್ಯಗಳು
- ಹೈಡ್ರೋಜನ್ ರೈಲಿಗೆ ಇನ್ನೂ ಹೆಸರಿಟ್ಟಿಲ್ಲ. ಆರ್‌ಡಿಎಸ್‌ಒ ವಿನ್ಯಾಸಗೊಳಿಸಿದ ಮಾದರಿಯು 8 ಪ್ಯಾಸೆಂಜರ್ ಕೋಚ್‌ಗಳನ್ನು ಹೊಂದಿದ್ದು, ಒಂದೇ ಟ್ರಿಪ್‌ನಲ್ಲಿ 2,638 ಪ್ರಯಾಣಿಕರನ್ನು ಸಾಗಿಸುವ ಸಾಮರ್ಥ್ಯವನ್ನು ಹೊಂದಿದೆ.
- ರೈಲು ಗಂಟೆಗೆ ಗರಿಷ್ಠ 110 ಕಿ.ಮೀ. ವೇಗವನ್ನು ಹೊಂದಿರುತ್ತದೆ. ಈ ರೈಲಿನ ಮೂರು ಕೋಚ್‌ಗಳನ್ನು ಹೈಡ್ರೋಜನ್ ಸಿಲಿಂಡರ್, ಹೌಸಿಂಗ್ ಇಂಟೆಗ್ರೇಟೆಡ್ ಫುಯೆಲ್ ಸೆಲ್ ಕನ್ವರ್ಟರ್ಸ್, ಬ್ಯಾಟರಿ ಮತ್ತು ಏರ್ ರಿಸರ್ವಾಯರ್‌ಗಳನ್ನು ಸಂಗ್ರಹಿಸಲು ಮೀಸಲಿಡಲಾಗಿದೆ.
- ಈ ರೈಲು ಕಡಿಮೆ ದೂರದ ಪ್ರಯಾಣಕ್ಕೆ ಸೂಕ್ತವೆಂದು ಪರಿಗಣಿಸಲಾಗಿದೆ. ಪ್ರಸ್ತುತ, ಚೆನ್ನೈನ ಇಂಟಿಗ್ರಲ್ ಕೋಚ್ ಫ್ಯಾಕ್ಟರಿಯಲ್ಲಿ (ಐಸಿಎಫ್) ಇದನ್ನು ಜೋಡಿಸುವ ಕಾರ್ಯ ನಡೆಯುತ್ತಿದೆ.
- ಹೈಡ್ರೋಜನ್ ಚಾಲಿತ ರೈಲುಗಳು ಮೋಟಾರಿಗೆ ಶಕ್ತಿಯನ್ನು ನೀಡಲು ಹೈಡ್ರೋಜನ್ ಮತ್ತು ಆಮ್ಲಜನಕ ಇಂಧನ ಕೋಶಗಳ ಮೂಲಕ ಉತ್ಪತ್ತಿಯಾಗುವ ವಿದ್ಯುತ್ ಅನ್ನು ಬಳಸುತ್ತವೆ. ಜರ್ಮನಿ ಮತ್ತು ಚೀನಾದಂತಹ ದೇಶಗಳು ರೈಲು ಸಾರಿಗೆಗಾಗಿ ಹೈಡ್ರೋಜನ್ ಇಂಧನದ ಮೇಲೆ ಕೆಲಸ ಮಾಡಿದರೂ ದೊಡ್ಡ ಪ್ರಮಾಣದ ಯಶಸ್ಸು ಸಾಧಿಸಿಲ್ಲ.
- ಪ್ರಸ್ತುತ ಜರ್ಮನಿ ಮಾತ್ರ ಹೈಡ್ರೋಜನ್ ರೈಲನ್ನು ನಿರ್ವಹಿಸುವ ಏಕೈಕ ದೇಶವಾಗಿದೆ. ಇದು ಎರಡು ಕೋಚ್‌ಗಳೊಂದಿಗೆ ಪ್ರಯಾಣ ನಡೆಸುತ್ತಿದೆ.
Gold Price Today: ಚಿನ್ನದ ದರದಲ್ಲಿ ಮತ್ತೆ ಏರಿಕೆ; ಇಂದಿನ ರೇಟ್ ಎಷ್ಟಿದೆ?