ಹೊಸದಿಲ್ಲಿ: ಹುಸಿ ಬಾಂಬ್ ಬೆದರಿಕೆಗೆ (Hoax Bomb Threat) ರಾಷ್ಟ್ರ ರಾಜಧಾನಿ ಹೊಸದಿಲ್ಲಿ ಮತ್ತೊಮ್ಮೆ ಬೆಚ್ಚಿ ಬಿದ್ದಿದೆ. ಇಮೇಲ್ ಮೂಲಕ ಹಲವು ಶಾಲೆಗಳಿಗೆ ಸೋಮವಾರ (ಡಿ. 9)ರ ಬೆಳಗ್ಗೆ ಬಾಂಬ್ ಬೆದರಿಕೆ ಸಂದೇಶ ಬಂದಿದೆ. ಈ ಹಿನ್ನೆಲೆಯಲ್ಲಿ ಮಕ್ಕಳನ್ನು ಮನೆಗೆ ಕಳುಹಿಸಲಾಗಿದ್ದು, ತನಿಖೆ ಕೈಗೊಳ್ಳಲಾಗಿದೆ.
ʼʼಪಶ್ಚಿಮ ವಿಹಾರದ ಜಿಕೆ ಗೋಯೆಂಕಾ ಮತ್ತು ಡಿಪಿಎಸ್ ಆರ್‌ಕೆ ಪುರಂ ಶಾಲೆ ಸೇರಿದಂತೆ 40 ಶಾಲೆಗಳಿಗೆ ಇಮೇಲ್ ಮೂಲಕ ಬಾಂಬ್ ಬೆದರಿಕೆ ಸಂದೇಶ ಬಂದಿವೆ. ಈ ಬಗ್ಗೆ ತನಿಖೆ ಕೈಗೆತ್ತಿಕೊಳ್ಳಲಾಗಿದೆ. ಮುಂಜಾಗ್ರತಾ ಕ್ರಮವಾಗಿ ಈಗಾಗಲೇ ಮಕ್ಕಳನ್ನು ಮನೆಗೆ ಕಳುಹಿಸಲಾಗಿದೆʼʼ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
#WATCH | A team of Delhi police arrives at RK Puram's DPS – one of the two schools that received bomb threats, via e-mail, this morning pic.twitter.com/c23ciJTLGi
— ANI (@ANI) December 9, 2024
ʼʼವಿವಿಧ ಶಾಲೆಗಳ ಕಟ್ಟಡದ ಒಳಗೆ ಬಾಂಬ್‌ಗಳನ್ನು ಇರಿಸಲಾಗಿದೆ. ಇವು ಚಿಕ್ಕ ಗಾತ್ರದಲ್ಲಿದ್ದು ಮೇಲ್ನೋಟಕ್ಕೆ ಕಾಣಿಸದಂತೆ ಹುದುಗಿಸಿ ಇಡಲಾಗಿದೆʼʼ ಎಂದು ಇಮೇಲ್‌ನಲ್ಲಿ ತಿಳಿಸಲಾಗಿದೆ. ಜತೆಗೆ ಬಾಂಬ್ ನಿಷ್ಕ್ರೀಯಗೊಳಿಸಲು 30 ಸಾವಿರ ಡಾಲರ್‌ಗೆ ಬೇಡಿಕೆ ಇಡಲಾಗಿದೆ.
“ಈ ಬಾಂಬ್‌ಗಳು ಕಟ್ಟಡಕ್ಕೆ ಹೆಚ್ಚಿನ ಹಾನಿಯನ್ನುಂಟು ಮಾಡುವುದಿಲ್ಲ. ಆದರೆ ಬಾಂಬ್ ಸ್ಫೋಟಗೊಂಡಾಗ ಅಲ್ಲಿದ್ದವರಿಗೆ ಗಾಯಗಳಾಗುವುದು ಖಚಿತ. ಕೈಕಾಲುಗಳನ್ನು ಕಳೆದುಕೊಳ್ಳುತ್ತಾರೆ” ಎಂದು ಸಂದೇಶದಲ್ಲಿ ಎಚ್ಚರಿಸಲಾಗಿದೆ. ದಿಲ್ಲಿ ಪೊಲೀಸರು ಇಮೇಲ್‌ನ ಐಪಿ ವಿಳಾಸ ಪರಿಶೀಲಿಸಲು ಕ್ರಮ ಕೈಗೊಂಡಿದ್ದಾರೆ. ಬಾಂಬ್ ಬೆದರಿಕೆ ಬಗ್ಗೆ ಬೆಳಗ್ಗೆ 6:15ಕ್ಕೆ ಜಿಡಿ ಗೋಯೆಂಕಾ ಶಾಲೆಯಿಂದ ನಂತರ 7:06ಕ್ಕೆ ಡಿಪಿಎಸ್ ಆರ್‌ಕೆ ಪುರಂನಿಂದ ದಿಲ್ಲಿ ಅಗ್ನಿಶಾಮಕ ಇಲಾಖೆಗೆ ಮಾಹಿತಿ ನೀಡಿಲಾಗಿತ್ತು. ತಕ್ಷಣ ಶ್ವಾನದಳ, ಬಾಂಬ್ ಪತ್ತೆ ತಂಡ ಮತ್ತು ಸ್ಥಳೀಯ ಪೊಲೀಸರು ಸೇರಿದಂತೆ ಅಗ್ನಿಶಾಮಕ ಅಧಿಕಾರಿಗಳು ಶಾಲೆಗಳಿಗೆ ತಲುಪಿ ಶೋಧ ಕಾರ್ಯಾಚರಣೆ ನಡೆಸಿದರು. ಇಲ್ಲಿಯವರೆಗೆ ಅನುಮಾನಾಸ್ಪದವಾಗಿ ಏನೂ ಕಂಡುಬಂದಿಲ್ಲ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಮುಖ್ಯಮಂತ್ರಿ ಅತಿಶಿ ಹೇಳಿದ್ದೇನು?
ಘಟನೆ ಬಗ್ಗೆ ಪ್ರತಿಕ್ರಿಯಿಸಿದ ಮುಖ್ಯಮಂತ್ರಿ ಅತಿಶಿ ಅವರು, ದಿಲ್ಲಿಯಲ್ಲಿ ಕಾನೂನು ಸುವ್ಯವಸ್ಥೆ ಹದಗೆಡಲು ಕೇಂದ್ರ ಸರ್ಕಾರವೇ ಕಾರಣ ಎಂದು ಆರೋಪಿಸಿದ್ದಾರೆ. “ದಿಲ್ಲಿಯಲ್ಲಿ ಪ್ರತಿದಿನ ಸುಲಿಗೆ, ಕೊಲೆ ಮತ್ತು ಗುಂಡಿನ ದಾಳಿಯ ನಂತರ ಇದೀಗ ಶಾಲೆಗಳಿಗೆ ಬಾಂಬ್ ಬೆದರಿಕೆಗಳು ಬರುತ್ತಿವೆ. ದಿಲ್ಲಿಯಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಪರಿಸ್ಥಿತಿ ಹಿಂದೆಂದೂ ಇಷ್ಟು ಹದಗೆಟ್ಟಿರಲಿಲ್ಲ. ದಿಲ್ಲಿಯ ಜನರಿಗೆ ಭದ್ರತೆ ಒದಗಿಸುವ ಜವಾಬ್ದಾರಿಯ ವಿಚಾರದಲ್ಲಿ ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ ವಿಫಲವಾಗಿದೆ” ಎಂದು ಅತಿಶಿ ಎಕ್ಸ್‌ನಲ್ಲಿ ಬರೆದುಕೊಂಡಿದ್ದಾರೆ.
ಅಕ್ಟೋಬರ್ ಮೊದಲ ವಾರದಲ್ಲಿ ದಿಲ್ಲಿಯ ರೋಹಿನಿ ಪ್ರಸಾಂತ್ ವಿಹಾರ್‌ನ ಸೆಂಟ್ರಲ್ ರಿಸರ್ವ್ ಪೊಲೀಸ್ ಫೋರ್ಸ್ ಶಾಲೆಯ ಹೊರಗಡೆ ಬಾಂಬ್ ಸ್ಫೋಟವೊಂದು ನಡೆದಿತ್ತು. ಈ ಘಟನೆಯಿಂದ ಶಾಲೆಯ ಗೋಡೆ, ಹತ್ತಿರ ಅಂಗಡಿ ಮತ್ತು ವಾಹನಗಳಿಗೆ ಹಾನಿಯಾಗಿತ್ತು. ಭಾನುವಾರವಾಗಿದ್ದರಿಂದ ಶಾಲೆಯಲ್ಲಿ ಮಕ್ಕಳು ಇಲ್ಲದಿದ್ದರಿಂದ ಹೆಚ್ಚಿನ ಅನಾಹುತ ತಪ್ಪಿತ್ತು. ಅಲ್ಲದೆ ಕೆಲವು ದಿನಗಳ ಹಿಂದೆ ದಿಲ್ಲಿಯ 2 ಮತ್ತು ಹೈದರಾಬಾದ್‌ನ 1 ಸೇರಿದಂತೆ ರಾಷ್ಟ್ರದಾದ್ಯಂತ ಹಲವು ಸಿಆರ್‌ಪಿಎಫ್ ಶಾಲೆಗಳಿಗೆ ಇಮೇಲ್ ಮೂಲಕ ಬಾಂಬ್ ಬೆದರಿಕೆ ಸಂದೇಶ ಬಂದಿತ್ತು.
ಈ ಸುದ್ದಿಯನ್ನೂ ಓದಿ: Hoax Bomb Threat : ವಿಮಾನಗಳಿಗೆ ಹುಸಿ ಬಾಂಬ್ ಬೆದರಿಕೆ; ನಾಗ್ಪುರ ಮೂಲದ ವ್ಯಕ್ತಿಯ ಪತ್ತೆ ಹಚ್ಚಿದ ಪೊಲೀಸರು