Sunday, 11th May 2025

ಭಾರಿ ಮಳೆ: ಕೇರಳದ ದಕ್ಷಿಣ, ಮಧ್ಯಭಾಗದ ಜಿಲ್ಲೆಗಳಲ್ಲಿ ‘ರೆಡ್‌ ಅಲರ್ಟ್‌’

ತಿರುವನಂತಪುರಂ: ಕೇರಳದ ದಕ್ಷಿಣ ಹಾಗೂ ಮಧ್ಯಭಾಗದ ಜಿಲ್ಲೆಗಳಲ್ಲಿ ಶನಿವಾರ ಭಾರಿ ಮಳೆಯಾಗಿ, ನದಿಗಳು ಉಕ್ಕಿ ಹರಿಯುತ್ತಿವೆ. ಮುಂದಿನ ಇಪ್ಪತ್ನಾಲ್ಕು ಗಂಟೆಗಳಲ್ಲಿ ಭಾರಿ ಮಳೆಯಾಗುವ ಮುನ್ಸೂಚನೆಯಿರುವ ಕಾರಣ ಹವಾಮಾನ ತಜ್ಞರು ರಾಜ್ಯದ ಐದು ಜಿಲ್ಲೆಗಳಲ್ಲಿ ‘ರೆಡ್‌ ಅಲರ್ಟ್‌’ ಘೋಷಿಸಿದ್ದಾರೆ.

ಪತ್ತನಂತಿಟ್ಟ, ಕೊಟ್ಟಾಯಂ, ಎರ್ನಾಕುಲಂ, ಇಡುಕ್ಕಿ ಮತ್ತು ತ್ರಿಶೂರ್ ಜಿಲ್ಲೆಗಳಲ್ಲಿ ‘ರೆಡ್ ಅಲರ್ಟ್’ ಘೋಷಿಸಲಾಗಿದೆ. ತಿರುವನಂತಪುರ, ಕೊಲ್ಲಂ, ಅಲಪ್ಪುಳ, ಪಾಲಕ್ಕಾಡ್, ಮಲಪ್ಪುರಂ, ಕೋಯಿಕ್ಕೋಡ್ ಮತ್ತು ವಯನಾಡ್ ಜಿಲ್ಲೆಗಳಲ್ಲಿ ಭಾರಿ ಪ್ರಮಾಣದಲ್ಲಿ ಮಳೆಯಾಗುವ ಮುನ್ಸೂಚನೆ ಇರುವ ಕಾರಣ, ಆ ಜಿಲ್ಲೆಗಳಲ್ಲಿ ‘ಆರೆಂಜ್ ಅಲರ್ಟ್’ ಘೋಷಿಸಲಾಗಿದೆ.

ಮುಂದಿನ ಇಪ್ಪತ್ನಾಲ್ಕು ಗಂಟೆಗಳಲ್ಲಿ ರಾಜ್ಯದ ವಿವಿಧೆಡೆ ವ್ಯಾಪಕ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಎಚ್ಚರಿಸಿದೆ. ಸಾರ್ವಜನಿಕರು ಜಾಗರೂಕತೆಯಿಂದ ಇರುವಂತೆ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರು ಫೇಸ್‌ಬುಕ್‌ ಪೋಸ್ಟ್‌ನಲ್ಲಿ ಮನವಿ ಮಾಡಿದ್ದಾರೆ.

ಭಾರಿ ಮಳೆಯಾಗುತ್ತಿರುವ ಕಾರಣ ನದಿಗಳಲ್ಲಿ ನೀರಿನ ಮಟ್ಟ ಹೆಚ್ಚಾಗುವ ಸಾಧ್ಯತೆ ಇದೆ. ಕೆಲವು ಅಣೆಕಟ್ಟು ಗಳು ತುಂಬಿ ಹರಿಯುವ ಸಾಧ್ಯತೆ ಇದೆ. ಈ ಹಿನ್ನೆಲೆಯಲ್ಲಿ ಜಲಾಶಯದ ಆಸುಪಾಸಿನಲ್ಲಿ ವಾಸಿಸುತ್ತಿರುವವರು ಅಧಿಕಾರಿಗಳು ನೀಡುವ ಸೂಚನೆಯನ್ನು ಅನುಸರಿಸಲು ಸಿದ್ಧರಿರುವಂತೆ ಮುಖ್ಯಮಂತ್ರಿ ತಿಳಿಸಿದ್ದಾರೆ.

ತಿರುವನಂತಪುರ ಜಿಲ್ಲೆಯ ಚೆಂಪಕಮಂಗಲದಲ್ಲಿ ಶುಕ್ರವಾರ ರಾತ್ರಿ ಸುರಿದ ಭಾರಿ ಮಳೆಗೆ, ಮನೆಯೊಂದರ ಗೋಡೆ ಕುಸಿದಿದೆ. ಮನೆಯೊಳಗಿದ್ದ ಇಬ್ಬರು ಮಕ್ಕಳು ಪವಾಡಸದೃಶವಾಗಿ ಪಾರಾಗಿದ್ದಾರೆ. ಮಕ್ಕಳು ಮಲಗಿದ್ದ ಹಾಸಿಗೆಯ ಮೇಲೆ ಗೋಡೆ ಕುಸಿದಿದ್ದರೂ, ಮಕ್ಕಳಿಗೆ ಯಾವುದೇ ತೊಂದರೆಯಾಗಿಲ್ಲ. ಎಂದು ಕುಟುಂಬದ ಮೂಲಗಳು ತಿಳಿಸಿವೆ.

Leave a Reply

Your email address will not be published. Required fields are marked *