ಲಖನೌ: 14 ವರ್ಷದ ಶಾಲಾ ಬಾಲಕನೊಬ್ಬ ಶಾಲೆಯಲ್ಲಿ ಆಯೋಜಿಸಿದ್ದ ಕ್ರೀಡೋತ್ಸವಕ್ಕೆ ಅಭ್ಯಾಸ ಮಾಡುತ್ತಿದ್ದ ವೇಳೆ ಹೃದಯಾಘಾತದಿಂದ (Heart Attack) ಸಾವನ್ನಪ್ಪಿರುವ ಘಟನೆ ವರದಿಯಾಗಿದೆ. ಈ ಹೃದಯವಿದ್ರಾವಕ ಘಟನೆ ಉತ್ತರ ಪ್ರದೇಶದ(Uttar Pradesh) ಅಲಿಗಢ ಜಿಲ್ಲೆಯಲ್ಲಿ ನಡೆದಿದ್ದು, ಸಿರೌಲಿ ಗ್ರಾಮದ ಬಾಲಕ ಮೋಹಿತ್ ಚೌಧರಿ ಶುಕ್ರವಾರದಂದು (ನ.29) ತನ್ನ ಶಾಲೆಯಲ್ಲಿ ಮುಂದಿನ ವಾರ ನಡೆಯಲಿದ್ದ ಕ್ರೀಡಾ ಸ್ಪರ್ಧೆಗಾಗಿ ಓಟದ ಅಭ್ಯಾಸ ಮಾಡುತ್ತಿದ್ದಾಗ ಹೃದಯಾಘಾತ ಸಂಭವಿಸಿದೆ ಎಂದು ತಿಳಿದು ಬಂದಿದೆ.
ಬಾಲಕನ ಶಾಲೆಯಲ್ಲಿ ಡಿಸೆಂಬರ್ 7 ರಂದು ಕ್ರೀಡಾ ಸ್ಪರ್ಧೆಯನ್ನು (Sports Event) ಆಯೋಜಿಸಲಾಗಿತ್ತು. ಓಟದ(Running) ಸ್ಪರ್ಧೆಯಲ್ಲಿ ಗೆಲ್ಲಲೇಬೇಕು ಎಂಬ ಹುಮ್ಮಸ್ಸಿನಿಂದ ಮೋಹಿತ್ ಚೌಧರಿ ಗೆಳೆಯರೊಂದಿಗೆ ಅಭ್ಯಾಸ ಮಾಡಿದ್ದಾನೆ. ಬಾಲಕ ಆರಂಭದಲ್ಲಿ ತನ್ನ ಸ್ನೇಹಿತರೊಂದಿಗೆ ಎರಡು ಸುತ್ತು ಓಡಿದ್ದು, ನಂತರ ಕುಸಿದು ಬಿದ್ದಿದ್ದಾನೆ ಎನ್ನಲಾಗಿದೆ. ಬಾಲಕನನ್ನು ಕೂಡಲೇ ಆಸ್ಪತ್ರೆಗೆ ಕೊಂಡೊಯ್ದರೂ ಕುಸಿದು ಬಿದ್ದ ಕೆಲವೇ ಕ್ಷಣಗಳಲ್ಲಿ ಮೃತಪಟ್ಟಿರುವುದಾಗಿ ವೈದ್ಯರು ತಿಳಿಸಿದ್ದಾರೆ. ಇನ್ನು ಕೆಲವೇ ಕೆಲವು ತಿಂಗಳ ಹಿಂದೆ ಬಾಲಕನ ತಂದೆ ರಸ್ತೆ ಅಪಘಾತದಲ್ಲಿ(Accident) ಸಾವನ್ನಪ್ಪಿದ್ದರು ಎಂದು ಅಧಿಕಾರಿಗಳು ಹೇಳಿದ್ದಾರೆ.
ಕಳೆದ ತಿಂಗಳು ಆಲಿಘಡದಲ್ಲಿ ಇಂತಹದ್ದೇ ಒಂದು ಘಟನೆ ವರದಿಯಾಗಿತ್ತು. ಮಮತಾ ಎಂಬ 20 ವರ್ಷದ ಹುಡುಗಿ ಕೂಡ ಕಳೆದ ತಿಂಗಳು ಅಲಿಘರ್‌ನ ಅರ್ರಾನಾ ಗ್ರಾಮದಲ್ಲಿ ಓಡುತ್ತಿರುವಾಗ ಹೃದಯಾಘಾತದಿಂದ ಸಾವನ್ನಪ್ಪಿದ್ದಳು. ಅಲಿಗಢದಲ್ಲಿ ಕಳೆದ 25 ದಿನಗಳಲ್ಲಿ ಕನಿಷ್ಠ ಮೂರು ಮಂದಿ ಹೃದಯಾಘಾತಕ್ಕೆ ಒಳಗಾಗಿರುವ ಕುರಿತು ವರದಿಯಾಗಿದೆ.
ಮೂರು ತಿಂಗಳ ಹಿಂದೆ ಉತ್ತರ ಪ್ರದೇಶದ ಲಕ್ನೋದಲ್ಲಿಯೂ 9 ವರ್ಷದ ವಿದ್ಯಾರ್ಥಿನಿಯೊಬ್ಬಳು ತನ್ನ ಶಾಲೆಯಲ್ಲಿ ಆಟವಾಡುತ್ತಿದ್ದಾಗ ಹೃದಯಾಘಾತದಿಂದ ಸಾವನ್ನಪ್ಪಿದ್ದಳು. ಸಂತ್ರಸ್ತೆಯ ಶಾಲೆಯ ಪ್ರಕಾರ, ವಿಶ್ವವಿದ್ಯಾನಿಲಯದ ಆಟದ ಮೈದಾನದಲ್ಲಿ ಆಟವಾಡುತ್ತಿದ್ದಾಗ ಬಾಲಕಿ ಪ್ರಜ್ಞಾಹೀನಳಾಗಿದ್ದಳು, ನಂತರ ಆಕೆಯನ್ನು ಆಸ್ಪತ್ರೆಗೆ ಸಾಗಿಸಲಾಯಿತು. ಆದರೆ ದಾರಿ ಮಧ್ಯೆಯೇ ಅವಳು ಸತ್ತಿರುವುದು ತಿಳಿದು ಬಂದಿತ್ತು.
ಟಿವಿ ನೋಡುತ್ತಿದ್ದ ವೇಳೆ ಬಾಲಕನಿಗೆ ಹೃದಯಾಘಾತ
ಸೆಪ್ಟೆಂಬರ್ ತಿಂಗಳಿನಲ್ಲಿ, 11 ವರ್ಷದ ಬಾಲಕನೋರ್ವ ಹೃದಯಾಘಾತಕ್ಕೆ ಬಲಿಯಾದ ಘಟನೆ ಹಾಸನ ಜಿಲ್ಲೆ ಆಲೂರು ತಾಲ್ಲೂಕಿನ ಚನ್ನಾಪುರ ಗ್ರಾಮದಲ್ಲಿ ನಡೆದಿತ್ತು. ಸಚಿನ್(Sachin) ಎಂಬ ಬಾಲಕ ಗ್ರಾಮದ ಕಾವ್ಯಶ್ರೀ ಎಂಬುವವರ ಮಗ. ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಎಂಟನೇ ತರಗತಿ ಓದುತ್ತಿದ್ದ. ಸಂಜೆ ಶಾಲೆ ಮುಗಿಸಿ ಬಂದಿದ್ದ ಸಚಿನ್ ಗೆ ಇದ್ದಕ್ಕಿದ್ದಂತೆ ಎದೆನೋವು ಕಾಣಿಸಿಕೊಂಡಿದೆ. ಹೀಗಾಗಿ ಮಾರನೇ ದಿನ ಶಾಲೆಗೆ ಹೋಗದೆ ಬಾಲಕ ಮನೆಯಲ್ಲಿ ಟಿವಿ ನೋಡುತ್ತಿದ್ದನು. ಈ ವೇಳೆ ಏಕಾಏಕಿ ಸಚಿನ್‌ಗೆ ಮತ್ತೆ ಎದೆನೋವು ಕಾಣಿಸಿಕೊಂಡಿದೆ. ಕೆಲವೇ ನಿಮಿಷಗಳಲ್ಲಿ ಕೊನೆಯುಸಿರೆಳೆದಿದ್ದ.
ಸ್ವಲ್ಪ ಸಮಯದ ನಂತರ ಸಚಿನ್‌ನನ್ನು ಮಾತನಾಡಿಸಲು ಮನೆಯವರು ಬಂದಿದ್ದಾರೆ. ಆದರೆ ಸಚಿನ್ ಮಾತನಾಡದೆ ಇರುವುದನ್ನ ಗಮನಿಸಿ ತಕ್ಷಣವೇ ಆಲೂರು ಸರ್ಕಾರಿ ಆಸ್ಪತ್ರೆಗೆ ಪೋಷಕರು ಕರೆದೊಯ್ದಿದ್ದಾರೆ. ಆಸ್ಪತ್ರೆಯಲ್ಲಿ ಬಾಲಕನ್ನು ಪರಿಶೀಲಿಸಿದ ವೈದ್ಯರು ಅವನು ಮೃತಪಟ್ಟಿರುವುದಾಗಿ ದೃಢಪಡಿಸಿದ್ದರು.
ಈ ಸುದ್ದಿಯನ್ನೂ ಓದಿ: ಮ್ಯಾಗಿ ಸೇವಿಸಿ ಬಾಲಕ ಸಾವು