Thursday, 15th May 2025

ಕೆನಡಾ ಪ್ರಜೆಯೊಬ್ಬನ ಹಲ್ಲೆ ನಡೆಸಿ ಹತ್ಯೆ

ಗುರುದಾಸ್‌ಪುರ: ದೊಡ್ಡ ಸದ್ದಿನ ಸಂಗೀತ ಪ್ರಸಾರ ಮಾಡದಂತೆ ಆಕ್ಷೇಪಿಸಿದ ಕೆನಡಾ ಪ್ರಜೆಯೊಬ್ಬನ ಮೇಲೆ ಗುಂಪೊಂದು ಹಲ್ಲೆ ನಡೆಸಿ ಹತ್ಯೆಗೈದಿದೆ.

ಪಂಜಾಬ್‌ನ ರೂಪನಗರ ಜಿಲ್ಲೆಯ ಆನಂದಪುರ ಸಾಹಿಬ್ ಪ್ರದೇಶದಲ್ಲಿ ಆಘಾತಕಾರಿ ಘಟನೆ ನಡೆದಿದೆ.

ಸಂತ್ರಸ್ತನನ್ನು ಕೆನಡಾದ ಖಾಯಂ ನಾಗರಿಕತ್ವ ಹೊಂದಿರುವ, ಭಾರತಕ್ಕೆ ಮರಳಿದ್ದ 24 ವರ್ಷ ವಯಸ್ಸಿನ ಪ್ರದೀಪ್ ಸಿಂಗ್ ಎಂದು ಗುರುತಿಸಲಾಗಿದೆ. ಗುರುದಾಸ್‌ಪುರ ಜಿಲ್ಲೆಯ ಘಾಝಿಕೋಟ್ ಗ್ರಾಮದಲ್ಲಿ ಜನಿಸಿದ್ದ ಆತ ಬಲ್ವಿಂದರ್ ಕೌರ್ ಎಂಬವವರ ಏಕೈಕ ಪುತ್ರ ಎಂದು ಹೇಳಲಾಗಿದೆ.

ಪ್ರತಿಕ್ರಿಯಿಸಿರುವ ಬಲ್ವಿಂದರ್ ಕೌರ್, ಪ್ರದೀಪ್ ಹಾಗೂ ಆತನ ತಂಗಿ ಕೆನಡಾದಲ್ಲಿ ವಾಸಿಸುತ್ತಿದ್ದು, ಹಚ್ಚೆ ಹಾಕುವ ಕುರಿತು ವ್ಯಾಸಂಗ ಮಾಡುತ್ತಿದ್ದರು ಎಂದು ತಿಳಿಸಿದ್ದಾರೆ.

ಮೊಹಾಲಿಯ ವಿಶೇಷ ಪೊಲೀಸ್ ವರಿಷ್ಠಾಧಿಕಾರಿ, “ಘಟನೆ ಸಂದರ್ಭದಲ್ಲಿ ಮೃತ ಸಂತ್ರಸ್ತನು ನಿಹಾಂಗ್ ಗುಂಪಿನ ಸಮವಸ್ತ್ರ ಧರಿಸಿದ್ದ. ಈವರೆಗೆ ಆತನಿಗೆ ನಿಹಾಂಗ್ ಗುಂಪಿನೊಂದಿಗೆ ಸಂಪರ್ಕವಿದ್ದ ಬಗ್ಗೆ ಯಾವುದೇ ಸುಳಿವು ದೊರೆತಿಲ್ಲ. ನಾವು ಘಟನೆಯ ಎಲ್ಲ ವೈರಲ್ ವಿಡಿಯೊಗಳನ್ನು ಪರಿಶೀಲಿಸುತ್ತಿದ್ದೇವೆ. ಯಾವುದೇ ವದಂತಿಯನ್ನು ನಂಬದಂತೆ ಜನರಲ್ಲಿ ನಾವು ಮನವಿ ಮಾಡುತ್ತೇವೆ. ಹೆಚ್ಚಿನ ತನಿಖೆ ಪ್ರಗತಿಯಲ್ಲಿದೆ” ಎಂದು ತಿಳಿಸಿದ್ದಾರೆ.