Wednesday, 14th May 2025

ಗುಜರಾತ್​ನಲ್ಲಿ ಸ್ಥಳೀಯ ಸಂಸ್ಥೆ ಚುನಾವಣೆ: 20 ಕ್ಷೇತ್ರಗಳಲ್ಲಿ ಬಿಜೆಪಿ ಭರ್ಜರಿ ಮುನ್ನಡೆ

ಅಹಮದಾಬಾದ್‌: ಗುಜರಾತ್​ನಲ್ಲಿ ನಡೆದ ಸ್ಥಳೀಯ ಸಂಸ್ಥೆ ಚುನಾವಣೆಯ ಮತಎಣಿಕೆ ಆರಂಭವಾಗಿದೆ. ಎಲ್ಲ ಕ್ಷೇತ್ರಗಳಲ್ಲಿಯೂ ಎದುರಾಳಿ ಕಾಂಗ್ರೆಸ್​ ವಿರುದ್ಧ ಬಿಜೆಪಿ ಭರ್ಜರಿ ಮುನ್ನಡೆ ಸಾಧಿಸಿ ಉತ್ತಮ ಆರಂಭ ಪಡೆದಿದೆ.

ಪುರಸಭೆ, ಜಿಲ್ಲಾ ಮತ್ತು ತಾಲೂಕು ಪಂಚಾಯಿತಿ ಚುನಾವಣೆಯಲ್ಲಿ ಬಿಜೆಪಿ ಮೇಲುಗೈ ಸಾಧಿಸಿದೆ. ಮತಎಣಿಕೆ ನಡೆಯುತ್ತಿದ್ದು ಒಟ್ಟು 81 ಪುರಸಭೆ ಸ್ಥಾನಗಳಲ್ಲಿ 54ರಲ್ಲಿ ಬಿಜೆಪಿ ಮುನ್ನಡೆ ಸಾಧಿಸಿದೆ. ಉಳಿದಂತೆ, ಕಾಂಗ್ರೆಸ್​ 2 ಮತ್ತು ಕೇಜ್ರಿವಾಲ್​ ಅವರ ಆಮ್​ ಆದ್ಮಿ ಪಕ್ಷ ಒಂದರಲ್ಲಿ ಖಾತೆ ತೆರೆದಿದೆ.

31 ಜಿಲ್ಲಾ ಪಂಚಾಯತ್​ ಸ್ಥಾನಗಳಲ್ಲಿ 12ರಲ್ಲಿ ಬಿಜೆಪಿ ಮುನ್ನಡೆ ಕಾಯ್ದುಕೊಂಡಿದೆ. 231 ತಾಲೂಕು ಪಂಚಾಯಿತಿಗಳಲ್ಲಿ 51ರಲ್ಲಿ ಬಿಜೆಪಿ ಮುನ್ನಡೆ ಸಾಧಿಸಿದ್ದು, ಕಾಂಗ್ರೆಸ್​ ಕೇವಲ 7ರಲ್ಲಿ ಖಾತೆ ತೆರೆದಿದೆ. ಒಟ್ಟು 8,474 ಸ್ಥಾನಗಳಲ್ಲಿ, 8,235 ಸ್ಥಾನಗಳಲ್ಲಿ ಚುನಾ ವಣೆ ನಡೆದರೆ, ಉಳಿದ ಸ್ಥಾನಗಳು ಅವಿರೋಧವಾಗಿ ನಡೆದವು.

ಕಳೆದ ವಾರ ಪಾಲಿಕೆಗಳಾದ ಅಹಮದಾಬಾದ್, ಸೂರತ್, ರಾಜ್‌ಕೋಟ್, ವಡೋದರಾ, ಭಾವನಗರ ಮತ್ತು ಜಾಮ್‌ನಗರಗಳಲ್ಲಿ 576 ಪಾಲಿಕೆ ಸ್ಥಾನಗಳಲ್ಲಿ 483 ಸ್ಥಾನಗಳನ್ನು ಗೆಲ್ಲುವ ಮೂಲಕ ಬಿಜೆಪಿ ತನ್ನ ಸಾಮರ್ಥ್ಯ ಪ್ರದರ್ಶಿಸಿದೆ.

ಗುಜರಾತ್​ನ 81 ಪುರಸಭೆ, 31 ಜಿಲ್ಲಾ ಪಂಚಾಯತ್‌ಗಳು ಮತ್ತು 231 ತಾಲೂಕು ಪಂಚಾಯತ್‌ಗಳಿಗೆ ನಡೆದ ಚುನಾವಣಾ ಫಲಿತಾಂಶ ಹೊರಬೀಳಲಿದ್ದು, ಮತ ಎಣಿಕೆ ಪ್ರಕ್ರಿಯೆ ಆರಂಭವಾಗಿದೆ.

ಇತ್ತೀಚಿನ ಅಂಕಿ-ಸಂಖ್ಯೆಗಳ ಪ್ರಕಾರ, ಮತದಾನ ನಡೆದ ಒಟ್ಟು 8,235 ಕ್ಷೇತ್ರಗಳ ಪೈಕಿ 318 ಮತಗಳು ಎಣಿಕೆಯಾಗಿವೆ. ಬಿಜೆಪಿ 308, ಕಾಂಗ್ರೆಸ್ 9 ಮತ್ತು ಎಎಪಿ 1 ಸ್ಥಾನ ಗಳಿಸಿವೆ. 31 ಜಿಲ್ಲಾ ಪಂಚಾಯಿತಿಗಳ ಪೈಕಿ 20ರಲ್ಲಿ ಬಿಜೆಪಿ ಮುನ್ನಡೆ ಕಾಯ್ದು ಕೊಂಡಿದೆ.

ಕಾಂಗ್ರೆಸ್ ನ ಹಿರಿಯ ಶಾಸಕ ಅಶ್ವಿನ್ ಕೊತ್ವಾಲ್ ಅವರ ಪುತ್ರ ಯಶ್ ಕೊತ್ವಾಲ್ ಅವರು ಸಬರಕಾಂತ ಕ್ಷೇತ್ರದಲ್ಲಿ ಸೋಲು ಕಂಡಿದ್ದಾರೆ. ಫೆ.28 ರಂದು ಪುರಸಭೆಗಳ 680 ವಾರ್ಡ್‌, ಜಿಲ್ಲಾ ಪಂಚಾಯತ್‌ಗಳ 980 ಹಾಗೂ ತಾಲೂಕು ಪಂಚಾಯತ್‌ಗಳ 8,474 ಸ್ಥಾನಗಳಿಗೆ ಚುನಾವಣೆ ನಡೆದಿತ್ತು. ಒಟ್ಟು 8,235 ಸ್ಥಾನಗಳಿಗೆ ಬಿಜೆಪಿ 8,161 ಅಭ್ಯರ್ಥಿಗಳನ್ನು, ಕಾಂಗ್ರೆಸ್​ 7,778 ಹಾಗೂ ಆಮ್​ ಆದ್ಮಿ 2,090 ಅಭ್ಯರ್ಥಿಗಳನ್ನು ಕಣಕ್ಕಿಳಿಸಿತ್ತು.

ಪುರಸಭೆಯಲ್ಲಿ ಶೇ.58.82, ಜಿಲ್ಲಾ ಪಂಚಾಯತ್​ನಲ್ಲಿ ಶೇ.65.80 ಹಾಗೂ ತಾಲೂಕು ಪಂಚಾಯತ್​ನಲ್ಲಿ ಶೇ.66.60 ರಷ್ಟು ಮತದಾನವಾಗಿತ್ತು.

Leave a Reply

Your email address will not be published. Required fields are marked *