Saturday, 10th May 2025

Gen. Upendra Dwivedi: ಕಳೆದ ವರ್ಷ ಹತರಾದ ಉಗ್ರರಲ್ಲಿ ಶೇ.60ರಷ್ಟು ಪಾಕಿಸ್ತಾನಿಗಳು! ಸೇನಾ ಮುಖ್ಯಸ್ಥರಿಂದ ಸ್ಫೋಟಕ ಮಾಹಿತಿ

Gen Upendra Dwivedi

ಶ್ರೀನಗರ : ಇತ್ತೀಚೆಗೆ ಜಮ್ಮು ಕಾಶ್ಮೀರದಲ್ಲಿ (Jammu & Kashmir) ಉಗ್ರರ ಚಟುವಟಿಕೆಗಳು ಜೋರಾಗಿದ್ದು, ಭದ್ರತಾ ಪಡೆಗಳು ಉಗ್ರರನ್ನು ಮಟ್ಟ ಹಾಕುವಲ್ಲಿ ನಿರಂತರವಾಗಿ ಕಾರ್ಯಾಚರಣೆ ನಡೆಸುತ್ತಿದೆ. ಸದ್ಯದ ಕಾಶ್ಮೀರದ ಹಾಗೂ ಎಲ್‌ಒಸಿಯ (LOC) ಪರಿಸ್ಥಿತಿಯ ಬಗ್ಗೆ ಸೇನಾ ಮುಖ್ಯಸ್ಥ ಜನರಲ್ ಉಪೇಂದ್ರ ದ್ವಿವೇದಿ (Gen. Upendra Dwivedi) ಅವರು ಮಾತನಾಡಿದ್ದಾರೆ. ಕಳೆದ ವರ್ಷ ಜಮ್ಮು ಮತ್ತು ಕಾಶ್ಮೀರದಲ್ಲಿ ಹತರಾದ ಶೇಕಡಾ 60 ರಷ್ಟು ಭಯೋತ್ಪಾದಕರು ಪಾಕಿಸ್ತಾನ ಮೂಲದವರು ಎಂಬ ಆತಂಕಕಾರಿ ವಿಷಯವನ್ನು ಬಹಿರಂಗಗೊಳಿಸಿದ್ದಾರೆ.

ಕಾಶ್ಮೀರದ ಬಗ್ಗೆ ಮಾಧ್ಯಮದವರೊಂದಿಗೆ ಮಾತನಾಡಿದ ಜನರಲ್‌ ದ್ವಿವೇದಿ ಜಮ್ಮು ಮತ್ತು ಕಾಶ್ಮೀರದಲ್ಲಿ ಪರಿಸ್ಥಿತಿ ನಿಯಂತ್ರಣದಲ್ಲಿದೆ ಆದಾಗ್ಯೂ, ಭಯೋತ್ಪಾದಕ ಚಟುವಟಿಕೆಗಳು ಕಂಡು ಬರುತ್ತಿವೆ. ಜಮ್ಮು & ಕಾಶ್ಮೀರದಲ್ಲಿ ಉಳಿದಿರುವ ಸುಮಾರು 80 ಪ್ರತಿಶತದಷ್ಟು ಭಯೋತ್ಪಾದಕರು ಪಾಕಿಸ್ತಾನಿಗಳು ಎಂದು ಅವರು ಹೇಳಿದರು. ಮಾದಕವಸ್ತುಗಳನ್ನು ಕಳ್ಳಸಾಗಣೆ ಮಾಡುವ ಡ್ರೋನ್ ಪ್ರಯತ್ನಗಳ ಜೊತೆಗೆ ಇಂಟರ್ನ್ಯಾಷನಲ್ ಬಾರ್ಡರ್ (ಐಬಿ) ವಲಯದಿಂದಲೂ ಒಳನುಸುಳುವಿಕೆಗೆ ಪ್ರಯತ್ನಿಸಲಾಗುತ್ತದೆ. ಇತ್ತೀಚಿನ ತಿಂಗಳುಗಳಲ್ಲಿ ಉತ್ತರ ಕಾಶ್ಮೀರ ಮತ್ತು ದೋಡಾ-ಕಿಶ್ತ್ವಾರ್ ಬೆಲ್ಟ್‌ನಲ್ಲಿ ಭಯೋತ್ಪಾದಕ ಚಟುವಟಿಕೆಗಳು ಹೆಚ್ಚಿವೆ ಎಂದು ಅವರು ಹೇಳಿದ್ದಾರೆ.

ಸೇನಾ ಪಡೆಗಳ ನಿರಂತರ ಪ್ರಯತ್ನದಿಂದಾಗಿ ಕಾಶ್ಮೀರದಲ್ಲಿ ಶಾಂತಿ ನೆಲೆಸಿದೆ. ಈ ಬಾರಿ ನಡೆದ ಚುನಾವಣೆಗಳೆಲ್ಲವೂ ಸುಸೂತ್ರವಾಗಿ ನೆರವೇರಿದೆ. ಅಮರನಾಥ ಯಾತ್ರೆ ಇನ್ನು ಪ್ರಾರಂಭವಾಗಲಿದ್ದು, ಈ ಬಾರಿ 5 ಲಕ್ಷ ಜನರ ನಿರೀಕ್ಷೆ ಇದೆ. ಯಾವುದೇ ರೀತಿಯ ಅಹಿತಕಾರಿ ಘಟನೆಗಳು ನಡೆಯದಂತೆ ಜಾಗೃತೆ ವಹಿಸಲಾಗಿವುದು ಎಂಬ ಭರವಸೆಯನ್ನು ಅವರು ನೀಡಿದ್ದಾರೆ.

LAC ಪರಿಸ್ಥಿತಿ

ಲಡಾಖ್‌ನಲ್ಲಿ ಚೀನಾದೊಂದಿಗಿನ ವಾಸ್ತವಿಕ ನಿಯಂತ್ರಣ ರೇಖೆಯಲ್ಲಿ (ಎಲ್‌ಎಸಿ) ಜನರಲ್ ದ್ವಿವೇದಿ ಅವರು ಪರಿಸ್ಥಿತಿಯನ್ನು “ಸೂಕ್ಷ್ಮ ಆದರೆ ಸ್ಥಿರವಾಗಿದೆ ಎಂದು ವಿವರಿಸಿದರು. ಪೂರ್ವ ಲಡಾಖ್‌ನ ಡೆಪ್ಸಾಂಗ್ ಮತ್ತು ಡೆಮ್‌ಚೋಕ್‌ ಪ್ರದೇಶಗಳಲ್ಲಿ ಗಸ್ತು ತಿರುಗುವುದನ್ನು ಪ್ರಾರಂಭಿಸಲಾಗಿದೆ ಎಂಬ ಮಾಹಿತಿಯನ್ನು ನೀಡಿದ್ದಾರೆ. ಗಡಿಯ ಮೂಲಸೌಕರ್ಯ ಮತ್ತು ಸಾಮರ್ಥ್ಯದ ಅಭಿವೃದ್ಧಿಯನ್ನು ಹೆಚ್ಚಿಸಲು ಸೇನೆಯು ಗಮನಹರಿಸುತ್ತಿದೆ ಎಂದು ಅವರು ಹೇಳಿದರು. ನಮ್ಮ ನಿಯೋಜನೆಯು ಸಮತೋಲಿತ ಮತ್ತು ದೃಢವಾಗಿದೆ, ನಾವು ಯಾವುದೇ ಪರಿಸ್ಥಿತಿಯನ್ನು ನಿಭಾಯಿಸಲು ಸಮರ್ಥರಾಗಿದ್ದೇವೆ” ಎಂದು ಅವರು ಹೇಳಿದರು. ಕೆಳ ಹಂತದ ಸಮಸ್ಯೆಗಳನ್ನು ಪರಿಹರಿಸಲು ಕಾರ್ಪ್ಸ್ ಕಮಾಂಡರ್‌ಗಳಿಗೆ ಅಧಿಕಾರ ನೀಡಲಾಗಿದೆ, ಆದರೆ ಚೀನಾದೊಂದಿಗಿನ ಗಡಿ ಸಮಸ್ಯೆಯನ್ನು ಪರಿಹರಿಸಲು “ಬಲವಾದ ಕಾರ್ಯತಂತ್ರದ ತಾಳ್ಮೆ ಅಗತ್ಯವಿದೆ ಎಂದು ಜನರಲ್ ದ್ವಿವೇದಿ ಹೇಳಿದ್ದಾರೆ.

ಮಣಿಪುರ ಹಿಂಸಾಚಾರ

ಮಣಿಪುರದಲ್ಲಿ ನಡೆಯುತ್ತಿರುವ ಹಿಂಸಾಚಾರವನ್ನು ಸೇನಾ ಮುಖ್ಯಸ್ಥರು ಒಪ್ಪಿಕೊಂಡಿದ್ದಾರೆ. ಭದ್ರತಾ ಪಡೆಗಳು ಮತ್ತು ಸರ್ಕಾರ ಪರಿಸ್ಥಿತಿಯನ್ನು ಹತೋಟಿಗೆ ತರಲು ಪ್ರಯತ್ನಿಸುತ್ತಿವೆ ಎಂದು ಅವರು ತಿಳಿಸಿದ್ದಾರೆ. ಇಂಡೋ-ಮ್ಯಾನ್ಮಾರ್ ಗಡಿಯಲ್ಲಿ ಹೆಚ್ಚಿನ ಸಿಸಿಟಿವಿಗಳನ್ನು ಹಾಕಲಾಗುತ್ತಿದೆ. ಗಡಿಯಲ್ಲಿ ಬೇಲಿ ಹಾಕುವ ಕಾರ್ಯವೂ ಪ್ರಗತಿಯಲ್ಲಿದೆ ಎಂದು ಹೇಳಿದ್ದಾರೆ.

ಈ ಸುದ್ದಿಯನ್ನೂ ಓದಿ : Terrorist Encounter: ಜಮ್ಮು-ಕಾಶ್ಮೀರದಲ್ಲಿ ಭರ್ಜರಿ ಸೇನಾ ಕಾರ್ಯಾಚರಣೆ; 5 ಉಗ್ರರು ಉಡೀಸ್‌

Leave a Reply

Your email address will not be published. Required fields are marked *