Wednesday, 14th May 2025

ರಾಂಚಿಯ ಅಣೆಕಟ್ಟಿನಲ್ಲಿ 8,000 ಮೀನುಗಳ ಸಾವು

ರಾಂಚಿ: ರಾಂಚಿಯ ಅಣೆಕಟ್ಟಿನಲ್ಲಿ 8,000ಕ್ಕೂ ಹೆಚ್ಚು ಮೀನುಗಳು ಸತ್ತಿರುವುದು ಕಂಡುಬಂದಿದ್ದು, ಮೀನುಗಾರಿಕೆ ಇಲಾಖೆ ಘಟನೆಯ ಬಗ್ಗೆ ತನಿಖೆಗೆ ಆದೇಶಿಸಿದೆ.

ಗೆಟಲ್ಸುಡ್ ಅಣೆಕಟ್ಟಿನಲ್ಲಿ ಮೀನು ಸಾಕಣೆಗೆಂದು ಹಾಕಲಾಗಿದ್ದ ನಾಲ್ಕು ಪಂಜರಗಳಲ್ಲಿ 500 ಗ್ರಾಂನಿಂದ 1 ಕೆಜಿ ತೂಕದ ಮೀನುಗಳು ಸತ್ತಿವೆ ಎಂದು ಜಿಲ್ಲಾ ಮೀನುಗಾರಿಕಾ ಅಧಿಕಾರಿ ಅರುಪ್ ಕುಮಾರ್ ಚೌಧರಿ ತಿಳಿಸಿದ್ದಾರೆ.

ತಾನು ಮತ್ತು ತನ್ನ ತಂಡ ಅಣೆಕಟ್ಟಿಗೆ ಭೇಟಿ ನೀಡುತ್ತೇವೆ ಮತ್ತು ಮೀನುಗಳು ಹೇಗೆ ಸತ್ತವು ಎಂಬುದನ್ನು ಕಂಡುಹಿಡಿಯಲು ಪ್ರಯತ್ನಿಸುತ್ತೇವೆ ಎಂದು ಚೌಧರಿ ಹೇಳಿದರು.

‘ಮೀನುಗಳ ಸಾವಿಗೆ ಆಮ್ಲಜನಕದ ಕೊರತೆ, ರೋಗಗಳು ಅಥವಾ ಮಾಲಿನ್ಯದಂತಹ ಹಲವಾರು ಕಾರಣಗಳಿರಬಹುದು. ಆಮ್ಲಜನಕದ ಕೊರತೆ ಅಥವಾ ರೋಗವು ಈ ಮೀನುಗಳ ಸಾವಿಗೆ ಕಾರಣವಾಗಿರಬಹುದು ಎಂಬುದು ನಮ್ಮ ಶಂಕೆ. ಆದಾಗ್ಯೂ, ನಿಖರವಾದ ಕಾರಣ ಏನೆಂಬುದು ತನಿಖೆಯ ನಂತರವೇ ತಿಳಿಯಲಿದೆ. ನಾವು ನಮ್ಮ ತನಿಖೆಯನ್ನು ಮುಗಿಸುತ್ತೇವೆ’ ಎಂದು ಚೌಧರಿ ಹೇಳಿದರು.

ಮೀನುಗಳು ಉಳಿಯಲು ನೀರಿನಲ್ಲಿ ಆಮ್ಲಜನಕದ ಪ್ರಮಾಣವು ಲೀಟರಿಗೆ ಐದು ಮಿಲಿಗ್ರಾಂ ಅಥವಾ ಅದಕ್ಕಿಂತ ಹೆಚ್ಚು ಇರಬೇಕು. ಪ್ರತಿ ಲೀಟರಿಗೆ ಮೂರು ಮಿಲಿಗ್ರಾಂಗಿಂತ ಕಡಿಮೆಯಾದರೆ, ಮೀನುಗಳು ಸಾಯುತ್ತವೆ ಎಂದು ಹೇಳಿದರು.

ಘಟನಾ ಸ್ಥಳದ ಪಕ್ಕದಲ್ಲಿರುವ ಮಹೇಶ್ಪುರ ಪ್ರದೇಶದಲ್ಲಿ ಸುಮಾರು 300 ಮೀನಿನ ಪಂಜರಗಳಿವೆ ಮತ್ತು ಸುಮಾರು ಒಂದೂವರೆ ಟನ್ ಮೀನುಗಳನ್ನು ಸಾಕಲಾಗುತ್ತಿದೆ. ಆದರೆ, ಅವೆಲ್ಲವೂ ಸುರಕ್ಷಿತವಾಗಿವೆ ಎಂದು ಚೌಧರಿ ಹೇಳಿದರು.

Leave a Reply

Your email address will not be published. Required fields are marked *